ಮಹಾರಾಷ್ಟ್ರದಲ್ಲಿ ಯಾವುದೇ ರಾಜಕೀಯ ಪಕ್ಷವೂ ಸರ್ಕಾರ ರಚನೆಗೆ ಬೇಕಾದ ಸಂಖ್ಯಾಬಲ ತೋರಿಸಲು ಶಕ್ತವಿಲ್ಲದ ಕಾರಣ ಅಲ್ಲಿ 6 ತಿಂಗಳ ಕಾಲ ವಿಧಾನಸಭೆಯನ್ನು ಅಮಾನತಿನಲ್ಲಿಟ್ಟು ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದೆ.

ಎಎನ್‌ಐ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಇದೇ ಮೊದಲ ಬಾರಿಗೆ ಮಹಾರಾಷ್ಟ್ರ ರಾಜಕೀಯ ಗುದ್ದಾಟದ ಬಗ್ಗೆ ಮೌನ ಮುರಿದಿದ್ದು, ಶಿವಸೇನೆಯ ಜೊತೆಗೆ ಸಮಸ್ಯೆ ಆಗಿದ್ದು ಎಲ್ಲಿ ಎಂಬುದರ ಸುಳಿವು ನೀಡಿದ್ದಾರೆ. ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ಮಹಾರಾಷ್ಟ್ರದಲ್ಲಿ ಶಿವಸೇನೆ ಜೊತೆಗಿನ ನಿಮ್ಮ ಮೈತ್ರಿ ಬಿದ್ದುಹೋಗಿದೆ. ಇದಕ್ಕೆ ಕಾರಣ ಏನು?

ಚುನಾವಣೆಗೂ ಮೊದಲು ಪ್ರಧಾನಿ ನರೇಂದ್ರ ಮೋದಿ ಮತ್ತು ನಾನು ನಮ್ಮ ಮೈತ್ರಿಕೂಟಕ್ಕೆ (ಬಿಜೆಪಿ ಮತ್ತು ಶಿವಸೇನೆ) ಗೆಲುವಾದರೆ ದೇವೇಂದ್ರ ಫಡ್ನವೀಸ್‌ ಅವರೇ ಮುಖ್ಯಮಂತ್ರಿ ಎಂದು ಬಹಿರಂಗವಾಗಿ ಹಲವು ಬಾರಿ ಹೇಳಿದ್ದೆವು. ಆಗ ಯಾರೂ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ಈಗ ಅವರು ಬಂದು ಹೊಸ ಬೇಡಿಕೆಗಳನ್ನು ಮುಂದಿಟ್ಟರು. ಅದನ್ನು ನಾವು ಒಪ್ಪಿಕೊಳ್ಳಲಾಗಲಿಲ್ಲ.

ಮುಖ್ಯಮಂತ್ರಿ ಹುದ್ದೆಯ ಹಂಚಿಕೆ ಬಗ್ಗೆ ಬಿಜೆಪಿ ಒಪ್ಪಿತ್ತು. ಈ ಬಗ್ಗೆ ಸೀಟು ಹಂಚಿಕೆ ವೇಳೆಯೇ ಅಮಿತ್‌ ಶಾ ಮತ್ತು ಉದ್ಧವ್‌ ಠಾಕ್ರೆ ಮಾತುಕತೆ ನಡೆಸಿದ್ದರು ಎಂದು ಶಿವಸೇನೆ ಆಪಾದಿಸುತ್ತಿದೆಯಲ್ಲಾ?

ತಲಾ 2.5 ವರ್ಷ ಮುಖ್ಯಮಂತ್ರಿ ಅವಧಿ ಹಂಚಿಕೆ ಕುರಿತಂತೆ ನಮ್ಮಿಬ್ಬರ ನಡುವೆ ಯಾವುದೇ ಮಾತುಕತೆ ನಡೆದಿಲ್ಲ. ಶಿವಸೇನೆಗೆ ನಾನು ಯಾವುದೇ ವಚನವನ್ನೂ ನೀಡಿರಲಿಲ್ಲ. ನಾಲ್ಕು ಗೋಡೆಯ ನಡುವೆ ನಡೆದ ಗುಪ್ತ ವಿಚಾರಗಳನ್ನು ಬಹಿರಂಗವಾಗಿ ಮಾತನಾಡುವುದು ನಮ್ಮ ಪಕ್ಷದ ಸಂಪ್ರದಾಯ ಅಲ್ಲ. ಜನರ ಅನುಕಂಪ ಗಿಟ್ಟಿಸಲು ಶಿವಸೇನೆ ಹೀಗೆ ಮಾಡುತ್ತಿದ್ದರೆ ಖಂಡಿತಾ ಅದು ಸಾಧ್ಯವಿಲ್ಲ.

ಸರ್ಕಾರ ರಚನೆಗೆ ಬಹಳ ಕಡಿಮೆ ಕಾಲಾವಕಾಶ ನೀಡಲಾಯಿತು. ಅರುಣಾಚಲ ಪ್ರದೇಶ ಮತ್ತು ಗೋವಾದಲ್ಲಿ ಇನ್ನೂ ಹೆಚ್ಚು ಸಮಯ ನೀಡಲಾಗಿತ್ತು. ಆದರೆ, ಶಿವಸೇನೆಗೆ ಹೆಚ್ಚಿನ ಸಮಯ ನೀಡಲು ಮಹಾರಾಷ್ಟ್ರದ ರಾಜ್ಯಪಾಲರು ನಿರಾಕರಿಸಿದರು ಎಂದು ಆರೋಪಿಸಲಾಗುತ್ತಿದೆ. ನಿಮ್ಮ ಪ್ರತಿಕ್ರಿಯೆ ಏನು?

ಇದಕ್ಕೂ ಮೊದಲು ಸರ್ಕಾರ ರಚನೆಗೆ ರಾಜ್ಯಪಾಲರು ಇಷ್ಟೊಂದು ಸಮಯ ಕೊಟ್ಟಿದ್ದನ್ನು ನಾನು ಎಲ್ಲೂ ನೋಡಿಲ್ಲ. ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ 18 ದಿನ ಕಾಲಾವಕಾಶ ನೀಡಲಾಗಿತ್ತು. ಹಿಂದಿನ ವಿಧಾನಸಭಾ ಅವಧಿ ಮುಕ್ತಾಯವಾಗುವವರೆಗೆ ಯಾವುದಾದರೂ ಪಕ್ಷ ಸರ್ಕಾರ ರಚನೆಗೆ ಹಕ್ಕು ಮಂಡಿಸಬಹುದು ಎಂದು ರಾಜ್ಯಪಾಲರು ಕಾದಿದ್ದರು. ಯಾರೂ ಮುಂದೆ ಬರದ ಕಾರಣ ರಾಜ್ಯಪಾಲರು ಸರ್ಕಾರ ರಚನೆಗೆ ವಿವಿಧ ಪಕ್ಷಗಳಿಗೆ ಆಹ್ವಾನ ನೀಡಿದರು. ನಾವಾಗಲಿ, ಶಿವಸೇನೆಯಾಗಲಿ ಅಥವಾ ಕಾಂಗ್ರೆಸ್‌-ಎನ್‌ಸಿಪಿಯಾಗಲೀ ಸರ್ಕಾರ ರಚನೆಗೆ ಮುಂದಾಗಲಿಲ್ಲ. ಇವತ್ತೂ ಯಾವುದೇ ಪಕ್ಷ ಬಹುಮತ ಸಾಬೀತುಪಡಿಸಲು ಶಕ್ತವಿದ್ದರೆ ರಾಜ್ಯಪಾಲರನ್ನು ಮತ್ತೊಮ್ಮೆ ಭೇಟಿ ಮಾಡಬಹುದು. ಈಗಲೂ ಅಂಥದ್ದೊಂದು ಅವಕಾಶವಿದೆ.

ನೇರವಾಗಿ ಹೇಳಿ- ಶಿವಸೇನೆಯೊಂದಿಗಿನ ಮೈತ್ರಿ ಮುರಿದಿದ್ದೇಕೆ?

ಶಿವಸೇನೆಯೊಂದಿಗೆ ಸೇರಿ ಸರ್ಕಾರ ರಚಿಸಲು ನಾವು ಸಿದ್ಧವಾಗಿದ್ದೆವು. ಆದರೆ ಶಿವಸೇನೆ ಕೆಲವೊಂದು ವಿಷಯಗಳನ್ನು ಒಪ್ಪಿಕೊಳ್ಳಲು ಸಿದ್ಧವಿರಲಿಲ್ಲ

ಸರ್ಕಾರ ರಚಿಸಲು ಸರಿಯಾದ ಕಾಲಾವಕಾಶ ನೀಡದೆ ರಾಷ್ಟ್ರಪತಿ ಆಳ್ವಿಕೆ ಹೇರಿರುವುದರಿಂದ ಮಹಾರಾಷ್ಟ್ರಕ್ಕೆ ನಷ್ಟವಾಗಿದೆ. ನಮಗೂ ನಷ್ಟವಾಗಿದೆ ಎಂದು ಶಿವಸೇನೆ, ಎನ್‌ಸಿಪಿ ಹಾಗೂ ಕಾಂಗ್ರೆಸ್‌ ಹೇಳುತ್ತಿವೆಯಲ್ಲ?

ಕಪಿಲ್‌ ಸಿಬಲ್‌ರಂತಹ ಕಾನೂನು ಪಂಡಿತರೇ ಹೀಗೆ ಹೇಳುತ್ತಾರೆಂದರೆ ನನಗೆ ಆಶ್ಚರ್ಯವಾಗುತ್ತದೆ. ಇದು ಜನರ ಸಹಾನುಭೂತಿ ಗಳಿಸುವ ನಿರರ್ಥಕ ಪ್ರಯತ್ನವಷ್ಟೆ. ರಾಜ್ಯಪಾಲರು ಎಲ್ಲ ಕಾನೂನು ಪ್ರಕ್ರಿಯೆಗಳನ್ನು ಪಾಲಿಸಿ, ಸರ್ಕಾರ ರಚಿಸಲು ಯಾರ ಬಳಿಯೂ ಸಂಖ್ಯಾಬಲ ಇಲ್ಲ ಎಂಬುದನ್ನು ಖಾತ್ರಿಪಡಿಸಿಕೊಂಡೇ ರಾಷ್ಟ್ರಪತಿಗಳ ಆಳ್ವಿಕೆಗೆ ಶಿಫಾರಸು ಮಾಡಿದ್ದಾರೆ. ಈ ನಿರ್ಧಾರದಿಂದ ಅತಿಹೆಚ್ಚು ನಷ್ಟವಾಗಿದ್ದರೆ ಅದು ಬಿಜೆಪಿಗೆ. ಏಕೆಂದರೆ ಇಷ್ಟುದಿನ ನಮ್ಮ ಪಕ್ಷದ ಕೇರ್‌ಟೇಕರ್‌ ಸರ್ಕಾರವಿತ್ತು. ಈಗ ಅದೂ ಹೋಗಿದೆ.

ತರಾತುರಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಲಾಗಿದೆ. ತನ್ನ ಮೈತ್ರಿಕೂಟವಾದ ಎನ್‌ಸಿಪಿಗೆ ಬಹುಮತ ಸಾಬೀತುಪಡಿಸಲು ಸರಿಯಾದ ಸಮಯ ನೀಡಿಲ್ಲ ಎಂದು ಕಾಂಗ್ರೆಸ್‌ ಆರೋಪಿಸಿದೆ. ಇದರ ಬಗ್ಗೆ ಏನು ಹೇಳುತ್ತೀರಿ?

ಬಹುಶಃ ಅವರ ಮೈತ್ರಿಕೂಟದೊಂದಿಗೆ ಅವರು ಈ ಬಗ್ಗೆ ಚರ್ಚಿಸಿಯೇ ಇಲ್ಲ.

ಎನ್‌ಸಿಪಿ ಹೆಚ್ಚಿನ ಸಮಯಾವಕಾಶ ಕೇಳಿತ್ತು. ಆದರೆ ಅದನ್ನೂ ನಿರಾಕರಿಸಲಾಯ್ತು. ರಾತ್ರಿ 8.30ರವರೆಗೆ ಕಾಲಾವಕಾಶ ನೀಡಿ ಮಧ್ಯಾಹ್ನವೇ ತರಾತುರಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಿದ್ದೇಕೆ ಎಂದು ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಪ್ರಶ್ನಿಸುತ್ತಿದ್ದಾರಲ್ಲ?

ವಿರೋಧ ಪಕ್ಷಗಳ ಈ ಆರೋಪವನ್ನು ನಾನು ಸಂಪೂರ್ಣವಾಗಿ ಕೇಳಿದ್ದೇನೆ. ರಾಜ್ಯಪಾಲರು ಎನ್‌ಸಿಪಿಗೆ ಸರ್ಕಾರ ರಚಿಸಲು ರಾತ್ರಿ 8.30ರವರೆಗೆ ಸಮಯ ನೀಡಿದ್ದು ನಿಜ. ಆದರೆ, ಮಂಗಳವಾರ ಬೆಳಿಗ್ಗೆ 11.30ರ ಸುಮಾರಿಗೆ ಎನ್‌ಸಿಪಿಯವರು ರಾಜ್ಯಪಾಲರಿಗೆ ಪತ್ರ ಬರೆದು ಇವತ್ತು ರಾತ್ರಿ 8.30ರೊಳಗೆ ಸರ್ಕಾರ ರಚಿಸುವಷ್ಟುಸಂಖ್ಯಾಬಲ ತೋರಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಅದನ್ನು ಗಮನಿಸಿದ ರಾಜ್ಯಪಾಲ ಭಗತ್‌ ಸಿಂಗ್‌ ಕೋಶ್ಯಾರಿ ಅವರು ರಾತ್ರಿ 8.30ರ ವರೆಗೆ ಕಾಯುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಭಾವಿಸಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿದರು.

ರಾಷ್ಟ್ರಪತಿ ಆಳ್ವಿಕೆ ಹೇರಿಕೆ ಅಸಾಂವಿಧಾನಿಕ ಎಂದು ಹೇಳಲಾಗುತ್ತಿದೆ?

ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆಯ ಫಲಿತಾಂಶ ಘೋಷಣೆಯಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಹುಮತ ಸಾಬೀತುಪಡಿಸಲು 18 ದಿನ ಕಾಲಾವಕಾಶ ಇತ್ತು. ಅಲ್ಲಿಯವರೆಗೆ ರಾಜ್ಯಪಾಲರೂ ಕಾದಿದ್ದರು. ಆದರೆ ಯಾವ ಪಕ್ಷವೂ ಅಥವಾ ಯಾವ ಮೈತ್ರಿಕೂಟವೂ ಸರ್ಕಾರ ರಚನೆಗೆ ಮುಂದಾಗಲಿಲ್ಲ. ವಿಧಾನಸಭಾ ಅವಧಿ ಮುಕ್ತಾಯವಾದ ಬಳಿಕವಷ್ಟೇ ರಾಜ್ಯಪಾಲರು ಮೊದಲು ಅತಿ ದೊಡ್ಡ ಪಕ್ಷವಾದ ಬಿಜೆಪಿ, ನಂತರ ಶಿವಸೇನೆ, ನಂತರ ಎನ್‌ಸಿಪಿಗೆ ಸರ್ಕಾರ ರಚನೆಗೆ ಆಹ್ವಾನ ನೀಡಿದರು.

ಆದರೆ ಯಾವುದೇ ಪಕ್ಷವೂ ಬಹುಮತ ಸಾಬೀತುಪಡಿಸಲು ಸಾಧ್ಯವಾಗಲಿಲ್ಲ. ಇವತ್ತೂ ಯಾವುದೇ ಪಕ್ಷ ಬಹುಮತ ಸಾಬೀತುಪಡಿಸಲು ಶಕ್ತವಿದ್ದರೆ ರಾಜ್ಯಪಾರನ್ನು ಭೇಟಿ ಮಾಡಿ, ಹಕ್ಕು ಮಂಡಿಸಿದರೆ ರಾಜ್ಯಪಾಲರು ಅದನ್ನು ಅಂಗೀಕರಿಸಿದರೆ ಕೇಂದ್ರ ಸರ್ಕಾರವು ರಾಷ್ಟ್ರಪತಿ ಆಳ್ವಿಕೆಯನ್ನು ಹಿಂಪಡೆಯಬಹುದು. ಇನ್ನೂ ವಿಧಾನಸಭೆಯನ್ನು ವಿಸರ್ಜಿಸಿಲ್ಲ, 6 ತಿಂಗಳ ಕಾಲ ಅಮಾನತಿನಲ್ಲಿ ಇಡಲಾಗಿದೆಯಷ್ಟೆ. ವಿಧಾನಸಭೆಯನ್ನು ವಿಸರ್ಜಿಸಿದ್ದರೆ ಹೀಗೆ ಆರೋಪ ಮಾಡಬಹುದಿತ್ತು.

6 ತಿಂಗಳ ರಾಷ್ಟ್ರಪತಿ ಆಳ್ವಿಕೆ ನಂತರ ಏನಾಗುತ್ತದೆ?

ಮಹಾರಾಷ್ಟ್ರದಲ್ಲಿ ಮಧ್ಯಂತರ ಚುನಾವಣೆ ಘೋಷಣೆಯಾಗುವುದು ನಮಗೆ ಇಷ್ಟವಿಲ್ಲ. 6 ತಿಂಗಳು ಸಂಪೂರ್ಣವಾದ ಬಳಿಕ ರಾಜ್ಯಪಾಲರು ಶಾಸನಾತ್ಮಕವಾಗಿ ಹೇಳಿಕೆ ಪಡೆದು ಸಂವಿಧಾನಾತ್ಮಕ ಹೆಜ್ಜೆ ಇಡುತ್ತಾರೆ. ಯಾರು ರಾಷ್ಟ್ರಪತಿ ಆಳ್ವಿಕೆ ಹೇರಿಕೆ ಅಸಾಂವಿಧಾನಿಕ ಎಂದು ಹೇಳುತ್ತಾರೋ ಅವರಿಗೆ ನಾನು ಹೇಳುವುದಿಷ್ಟೇ, ಅವರಿಗೆ ಈಗಲೂ ಸರ್ಕಾರ ರಚಿಸುವ ಹಕ್ಕಿದೆ. ಸರ್ಕಾರ ರಚಿಸಲು ಬೇಕಾಗುವಷ್ಟುಸಂಖ್ಯಾಬಲ ಹೊಂದಿದ್ದರೆ ಅವರು ಈಗಲೇ ಬೇಕಾದರೂ ಸರ್ಕಾರ ರಚಿಸಬಹುದು.