ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌ಗೆ ಗೌರವ ಕೊಡುವಂತೆ ಸೂಚಿಸಿದ ಅಮಿತ್ ಶಾ: ಸಿಟಿ ರವಿ ಮಾಹಿತಿ
ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ನಾಯಕರಿಗೆ ಗೌರವ ಕೊಡಬೇಕು. ಬಿಜೆಪಿ-ಜೆಡಿಎಸ್ ಮೈತ್ರಿಗೆ ಧಕ್ಕೆ ತರದಂತೆ ನಡೆಸುಕೊಳ್ಳುವಂತೆ ಅಮಿತ್ ಶಾ ಖಡಕ್ ಸೂಚನೆ ಕೊಟ್ಟಿದ್ದಾರೆ.
ಮೈಸೂರು (ಫೆ.11): ಲೋಕಸಭಾ ಚುನಾವಣೆಗೂ ಮುನ್ನ ಚಾಣಕ್ಯ ನೀತಿ ಹೆಣೆಯುವ ಉದ್ದೇಶದಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮೈಸೂರಿನಲ್ಲಿ ಹಳೆ ಮೈಸೂರು ಪ್ರಾಂತ್ಯದ ಬಿಜೆಪಿ ನಾಯಕರೊಂದಿಗೆ ನಡೆಸಿದ ಕೋರ್ ಕಮಿಟಿ ಸಭೆಯಲ್ಲಿ ಜೆಡಿಎಸ್ ನಾಯಕರೊಂದಿಗೆ ಗೌರವದೊಂದಿಗೆ ನಡೆದುಕೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಅನ್ನು ಎಲ್ಲಾ ರೀತಿಯಿಂದಲೂ ನಾವು ಗೌರವದಿಂದ ಕಾಣುತ್ತೇವೆ. ನಮ್ಮ ಮೈತ್ರಿಗೆ ಯಾವುದೇ ಧಕ್ಕೆ ಆಗದಂತೆ ನಾವು ನಡೆದುಕೊಳ್ಳುತ್ತೇವೆ ಎಂದು ಮಾಜಿ ಸಚಿವ ಸಿ.ಟಿ. ರವಿ ಮಾಹಿತಿ ನೀಡಿದರು.
ಮೈಸೂರಿನ ರ‍್ಯಾಡಿಸನ್ ಬ್ಲ್ಯೂ ಹೋಟೆಲ್‍ನಲ್ಲಿ ಅಮಿತ್ ಶಾ ಅವರು ನಡೆಸಿದ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿ.ಟಿ. ರವಿ ಅವರು, ರಾಜ್ಯದ 28 ಲೋಕಸಭೆ ಕ್ಷೇತ್ರಗಳನ್ನು ಗೆಲ್ಲುವ ಕಡೆಗೆ ಸಭೆಯಲ್ಲಿ ಚರ್ಚೆಯಾಗಿದೆ. ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಸಭೆಯಲ್ಲಿ ವಿಸ್ತೃತ ಚರ್ಚೆಯಾಗಿದೆ. ಸಿಎಂ ಸಿದ್ದರಾಮಯ್ಯ ದೆಹಲಿಯಲ್ಲಿ ಪ್ರತಿಭಟನೆ ಮಾಡಿದ್ದು ದುರುದ್ದೇಶ ಹಾಗೂ ಈ ಹಿಂದೆ ಮನ್ ಮೋಹನ್ ಸಿಂಗ್ ಸರ್ಕಾರದಲ್ಲಿ ರಾಜ್ಯಕ್ಕೆ ಬಂದಿರುವ ಅನುದಾನ ಎಷ್ಟು? ಎಂಬ ಬಗ್ಗೆ ಚರ್ಚಿಸಲಾಗಿದೆ. ಮನಮೋಹನ್ ಸಿಂಗ್ ಅವಧಿಯಲ್ಲಿ ರಾಜ್ಯಕ್ಕೆ ಕೇವಲ 1.42 ಲಕ್ಷ ಕೋಟಿ ರೂ. ಮಾತ್ರ ಅನುದಾನ ಬಂದಿದೆ. ಪ್ರಧಾನಿ ಮೋದಿ ಅವರ ಅವಧಿಯಲ್ಲಿ ರಾಜ್ಯಕ್ಕೆ 4.91 ಲಕ್ಷ ಕೋಟಿ ರೂ. ಕೊಟ್ಟಿದ್ದಾರೆ. ಕೇಂದ್ರ ಅನ್ಯಾಯ ಮಾಡ್ತಿದೆ ಅಂತ ಬಿಂಬಿಸಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದರು. ಈ ವಿಷಯ ನಮ್ಮ ಕೋರ್ ಕಮಿಟಿಯಲ್ಲಿ ವಿಸ್ತೃತ ಚರ್ಚೆಯಾಗಿದೆ. ಕೇಂದ್ರದಿಂದ ರಾಜ್ಯಕ್ಕೆ ಬಂದಿರುವ ಅನುದಾನದ ವಸ್ತುಸ್ಥಿತಿ ಜನರ ಮುಂದಿಡಬೇಕು ಎಂದು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.
ಬರ ಪರಿಹಾರಕ್ಕೆ ಮನವಿ ಸಲ್ಲಿಸಿ 5 ತಿಂಗಳಾದ್ರೂ, ಬರಿಗೈಯಲ್ಲಿ ಬಂದ ಅಮಿತ್ ಶಾ; ಸಿಎಂ ಸಿದ್ದರಾಮಯ್ಯ ಟೀಕೆ
ಜೆಡಿಎಸ್ ಅನ್ನು ಎಲ್ಲಾ ರೀತಿಯಿಂದಲೂ ನಾವು ಗೌರವದಿಂದ ಕಾಣುತ್ತೇವೆ. ನಮ್ಮ ಮೈತ್ರಿಗೆ ಯಾವುದೇ ಧಕ್ಕೆ ಆಗದಂತೆ ನಾವು ನಡೆದುಕೊಳ್ಳುತ್ತೇವೆ. ಕಾಂಗ್ರೆಸ್ ದಕ್ಷಿಣ ಭಾರತದ ಸರ್ಕಾರಗಳನ್ನು ರಾಜಕೀಯ ದುರುದ್ದೇಶದಿಂದ ಎತ್ತಿಕಟ್ತಿದ್ದಾರೆ. ಈಗ ಗುತ್ತಿಗೆದಾರ ಕೆಂಪಣ್ಣ ಅವರು ಈಗಲೂ ಮುಂದೆ ಬಂದು ಕಮಿಷನ್ ಆರೋಪ ಮಾಡಿದ್ದಾರೆ. ಅದರೆ, ಈ ಬಗ್ಗೆ ಕಾಂಗ್ರೆಸ್ ನಾಯಕರು ಏನು ಹೇಳುತ್ತಾರೆ? ಲೋಕಸಭೆ ಚುನಾವಣೆಗೆ ರೋಡ್ ಮ್ಯಾಪ್ ರೆಡಿ ಮಾಡಲು ಅಮಿತ್ ಶಾ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.
ಇನ್ನು ಕೋರ್ ಕಮಿಟಿ ಸಭೆಯಲ್ಲಿ 28 ಸ್ಥಾನ ಗೆಲ್ಲಲು ಏನು ಸ್ಟ್ರಾಟಜಿ ಮಾಡಬೇಕು ಅನ್ನೋದು ಕೂಡ ಚರ್ಚೆಯಾಗಿದೆ. ರಾಜ್ಯ ಸರ್ಕಾರದ ವೈಪಲ್ಯ ಮುಚ್ಚಲು ಕೇಂದ್ರದ ಮೇಲೆ ಸುಳ್ಳು ಆರೋಪ ಮಾಡ್ತಿದ್ದಾರೆ. ನಾನು ಹೇಳಿದ ಅಂಕಿ ಅಂಶ ಸುಳ್ಳಾದರೆ ರಾಜಕೀಯ ನಿವೃತ್ತಿ ನೀಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅಂದರೆ, ಅವರ ರಾಜಕೀಯ ಮುಗಿಯುವ ಹಂತಕ್ಕೆ ಬಂದಿದೆ. ಅದನ್ನು ಗಮನದಲ್ಲಿಟ್ಟುಕೊಂಡು ಅವರು ಆ ಹೇಳಿಕೆ ಕೊಟ್ಟಿದ್ದಾರೆ. ಅವರಿಗೆ ಅವರ ರಾಜಕೀಯದ ವಾಸ್ತವ ಸ್ಥಿತಿ ಅರಿವಿಗೆ ಬಂದಂತಿದೆ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್ ಹೈಕಮಾಂಡ್‌ಗೆ ಗುಲಾಮನಲ್ಲ, ನಾನು ವಿಧೇಯನಾಗಿದ್ದೇನೆ ಅಷ್ಟೇ: ಸಚಿವ ಕೆ.ಎನ್. ರಾಜಣ್ಣ
ಜೆಡಿಎಸ್ ವಿರುದ್ಧ ಅಪಸ್ವರವೆತ್ತಿದ ನಾಯಕರಿಗೆ ಖಡಕ್ ವಾರ್ನಿಂಗ್: ಮೈತ್ರಿಯ ವಿರುದ್ದ ಅಪರಸ್ವರ ಎತ್ತಿದ ನಾಯಕರಿಗೆ ಅಮಿತ್ ಶಾ ವಾರ್ನಿಂಗ್ ನೀಡಿದ್ದಾರೆ. ಜೆಡಿಎಸ್ ಬಿಜೆಪಿ ಮೈತ್ರಿ ಬಗ್ಗೆ ಯಾರು ಅಪಸ್ವರ ಎತ್ತಬಾರದು. ಕಳೆದಬಾರಿ ಕಾಂಗ್ರೆಸ್ ಜೆಡಿಎಸ್ ಇಂತಹ ಅಪಸ್ವರದ ಮಾತುಗಳಿಂದಲೇ ಅವರಿಗೆ ಸೋಲಾಗಿದೆ. ಅದೇ ಕೆಲಸವನ್ನ ನೀವು ಮಾಡಕೂಡದು. ಇಂತಹ ಮಾತುಗಳಿಂದಲೇ ಮೈತ್ರಿಗೆ ತೊಂದರೆಯಾಗುತ್ತದೆ. ಮೈತ್ರಿಗೆ ದಕ್ಕೆಯಾಗುವಂತಹ ಯಾವುದೇ ಹೇಳಿಕೆಗಳನ್ನ ಯಾರು ಕೊಡಬಾರದು. ಅಮಿತ್ ಶಾ ಎಲ್ಲಾ ನಾಯಕರುಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.