* ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ* ಇಂದು ಅಮರೀಂದರ್‌ ಹೊಸ ಪಕ್ಷ ಘೋಷಣೆ?

ಚಂಡೀಗಡ(ಅ.27): ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಉಳಿದಿರುವ ಬೆನ್ನಲ್ಲೇ, ಪಂಜಾಬ್‌ ರಾಜಕೀಯ ತೀವ್ರ ಕುತೂಹಲದ ಕಣವಾಗಿದ್ದು, ಪಂಜಾಬ್‌ ಮಾಜಿ ಸಿಎಂ, ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಬುಧವಾರ ಹೊಸ ಪಕ್ಷ ರಚನೆಯ ಘೋಷಣೆ ಮಾಡುವ ಸಾಧ್ಯತೆ ಇದೆ. ಅಮರೀಂದರ್‌ ಬುಧವಾರ ಪತ್ರಿಕಾಗೋಷ್ಠಿಯೊಂದನ್ನು ಕರೆದಿದ್ದು, ಅಲ್ಲಿ ಅವರು ಈ ಕುರಿತು ಮಾಹಿತಿ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಶೀಘ್ರ ಹೊಸ ಪಕ್ಷ ಘೋಷಿಸುವುದಾಗಿ ಕಳೆದ ವಾರ ಅಮರೀಂದರ್‌ ಸಿಂಗ್‌ ತಿಳಿಸಿದ್ದರು. ಅಲ್ಲದೆ ನೂತನ ಮೂರು ಕೃಷಿ ಕಾಯ್ದೆಗಳ ವಾಪಸ್‌ ಪಡೆಯುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಬೇಡಿಕೆಯನ್ನು ಈಡೇರಿಸಿದಲ್ಲಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಸೀಟು ಹಂಚಿಕೆಯ ಸುಳಿವು ನೀಡಿದ್ದರು. ಜೊತೆಗೆ 2 ವಾರದ ಕೆಳಗೆ ಗೃಹ ಸಚಿವ ಅಮಿತ್‌ ಷಾ ಭೇಟಿ ಮಾಡಿದ್ದ ಅಮರಿಂದರ್‌ ಸಿಂಗ್‌, ಈ ಬಗ್ಗೆ ಚರ್ಚೆ ಕೂಡ ನಡೆಸಿದ್ದರು.

ಕಳೆದ ತಿಂಗಳು ಸಿಎಂ ಹುದ್ದೆಯಿಂದ ಬಲವಂತವಾಗಿ ಹೊರದೂಡಲ್ಪಟ್ಟಬಳಿಕ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ನವಜೋತ್‌ಸಿಂಗ್‌ ಸಿಧು ಜೊತೆ ನೇರಾನೇರಾ ಸಮರಕ್ಕೆ ಇಳಿದಿರುವ ಸಿಂಗ್‌, ಸಿಧು ಸೋಲಿಸುವುದೇ ತಮ್ಮ ಪರಮ ಗುರಿ ಎಂದು ಘೋಷಿಸಿದ್ದಾರೆ.

ಮತ್ತೊಂದೆಡೆ ಅಮರಿಂದರ್‌ ಸಿಂಗ್‌ ನಡೆಗೆ, ಪಂಜಾಬ್‌ ಡಿಸಿಎಂ ಸುಖ್ಜಿಂದರ್‌ ಸಿಂಗ್‌ ರಾಂಧವ, ಕ್ಯಾಪ್ಟ್‌ನ್‌ ತಪ್ಪು ಹೆಜ್ಜೆ ಇಡುತ್ತಿದ್ದಾರೆ ಎಂದು ವಿಶ್ಲೇಷಿಸಿದ್ದಾರೆ. ಅಲ್ಲದೇ ಪಾಕಿಸ್ತಾನಿ ಪತ್ರಕರ್ತೆ, ಆರೂಷ್‌ ಅಲಂ ಅವರ ಜತೆಗಿನ ಸಂಬಂಧದ ಕುರಿತು ವಾಗ್ದಾಳಿ ನಡೆಸಿರುವ ಡಿಸಿಎಂ, ಈ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೇ ಕಳೆದ ನಾಲ್ಕೂವರೆ ವರ್ಷದಿಂದ ಅಮರಿಂದರ್‌ ತಮ್ಮ ಫಾಮ್‌ರ್‍ಹೌಸ್‌ನಿಂದ ಹೊರಗೇ ಬಂದಿಲ್ಲ, ಇದೀಗ ದಿಢೀರ್‌ ಅಂತ ಹೊಸ ಪಕ್ಷ ಕಟ್ಟಲು ಮುಂದಾಗಿದ್ದಾರೆ ಎಂದು ನವಜೋತ್‌ ಸಿಂಗ ಸಿಧು ಪತ್ನಿ ನವಜೋತ ಕೌರ್‌ ಸಿಧು ವ್ಯಂಗ್ಯವಾಡಿದ್ದಾರೆ.

* ಅಮರೀಂದರ್‌ಗೆ ಐಎಸ್‌ಐ ಕಂಟಕ

ಪಂಜಾಬ್‌(Punjab) ಮಾಜಿ ಮುಖ್ಯಮಂತ್ರಿ ಕ್ಯಾ. ಅಮರೀಂದರ್‌ ಸಿಂಗ್‌(Amarinder Singh) ಅವರ ಸ್ನೇಹಿತೆಯಾದ ಪತ್ರಕರ್ತೆ(Journalist) ಅರೂಸಾ ಅಲಂ ಅವರಿಗೆ ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್‌ಐನೊಂದಿಗೆ(ISI) ನಂಟು ಇರಬಹುದು ಎಂದು ಕಾಂಗ್ರೆಸ್‌ ಅನುಮಾನ ವ್ಯಕ್ತಪಡಿಸಿದೆ. ಅಲ್ಲದೆ, ‘ಈ ಕುರಿತಾಗಿ ತನಿಖೆ ನಡೆಸಿ, ಸತ್ಯವನ್ನು ಬಯಲು ಮಾಡುತ್ತೇವೆ’ ಎಂದು ಪಂಜಾಬ್‌ ಗೃಹ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಸುಖ್‌ಜಿಂದರ್‌ ರಂಧಾವಾ(Sukhjinder Randhawa) ಹೇಳಿದ್ದಾರೆ.

ಅಮರೀಂದರ್‌ ಕಾಂಗ್ರೆಸ್‌ ತೊರೆದು ಹೊಸ ಪಕ್ಷ ಸ್ಥಾಪನೆ ಘೋಷಣೆ ಮಾಡುತ್ತಿದ್ದಂತೆಯೇ ಈ ವಿದ್ಯಮಾನ ನಡೆದಿರುವುದು ಗಮನಾರ್ಹವಾಗಿದೆ. ‘16 ವರ್ಷದಿಂದ ನನಗೆ ಅರೂಸಾ ಗೊತ್ತು. ನಾನು ಮುಖ್ಯಮಂತ್ರಿಯಾಗಿದ್ದಾಗ ನೀವು ನನ್ನ ಸಂಪುಟದಲ್ಲೇ ಮಂತ್ರಿ ಆಗಿದ್ದಿರಿ. ಆಗ ಸುಮ್ಮನಿದ್ದ ನೀವು ಈಗೇಕೆ ಈ ವಿಷಯ ಕೆದಕುತ್ತಿದ್ದೀರಿ. ಇದು ಸೇಡಿನ ರಾಜಕಾರಣ’ ಎಂದು ಅಮರೀಂದರ್‌ ತಿರುಗೇಟು ನೀಡಿದ್ದಾರೆ.

ಇದಕ್ಕೂ ಮುನ್ನ ಮಾತನಾಡಿದ ರಂಧಾವಾ, ‘ಪಾಕಿಸ್ತಾನದ ಭದ್ರತಾ ವರದಿಗಾರ್ತಿ ಆಗಿರುವ ಅರೂಸಾ ಅಲಂ ಅವರು ಕ್ಯಾ. ಅಮರೀಂದರ್‌ ಸಿಂಗ್‌ ಅವರ ಸ್ನೇಹಿತೆಯಾಗಿದ್ದು, ಅವರು 2004ರಿಂದಲೂ ಸಿಂಗ್‌ ಅವರ ಮನೆಗೆ ಸಾಮಾನ್ಯವಾಗಿ ಆಗ್ಗಾಗ್ಗೆ ಭೇಟಿ ನೀಡುತ್ತಿದ್ದರು. ಜತೆಗೆ ಸಿಂಗ್‌ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲೂ ಅರೂಸಾ ಅಲಂ ಭಾಗಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಆಕೆಗೆ ಐಎಸ್‌ಐನೊಂದಿಗೆ ನಂಟು ಇರಬಹುದು. ಈ ಈ ಹಿನ್ನೆಲೆಯಲ್ಲಿ ಈ ಬಗ್ಗೆ ತನಿಖೆ ಕೈಗೊಳ್ಳುವಂತೆ ಪಂಜಾಬ್‌ ಪೊಲೀಸ್‌ ಮುಖ್ಯಸ್ಥರಿಗೆ ಸೂಚಿಸಲಾಗಿದೆ’ ಎಂದು ಹೇಳಿದರು.

 ಅಮರೀಂದರ್‌ ಜೊತೆ ಮೈತ್ರಿಗೆ ಸಿದ್ಧ: ಬಿಜೆಪಿ

ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾ| ಅಮರಿಂದರ್‌ ಸಿಂಗ್‌ ಹೊಸ ಪಕ್ಷ ಕಟ್ಟುವುದಾಗಿ ಘೋಷಿಸಿದ ಬೆನ್ನಲ್ಲೇ, ‘ಅವರೊಂದಿಗೆ ಮೈತ್ರಿ ಮಾಡಿಕೊಳ್ಳು ಸಿದ್ಧ’ ಎಂದು ಬಿಜೆಪಿ ಹೇಳಿದೆ ಹಾಗೂ ಅವರನ್ನು ‘ದೇಶಭಕ್ತ’ ಎಂದು ಹೊಗಳಿದೆ.

ಕ್ಯಾಪ್ಟನ್‌ ಘೋಷಣೆ ಬಗ್ಗೆ ಬುಧವಾರ ಮಾತನಾಡಿದ ಪಂಜಾಬ್‌ ಬಿಜೆಪಿ ಉಸ್ತಿವಾರಿ ಹಾಗೂ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಷ್ಯಂತ್‌ ಗೌತಮ್‌, ‘ಅಮರೀಂದರ್‌ ಸಿಂಗ್‌ ದೇಶಭಕ್ತರಾಗಿದ್ದು, ದೇಶ ಮೊದಲು ಎನ್ನುವ ಎಲ್ಲರನ್ನೂ ಮೈತ್ರಿಕೂಟಕ್ಕೆ ಸೇರಿಸಿಕೊಳ್ಳಲು ಬಿಜೆಪಿ ಸಿದ್ಧವಿದೆ’ ಎಂದರು.

ಇನ್ನು ರೈತರ ಸಮಸ್ಯೆಗಳನ್ನು ಬಿಜೆಪಿ ಪರಿಹರಿಸಿದರೆ ಬಿಜೆಪಿ ಜೊತೆ ಸೇರುವುದಾಗಿ ಅಮರೀಂದರ್‌ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಗೌತಮ್‌, ‘ಅವರು ರೈತರ ಸಮಸ್ಯೆಗಳನ್ನು ಪರಿಹರಿಸಲು ಕೇಳಿದ್ದಾರೆ. ಇದಕ್ಕಾಗಿ ಅವರೊಂದಿಗೆ ಕುಳಿತು ಮಾತನಾಡಿ ಸಮಸ್ಯೆ ಪರಿಹರಿಸಲಾಗುವುದು. ಅಮರಿಂದರ್‌ ಮುಖ್ಯ ಮಂತ್ರಿಯಾಗುವ ಮೊದಲು ಸೈನಿಕರಾಗಿದ್ದರು ಹಾಗಾಗಿ ಅವರು ದೇಶ ಮೊದಲು ಎನ್ನುವ ಭಾವನೆಯನ್ನು ಹೊಂದಿದ್ದಾರೆ. ಬಿಜೆಪಿಯು ಸಹ ದೇಶ ಮೊದಲು ಎನ್ನುವ ತತ್ವದ ಮೇಲೆ ಕೆಲಸ ಮಾಡುತ್ತದೆ. ಹಾಗಾಗಿ ಅವರನ್ನು ಪಕ್ಷಕ್ಕೆ ಸ್ವಾಗತಿಸುತ್ತೇವೆ’ ಎಂದು ಹೇಳಿದ್ದಾರೆ.