ಪಟನಾ(ಡಿ.28): ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಜೆಡಿಯು ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ, ಮಾಜಿ ಐಎಎಸ್‌ ಅಧಿಕಾರಿ, ರಾಜಕಾರಣಿ ಆರ್‌.ಸಿ.ಪಿ. ಸಿಂಗ್‌ ಅವರಿಗೆ ಪಕ್ಷದ ಚುಕ್ಕಾಣಿಯನ್ನು ವಹಿಸಿದ್ದಾರೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ನಿತೀಶ್‌ ಕುಮಾರ್‌ ಅವರ ಅಧಿಕಾರಾವಧಿ 2022ಕ್ಕೆ ಮುಗಿಯುತ್ತಿತ್ತು. ಆದರೆ ಅದಕ್ಕೂ ಮೊದಲೇ ಅಧ್ಯಕ್ಷಗಾದಿಯಿಂದ ನಿತೀಶ್‌ ಕೆಳಗಿಳಿದಿರುವುದು ಅಚ್ಚರಿ ಮೂಡಿಸಿದೆ. ಮುಖ್ಯಮಂತ್ರಿ ಹುದ್ದೆ ಮತ್ತು ಪಕ್ಷದ ರಾಷ್ಟಾ್ರಧ್ಯಕ್ಷ ಹುದ್ದೆ ಎರಡನ್ನೂ ಒಟ್ಟಿಗೆ ನಿಭಾಯಿಸುವುದು ಸರಿಯಲ್ಲ ಎಂದು ನಿತೀಶ್‌ ಕುಮಾರ್‌ ಈ ನಿರ್ಧಾರ ಕೈಗೊಂಡಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ,

2ನೇ ಬಾರಿಗೆ ರಾಜ್ಯಸಭಾ ಸಂಸದರಾಗಿರುವ ಸಿಂಗ್‌, ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ನಿಕಟವರ್ತಿ. ಉತ್ತರ ಪ್ರದೇಶ ಕೇಡರ್‌ನ ಐಎಎಸ್‌ ಅಧಿಕಾರಿಯಾಗಿದ್ದ ಸಿಂಗ್‌ 2010ರಲ್ಲಿ ಐಎಎಸ್‌ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಪಾದಾರ್ಪಣೆ ನಾಡಿದ್ದರು. ಆಗಿನಿಂದಲೂ ಜೆಡಿಯು ಬಲವರ್ಧನೆಗೆ ದುಡಿಯುತ್ತಿರುವ ಸಿಂಗ್‌ ಈವರೆಗೆ ಪಕ್ಷದ ಪ್ರಧಾನ ಕಾರ‍್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು.