ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯದಲ್ಲಿರುವ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ನಾಯಕ ಹಾಗೂ ಮಾಜಿ ರೈಲ್ವೆ ಸಚಿವ ಮುಕುಲ್‌ ರಾಯ್‌, ಸೋಮವಾರದಿಂದ ನಾಪತ್ತೆಯಾಗಿದ್ದಾರೆ ಎಂದು ಅವರ ಪುತ್ರ ಮಂಗಳವಾರ ಹೇಳಿದ ಕೆಲವೇ ಹೊತ್ತಲ್ಲಿ ಮುಕುಲ್‌ ರಾಯಲ್‌ ದೆಹಲಿಯಲ್ಲಿ ಪತ್ತೆಯಾಗಿದ್ದಾರೆ.

ನವದೆಹಲಿ/ಕೋಲ್ಕತ್ತಾ: ಮಾಜಿ ರೈಲ್ವೆ ಸಚಿವ ಹಾಗೂ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್‌ನ ಪ್ರಭಾವಿ ನಾಯಕ ಮುಕುಲ್‌ ರಾಯ್‌ ಸೋಮವಾರ ಸಂಜೆಯಿಂದ ನಾಪತ್ತೆಯಾಗಿದ್ದರು. ಇನ್ನೇನು ಈ ವಿಚಾರ ರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿಯಾಗಿ ಅವರ ಹುಡುಕಾಟ ಆರಂಭವಾಗಬೇಕು ಎನ್ನುವ ಹೊತ್ತಿಗೆ ದೆಹಲಿಯಲ್ಲಿ ಅವರು ಪತ್ತೆಯಾಗಿದ್ದಾರೆ. ಹಾಗಂತ ಅವರು ನಾಪತ್ತೆಯಾಗಿದ್ದಾರೆ ಎಂದು ಮಾಧ್ಯಮಗಳೇನೂ ಸುದ್ದಿಮಾಡಿರಲಿಲ್ಲ. ಸ್ವತಃ ಮುಕುಲ್‌ ರಾಯ್‌ ಅವರ ಪುತ್ರ ಸುಭ್ರಾಗ್ಶು ರಾಯ್‌, ತಮ್ಮ ತಂದೆ ಸೋಮವಾರ ಸಂಜೆಯಿಂದ ನಾಪತ್ತೆಯಾಗಿದ್ದಾರೆ. ಅವರನ್ನು ಸಂಪರ್ಕ ಮಾಡುವ ಯಾವ ಪ್ರಯತ್ನವೂ ಯಶಸ್ವಿಯಾಗಿಲ್ಲ. ಸೋಮವಾರ ಸಂಜೆಯಿಂದಲೂ ಅವರ ಪತ್ತೆ ಸಾಧ್ಯವಾಗಿಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದ್ದರು. ಇಲ್ಲಿಯವರೆಗೆ ನನ್ನ ತಂದೆಯನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಅವರು ಪತ್ತೆಯಾಗಿಲ್ಲ," ಎಂದು ಟಿಎಂಸಿ ನಾಯಕ ಸುಭ್ರಾಗ್ಶು ಹೇಳಿದ್ದರು. ರಾಯ್‌ ಅವರಯ ಸೋಮವಾರ ಸಂಜೆ ದೆಹಲಿಗೆ ತೆರಳಬೇಕಿತ್ತು. ಅವರು ಅಲ್ಲಿಗೆ ಹೋಗಿದ್ದಾರೋ ಇಲ್ಲವೋ ಎನ್ನುವುದು ಕೂಡ ತಿಳಿದಿಲ್ಲ. ಸೋಮವಾರ ರಾತ್ರಿ 9 ಗಂಟೆಗೆ ಅವರು ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಆದರೆ, ಅವರು ಅಲ್ಲಿ ಇಳಿದಿಲ್ಲ ಎಂದು ಸುಭ್ರಾಗ್ಶು ತಿಳಿಸಿದ್ದರು.

ಇದರ ಬೆನ್ನಲ್ಲಿಯೇ ದೆಹಲಿ ವಿಮಾನ ನಿಲ್ದಾಣಕ್ಕೆ ತೆರಳಿದ್ದ ಮಾಧ್ಯಮಗಳಿಗೆ ಅಲ್ಲಿ ಅಚ್ಚರಿ ಕಾದಿತ್ತು. ಸ್ವತಃ ಮುಕುಲ್‌ ರಾಯ್‌ಗೂ ಇದು ಅಚ್ಚರಿಗೆ ಕಾರಣವಾಯಿತು. ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯದಲ್ಲಿರುವ 69 ವರ್ಷದ ಮುಕುಲ್‌ ರಾಯ್‌, ಎಸ್ಕಾರ್ಟ್‌ಗಳೊಂದಿಗೆ ವಿಮಾನನಿಲ್ದಾಣದಲ್ಲಿ ಕಾಣಿಸಿಕೊಂಡಿರುವ ವಿಡಿಯೋ ಪತ್ತೆಯಾಗಿದೆ. ಆದರೆ, ಈ ವಿಡಿಯೋ ನಿಜವೇ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ.

'ನನಗೆ ದೆಹಲಿಯಲ್ಲಿ ಸ್ವಲ್ಪ ಕೆಲಸವಿದೆ. ಅದಕ್ಕಾಗಿ ನಾನಿಲ್ಲಿ ಬರಬಾರದೇ?' ಎಂದು ಪತ್ರಕರ್ತರೊಬ್ಬರು ನೀವ್ಯಾಕೆ ದೆಹಲಿಯಲ್ಲಿದ್ದೀರಿ ಎನ್ನುವ ಪ್ರಶ್ನೆಗೆ ಉತ್ತರ ನೀಡುತ್ತಾ ಮುಕುಲ್‌ ರಾಯ್‌ ಹೇಳಿದ್ದಾರೆ. ಯಾವುದಾದರೂ ಚಿಕಿತ್ಸೆಗಾಗಿ ದಹಲಿಗೆ ಬಂದಿದ್ದೀರಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ, 'ಇಲ್ಲ ಇಲ್ಲ.. ನಾನು ವಿಶೇಷ ಕೆಲಸಕ್ಕಾಗಿ ಇಲ್ಲಿಗೆ ಬಂದಿದ್ದೇನೆ. ನಾನು ದೆಹಲಿಗೆ ಬರಲೇ ಬಾರದೇ? ನಾನು ಇಲ್ಲಿ ಶಾಸಕ ಹಾಗೂ ಸಂಸದನಾಗಿದ್ದವನು..' ಎಂದು ಮಾಜಿ ಸಂಸದ ಹೇಳಿದ್ದಾರೆ.

2021ರಲ್ಲಿ ಬಿಜೆಪಿಯಿಂದ ತೃಣಮೂಲ ಕಾಂಗ್ರೆಸ್‌ಗೆ ಮರಳಿ ಸೇರ್ಪಡೆಯಾಗಿದ್ದ ಮುಕುಲ್‌ ರಾಯ್‌, ಮತ್ತೊಮ್ಮೆ ಪಕ್ಷವನ್ನು ಬದಲಾವಣೆ ಮಾಡಲಿದ್ದಾರೆಯೇ ಎನ್ನುವ ಊಹಾಪೋಹಗಳು ವ್ಯಕ್ತವಾಗಿದ್ದವು. ಆದರೆ ಇದಕ್ಕೆ ಉತ್ತರಿಸಿದ ಅವರು, ಯಾವುದೇ ವಿಶೇಷ ರಾಜಕೀಯ ಕಾರಣಕ್ಕಾಗಿ ನಾನು ಇಲ್ಲಿಗೆ ಬಂದಿಲ್ಲ ಎಂದು ತಿಳಿಸಿದ್ದಾರೆ.

ಬಿಜೆಪಿ ತೊರೆದು ಟಿಎಂಸಿಗೆ ಮರಳಿದ ರಾಯ್‌ ಝಡ್‌ ಭದ್ರತೆ ಹಿಂದಕ್ಕೆ

ಮುಕುಲ್‌ ರಾಯ್‌ ಸೋಮವಾರ ಸಂಜೆಯಿಂದ ನಾಪತ್ತೆಯಾದ ಬೆನ್ನಲ್ಲಿಯೇ ಅವರ ಕುಟುಂಬ ಮಿಸ್ಸಿಂಗ್‌ ದೂರು ಕೂಡ ದಾಖಲು ಮಾಡಿತ್ತು. 'ನನ್ನ ತಂದೆಯ ಫೋನ್‌ ಸ್ವಿಚ್‌ ಆಫ್‌ ಆಗಿದೆ. ಅವರನ್ನು ಬೇರೆ ಯಾರಾದರೂ ವ್ಯಕ್ತಿಗಳು ಕಿಡ್ನಾಪ್‌ ಮಾಡಿರಬಹುದು' ಎಂದು ಅವರು ಹೇಳಿದ್ದರು. ಅದಲ್ಲದೆ, ದೆಹಲಿಗೆ ಹೋಗಲು ಅವರ ಬಳಿ ಹಣ ಕೂಡ ಇದ್ದಿರಲಿಲ್ಲ ಎಂದಿದ್ದಾರೆ.
"ಅವರ ಮಾನಸಿಕ ಸ್ಥಿತಿ ಸರಿಯಿಲ್ಲ. ಕೆಲವು ಪಕ್ಷಗಳು ಮುಕುಲ್ ರಾಯ್ ಜೊತೆ ಕೆಟ್ಟ ರಾಜಕಾರಣ ಮಾಡುತ್ತಿವೆ. ಅವರು ನಾಪತ್ತೆಯಾಗಿದ್ದಾರೆ. ಕೆಲವರು ಅವರನ್ನು ಕರೆದೊಯ್ದು ಹೋಗಿದ್ದಾರೆ. ನಾನು ಅವರೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗಲಿಲ್ಲ" ಎಂದು ಸುಭ್ರಾಗ್ಶು ರಾಯ್ ತಿಳಿಸಿದ್ದಾರೆ. ಇದೇ ವೇಳೆ ತಂದೆ ಬಿಜೆಪಿಗೆ ಸೇರುವ ವರದಿಗಳನ್ನೂ ಅವರು ನಿರಾಕರಿಸಿದ್ದಾರೆ. "ನನ್ನ ತಂದೆ ಈಗ ಬಿಜೆಪಿಗೆ ಸೇರಿದರೂ, ಅವರ ಮಾನಸಿಕ ಆರೋಗ್ಯವು ಮೊದಲಿನಂತಿಲ್ಲ. ಅವರನ್ನು ಮರಳಿ ಕರೆತಂದು ಚಿಕಿತ್ಸೆ ನೀಡುವುದು ನನ್ನ ಆದ್ಯತೆ. ಅವರ ಸ್ಥಿತಿಯ ಬಗ್ಗೆ ನನ್ನ ಕುಟುಂಬಕ್ಕೆ ತಿಳಿದಿದೆ' ಎಂದಿರುವ ಪುತ್ರ, ತಂದೆಯೊಂದಿಗೆ ನನಗೆ "ಯಾವುದೇ ಭಿನ್ನಾಭಿಪ್ರಾಯವಿಲ್ಲ" ಎಂದು ಹೇಳಿದ್ದಾರೆ.

ಬಂಗಾಳ ಬಿಜೆಪಿ ನಾಯಕ ಮುಕುಲ್‌ ವಿರುದ್ಧ ಹತ್ಯೆಗೆ ಸಂಚು ಆರೋಪ!

ತೃಣಮೂಲ ಕಾಂಗ್ರೆಸ್‌ ಪಕ್ಷದ ಪ್ರಭಾವಿ ನಾಯಕರಾಗಿದ್ದ ಮುಕುಲ್‌ ರಾಯ್‌, ಅಧಿನಾಯಕಿ ಮಮತಾ ಬ್ಯಾನರ್ಜಿ ಅವರ ಭಿನ್ನಾಭಿಪ್ರಾಯದ ಬಳಿಕ 2017ರಲ್ಲಿ ಪಕ್ಷ ತೊರೆದು ಬಿಜೆಪಿ ಸೇರಿಸಿದ್ದರು. ಈ ವೇಳೆ ಅವರನ್ನು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ಮಾಡಲಾಗಿತ್ತು. 2021ರ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕಟ್‌ನೊಂದಿಗೆ ಗೆದ್ದಿದ್ದರು. ಇದರ ಬೆನ್ನಲ್ಲಿಯೇ ಕೆಲವು ತೃಣಮೂಲಕ ಕಾಂಗ್ರೆಸ್‌ನ ಮಾಜಿ ಸದಸ್ಯರು ವಾಪಾಸ್‌ ಪಕ್ಷ ಸೇರಿದರು. ಈ ವೇಳೆ ರಾಯ್‌ ಕೂಡ ತಮ್ಮ ಪುತ್ರನೊಂದಿಗೆ ಬಿಜೆಪಿ ಸೇರಿದ್ದರು.