ಅಮೆರಿಕ ಕಂಡುಹಿಡಿದಿದ್ದು ಕ್ರಿಸ್ಟೋಫರ್ ಕೊಲಂಬಸ್ ಅಲ್ಲ, ಭಾರತೀಯರು : ಇಂದರ್ ಸಿಂಗ್ ಪರ್ಮಾರ್
ಅಮೆರಿಕವನ್ನು ಕಂಡುಹಿಡಿದಿದ್ದು ಕ್ರಿಸ್ಟೋಫರ್ ಕೊಲಂಬಸ್ ಅಲ್ಲ. ಆ ದೇಶವನ್ನು ಕಂಡುಹಿಡಿದ್ದು ನಮ್ಮ ಭಾರತೀಯ ಪೂರ್ವಜರು ಎಂದು ಮಧ್ಯಪ್ರದೇಶದ ಶಿಕ್ಷಣ ಸಚಿವ ಇಂದರ್ ಸಿಂಗ್ ಪರ್ಮಾರ್ ಹೇಳಿದ್ದಾರೆ.
ಭೋಪಾಲ (ಸೆ.12) : ‘ಅಮೆರಿಕವನ್ನು ಕಂಡುಹಿಡಿದಿದ್ದು ಕ್ರಿಸ್ಟೋಫರ್ ಕೊಲಂಬಸ್ ಅಲ್ಲ. ಆ ದೇಶವನ್ನು ಕಂಡುಹಿಡಿದ್ದು ನಮ್ಮ ಭಾರತೀಯ ಪೂರ್ವಜರು. ಅದೇ ರೀತಿ ಪೋರ್ಚುಗೀಸ್ ನಾವಿಕ ವಾಸ್ಕೋ ಡ ಗಾಮಾ ಭಾರತವನ್ನು ಕಂಡುಹಿಡಿದ ಎಂದೂ ನಮ್ಮ ಮಕ್ಕಳಿಗೆ ತಪ್ಪು ಇತಿಹಾಸ ಬೋಧಿಸಲಾಗುತ್ತಿದೆ’ ಎಂದು ಮಧ್ಯಪ್ರದೇಶದ ಶಿಕ್ಷಣ ಸಚಿವ ಇಂದರ್ ಸಿಂಗ್ ಪರ್ಮಾರ್ ಹೇಳಿದ್ದಾರೆ.
ವಿಶ್ವವಿದ್ಯಾಲಯವೊಂದರ ಘಟಿಕೋತ್ಸವದಲ್ಲಿ ಮಂಗಳವಾರ ಮಾತನಾಡಿದ ಅವರು, ‘8ನೇ ಶತಮಾನದಲ್ಲಿ ಭಾರತದ ಮಹಾನ್ ನಾವಿಕ ವಸುಲೂನ್ ಎಂಬಾತ ಅಮೆರಿಕಕ್ಕೆ ಹೋಗಿ, ಅಲ್ಲಿನ ಸ್ಯಾಂಟಿಯಾಗೋದಲ್ಲಿ ಅನೇಕ ದೇವಾಲಯಗಳನ್ನು ಕಟ್ಟಿಸಿದ್ದ. ಇದರ ಬಗ್ಗೆ ಈಗಲೂ ಅಲ್ಲಿನ ಮ್ಯೂಸಿಯಂಗಳಲ್ಲಿ ಹಾಗೂ ಲೈಬ್ರರಿಗಳಲ್ಲಿ ದಾಖಲೆಗಳಿವೆ’ ಎಂದು ಹೇಳಿದರು.
ವಿಶ್ವದರ್ಜೆಯ ರಾಣಿ ಕಮಲಪತಿ ರೈಲ್ವೇ ಸ್ಟೇಶನ್‌ಗೆ ಹೆಸರು ತಂದುಕೊಟ್ಟ ಆ ದಿಟ್ಟ ಹೆಣ್ಣು!
‘ಅದೇ ರೀತಿ ವಾಸ್ಕೋ ಡ ಗಾಮಾ ಭಾರತವನ್ನು ಕಂಡುಹಿಡಿದ ಎಂದು ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತಿದೆ. ಆದರೆ ವಾಸ್ಕೋ ಡ ಗಾಮನ ಆತ್ಮಕತೆಯನ್ನು ಓದಿ, ಇತಿಹಾಸಕಾರರು ಸರಿಯಾದ ಇತಿಹಾಸ ಕಲಿಸಬಹುದಿತ್ತು. ಆಫ್ರಿಕಾದ ಜಂಜಿಬಾರ್ ಬಂದರಿನಲ್ಲಿ ವಾಸ್ಕೋ ಡ ಗಾಮನು ಗುಜರಾತಿನ ವ್ಯಾಪಾರಿ ಚಂದನ್ ಬಳಿ ಭಾರತವನ್ನು ನೋಡುವ ಆಸೆ ವ್ಯಕ್ತಪಡಿಸುತ್ತಾನೆ. ಆಗ ಚಂದನ್ ತನ್ನ ಹಡಗನ್ನು ಹಿಂಬಾಲಿಸುವಂತೆ ಹೇಳುತ್ತಾನೆ. ಹಾಗೆ ವಾಸ್ಕೋ ಡ ಗಾಮ ಭಾರತಕ್ಕೆ ತಲುಪುತ್ತಾನೆ. ಚಂದನ್‌ನ ಹಡಗು ತನ್ನ ಹಡಗಿಗಿಂತ ಬಹಳ ದೊಡ್ಡದಿತ್ತು ಎಂದೂ ವಾಸ್ಕೋ ಡ ಗಾಮ ಆತ್ಮಕತೆಯಲ್ಲಿ ಬರೆದಿದ್ದಾನೆ’ ಎಂದೂ ಪರ್ಮಾರ್ ತಿಳಿಸಿದ್ದಾರೆ.
ಜಗತ್ತಿನ ನಾಲ್ಕನೇ ಅತಿದೊಡ್ಡ ರೈಲು ಜಾಲ ಹೊಂದಿದ ಭಾರತದ ರೈಲ್ವೆ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು!
‘ಭಾರತೀಯರು ಅಮೆರಿಕವನ್ನು ಕಂಡುಹಿಡಿದ ಮೇಲೆ ಅಲ್ಲಿನ ಮೂಲನಿವಾಸಿಗಳನ್ನು ಗೌರವಿಸಿದರು. ಆದರೆ ಕೊಲಂಬಸ್ ಅಮೆರಿಕಕ್ಕೆ ತೆರಳಿದ ಮೇಲೆ ಯುರೋಪಿಯನ್ನರು ಅಮೆರಿಕದ ಮೂಲನಿವಾಸಿಗಳಿಗೆ ಚಿತ್ರಹಿಂಸೆ ನೀಡಿ, ಅವರನ್ನು ಮತಾಂತರಿಸಿದರು. ವಿದ್ಯಾರ್ಥಿಗಳಿಗೆ ಕಲಿಸುವುದಿದ್ದರೆ ಈ ವಿಷಯ ಕಲಿಸಿ’ ಎಂದು ಹೇಳಿದ್ದಾರೆ.