ಅಂಬಾನಿ ಮನೆ ಸ್ಫೋಟ: ಐಎಂ ಉಗ್ರರ ಕೈವಾಡ?| ತಿಹಾರ್ ಜೈಲಲ್ಲಿ ಉಗ್ರನ ಸೆಲ್‌ನಿಂದ ಮೊಬೈಲ್ ವಶ| ಈ ಮೊಬೈಲ್ ಮೂಲಕ ಟೆಲಿಗ್ರಾಂ ಸಂದೇಶ ರವಾನೆ
ನವದೆಹಲಿ(ಮಾ.13): ಉದ್ಯಮಿ ಮುಕೇಶ್ ಅಂಬಾನಿ ನಿವಾಸದ ಮುಂದೆ ಸ್ಫೋಟಕಗಳನ್ನು ಒಳಗೊಂಡಿದ್ದ ಕಾರನ್ನು ತಾವೇ ನಿಲ್ಲಿಸಿದ್ದಾಗಿ ಹೇಳಿಕೊಂಡಿದ್ದ ಜೈಷ್-ಉಲ್-ಹಿಂದ್ ಎಂಬ ಸಂಘಟನೆಯ ಟೆಲಿಗ್ರಾಂ ಖಾತೆ ಜನ್ಮ ತಾಳಿದ್ದು ದಿಲ್ಲಿಯ ತಿಹಾರ್ ಜೈಲಿನಲ್ಲೇ ಎಂಬ ಮಾಹಿತಿ ಸಿಕ್ಕಿದೆ. ಜೊತೆಗೆ ಈ ಟೆಲಿಗ್ರಾಂ ಸಂದೇಶ ರವಾನೆಯಾಗಿರುವುದು, ಇಂಡಿಯನ್ ಮುಜಾಹಿದೀನ್ ಉಗ್ರ ಸಂಘಟನೆಯ ತೆಹಸೀನ್ ಅಖ್ತರ್ ಅಲಿಯಾಸ್ ಮೋನು ಎಂಬಾತನ ಬಳಿಯಿಂದ ಎಂಬುದೂ ಖಚಿತಪಟ್ಟಿದೆ. ಹೀಗಾಗಿ ಈ ದೃಷ್ಯತ್ಯದ ಹಿಂದೆ ಇಂಡಿಯನ್ ಮುಜಾಹಿದೀನ್ ಕೈವಾಡವಿರಬಹುದು, ಇಲ್ಲವೇ ಉದ್ಯಮಿಯಿಂದ ಹಣ ಕಬಳಿಸಲು ಉಗ್ರರು ಸುಮ್ಮನೆ ಟೆಲಿಗ್ರಾಂ ಆ್ಯಪ್ ಮೂಲಕ ಧಮಕಿ ಹಾಕಿರಬಹುದು ಎಂದು ಹೇಳಲಾಗುತ್ತಿದೆ.
2014ರ ಲೋಕಸಭೆ ಚುನಾವಣೆ ವೇಳೆ ನರೇಂದ್ರ ಮೋದಿ ಅವರ ಪಟನಾ ರಾರಯಲಿಯಲ್ಲಿ ವಿಧ್ವಂಸಕ ಕೃತ್ಯಕ್ಕೆ ಯತ್ನಿಸಿದ ಕೇಸ್ನಲ್ಲಿ ತೆಹಸೀನ್ ಅಖ್ತರ್ನನ್ನು ಬಂಧಿಸಿ, ತಿಹಾರ್ ಜೈಲಿನಲ್ಲಿಡಲಾಗಿದೆ. ಅಂಬಾನಿ ಮನೆ ಸ್ಫೋಟಕಕ್ಕಾಗಿ ಸ್ಫೋಟಕಗಳನ್ನು ಹೊಂದಿದ್ದ ಕಾರನ್ನು ನಿಲ್ಲಿಸಿದಾಗಿ ಸಂದೇಶ ರವಾನಿಸಲಾದ ಟೆಲಿಗ್ರಾಂ ಖಾತೆಯನ್ನೂ ಇವನೇ ಸೃಷ್ಟಿಸಿದ್ದಾನೆ ಎಂಬುದು ಪೊಲೀಸರ ತನಿಖೆಯಲ್ಲಿ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ತೆಹಸೀನ್ ಅಖ್ತರ್ನನ್ನು ವಶಕ್ಕೆ ಪಡೆದು, ಈ ಬಗ್ಗೆ ವಿಚಾರಣೆ ನಡೆಸಲು ಪೊಲೀಸರು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.
ತನ್ನ ಮೊಬೈಲ್ ಸಂಖ್ಯೆ ಗುರುತು ಹಿಡಿಯದಂತೆ ಟಾರ್ ಬ್ರೌಸರ್ ಮೂಲಕ ಟೆಲಿಗ್ರಾಂನಲ್ಲಿ ಖಾತೆ ತೆರೆದಿದ್ದ ಉಗ್ರ ಅಖ್ತರ್, ಉದ್ಯಮಿ ಮುಕೇಶ್ ನಿವಾಸದ ಮುಂದೆ ಪತ್ತೆಯಾಗಿದ್ದ ಸ್ಫೋಟಕ ತುಂಬಿದ ಕಾರನ್ನು ನಿಲ್ಲಿಸಿದ್ದು ತಾವೇ ಎಂಬ ಸಂದೇಶ ರವಾನಿಸಿದ್ದ.
