ಆಗ್ರಾ(ಏ.29): ದೇಶಾದ್ಯಂತ ಸದ್ಯ ಕೊರೋನಾದ್ದೇ ಸುದ್ದಿ, ಸಿಕ್ಕ ಸಿಕ್ಕವರನ್ನು ತನ್ನ ಬಲೆಗೆ ಹಾಕಿಕೊಳ್ಳುತ್ತಿರುವ ಕೊರೋನಾ ಜನ ಸಾಮಾನ್ಯರ ಬದುಕನ್ನು ಅಸ್ತವ್ಯಸ್ತಗೊಳಿಸಿದೆ. ಆದರೆ ಈ ಬಾರಿ ದೇಶದಲ್ಲಿ ಈ ಹಿಂದಿನ ಅಲೆಗಿಂತಲೂ ಗಂಬೀರ ಸ್ಥಿತಿ ನಿರ್ಮಾಣವಾಗಿದೆ. ಆಕ್ಸಿಜನ್ ಕೊರತೆ ಭಾರೀ ಪ್ರಮಾಣದಲ್ಲಿ ಎದುರಾಗಿದ್ದು, ಜನ ಉಸಿರಾಡುವ ಗಾಳಿ ಸಿಗದೆ ಪರದಾಡುತ್ತಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಒಂದು ವೈರಲ್ ಆಗಿದ್ದು, ಅನೇಕರನ್ನು ಭಾವುಕರನ್ನಾಗಿಸಿದೆ.

ಹೌದು ಪ್ರೇಮಸೌಧವಿರುವ ಆಗ್ರಾದಲ್ಲಿ ನಡೆದ ಘಟನೆ ಇದಾಗಿದ್ದು, ಪತ್ನಿಯೊಬ್ಬಳು ಕೊರೋನಾ ಸೋಂಕಿತ ತನ್ನ ಗಂಡನ ಪ್ರಾಣ ಕಾಪಾಡಲು ಯಾವುದೇ ಹಾದಿ ಇಲ್ಲದಾಗ ಬಾಯಿಯಿಂದ ಬಾಯಿಗೆ ಉಸಿರು ಕೊಟ್ಟಟು ಉಳಿಸಲು ಯತ್ನಿಸಿದ್ದಾಳೆ. ಆದರೆ ಆಕೆಯ ಪ್ರಯತ್ನ ಕೊನೆಗೂ ಫಲ ನೀಡಿಲ್ಲ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದ ಗಂಡ ಕೊನೆಯುಸಿರೆಳೆದಿದ್ದಾನೆ.

"

ಕೊರೋನಾ ಸೋಂಕಿತರಾಗಿದ್ದ 47 ವರ್ಷ ವಯಸ್ಸಿನ ರವಿ ಸಿಂಘಲ್‌ನನ್ನು ಪತ್ನಿ ರೇಣು ಅವರು ಆಸ್ಪತ್ರೆಗೆ ದಾಖಲಿಸಲು ಆಟೋದಲ್ಲಿ ಕರೆತಂದಿದ್ದರು. ಆದರೆ ಆಗ್ರಾದ ಯಾವ ಆಸ್ಪತ್ರೆಯಲ್ಲೂ ಬೆಡ್ ಖಾಲಿ ಇರಲಿಲ್ಲ. ಹೀಗೆ ಆಸ್ಪತ್ರೆ ಬೆಡ್‌ಗಾಗಿ ಅಲೆಯುತ್ತಿದ್ದಾಗ ಮಾರ್ಗ ಮಧ್ಯದಲ್ಲೇ ರವಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತು. ಹೀಗಿರುವಾಗ ಅವರ ಪತ್ನಿ ತಮ್ಮ ಪತಿಯ ಬಾಯಿಗೆ ತಮ್ಮ ಬಾಯಿಯನ್ನು ಹಾಕಿ ಉಸಿರು ಕೊಡುವ ಮೂಲಕ ಕೃತಕವಾಗಿ ಉಸಿರು ನೀಡುವ ಪ್ರಯತ್ನ ಮಾಡಿದ್ದಾರೆ. ಆದರೆ ಆಕೆಯ ಯಾವ ಪ್ರಯತ್ನವೂ ಫಲ ಕೊಡಲಿಲ್ಲ. ರವಿ ಆಟೋದಲ್ಲೇ ಕೊನೆಯುಸಿರೆಳೆದಿದ್ದಾರೆ. ಸರ್ಕಾರಿ ಆಸ್ಪತ್ರೆಯ ಎದುರಲ್ಲೇ ನಿಂತಿದ್ದ ಆಟೋ ಒಳಗೆ ರವಿಯ ಪ್ರಾಣ ಪಕ್ಷಿ ಹಾರಿಹೋಗಿದೆ.

ಸದ್ಯ  ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಉತ್ತರ ಪ್ರದೇಶದ ಈ ಘಟನೆ ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ. 4 ಖಾಸಗಿ ಆಸ್ಪತ್ರೆಗಳಿಗೆ ಅಲೆದಿದ್ದ ರವಿ ಅವರ ಪತ್ನಿ ರೇಣು, ಕೊನೆಗೆ ಆಗ್ರಾದ ಸರೋಜಿನಿ ನಾಯ್ಡು ಮೆಡಿಕಲ್ ಕಾಲೇಜ್‌ಗೆ ತಮ್ಮ ಪತಿಯನ್ನು ಕರೆತಂದಿದ್ದರು. ಆದ್ರೆ, ಅಲ್ಲಿ ಅವರಿಗೆ ಪ್ರವೇಶ ಸಿಕ್ಕಿರಲಿಲ್ಲ. ಕಳೆದ ಶುಕ್ರವಾರ ನಡೆದ ಈ ಘಟನೆಯ ದೃಶ್ಯಗಳು ಇದೀಗ ಭಾರೀ ವೈರಲ್ ಆಗುತ್ತಿವೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona