ಅಮರನಾಥ ಯಾತ್ರೆಗೆ ತೆರಳುತ್ತಿದ್ದ 5 ಬಸ್‌ಗಳ ನಡುವೆ ಸರಣಿ ಅಪಘಾತ ಸಂಭವಿಸಿ 36 ಭಕ್ತರಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ಶನಿವಾರ ಜಮ್ಮು ಕಾಶ್ಮೀರದ ರಾಮ್‌ಬನ್‌ ಜಿಲ್ಲೆಯಲ್ಲಿ ಸಂಭವಿಸಿದೆ.

ರಾಂಬನ್/ ಜಮ್ಮು: ಅಮರನಾಥ ಯಾತ್ರೆಗೆ ತೆರಳುತ್ತಿದ್ದ 5 ಬಸ್‌ಗಳ ನಡುವೆ ಸರಣಿ ಅಪಘಾತ ಸಂಭವಿಸಿ 36 ಭಕ್ತರಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ಶನಿವಾರ ಜಮ್ಮು ಕಾಶ್ಮೀರದ ರಾಮ್‌ಬನ್‌ ಜಿಲ್ಲೆಯಲ್ಲಿ ಸಂಭವಿಸಿದೆ. ಜಮ್ಮುವಿನ ಭಗವತಿ ನಗರದಿಂದ ದಕ್ಷಿಣ ಕಾಶ್ಮೀರದ ಪಹಲ್ಗಾಮ್ ಬೇಸ್‌ ಕ್ಯಾಪ್‌ಗೆ ತೆರಳುತ್ತಿದ್ದ ಬಸ್‌ಗಳ ಪೈಕಿ ಒಂದರ ಬ್ರೇಕ್‌ ಫೇಲ್‌ ಆದ ಕಾರಣ ಈ ಸರಣಿ ಅಪಘಾತ ಸಂಭವಿಸಿದೆ. ಗಾಯಗೊಂಡಿರುವ ಭಕ್ತರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ ಬಳಿಕ ಅವರೆಲ್ಲರೂ ಪ್ರಯಾಣ ಮುಂದುವರೆಸಿದ್ದಾರೆ ಎಂದು ರಾಮ್‌ಬನ್‌ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ಸ್ಯಾನಿಟರಿ ಪ್ಯಾಡ್‌ನಲ್ಲಿ ರಾಹುಲ್‌ ಚಿತ್ರ: ಬಿಹಾರ ಕಾಂಗ್ರೆಸ್‌ ಹೊಸ ವಿವಾದ

ಪಟನಾ: ಚುನಾವಣೆ ಹೊಸ್ತಿಲಿನಲ್ಲಿರುವ ಬಿಹಾರದಲ್ಲಿ ಪ್ರಿಯದರ್ಶಿನಿ ಉಡಾನ್‌ ಯೋಜನೆಯಡಿ ಮಹಿಳೆಯರಿಗೆ 5 ಲಕ್ಷ ಸ್ಯಾನಿಟರಿ ಪ್ಯಾಡ್‌ ವಿತರಣೆಗೆ ಕಾಂಗ್ರೆಸ್‌ ಮುಂದಾಗಿದೆ. ಆದರೆ ಪ್ಯಾಡ್‌ನ ಮೇಲೆ ಪಕ್ಷದ ಹಿರಿಯ ನಾಯಕ ರಾಹುಲ್‌ ಗಾಂಧಿ ಫೋಟೋ ಮುದ್ರಿಸಲಾಗಿದೆ. ಜೊತೆಗೆ ಪಕ್ಷ ಗೆದ್ದರೆ ‘ಮಾಯಿ ಬಹಿನ್‌ ಮಾನ್‌ ಯೋಜನೆ’ ಮಹಿಳೆಯರಿಗೆ ಮಾಸಿಕ 2500 ರು. ನೀಡಲಾಗುವುದು ಎಂದು ಮುದ್ರಿಸಲಾಗಿದೆ. ಇದು ವಿವಾದಕ್ಕೆ ಕಾರಣವಾಗಿದೆ. ರಾಹುಲ್‌ ಫೋಟೋ ಬಗ್ಗೆ ಆಡಳಿತಾರೂಢ ಎನ್‌ಡಿಎ ಒಕ್ಕೂಟ ಕಿಡಿಕಾರಿದ್ದು, ‘ಕಾಂಗ್ರೆಸ್‌ ಚುನಾವಣೆಯಲ್ಲಿ ಗೆಲ್ಲುವುದಕ್ಕೋಸ್ಕರ ಎಂಥ ಕೆಳಮಟ್ಟಕ್ಕೆ ಬೇಕಾದರೂ ಹೋಗುತ್ತದೆ. ಸ್ಯಾನಿಟರಿ ಪ್ಯಾಡ್‌ನಲ್ಲಿ ರಾಹುಲ್‌ ಚಿತ್ರದ ಅಗತ್ಯವೇನಿತ್ತು. ಇದು ಮಹಿಳೆಯರಿಗೆ ಮಾಡಿದ ಅವಮಾನವಾಗಿದೆ’ ಎಂದು ಕಿಡಿಕಾರಿದೆ.

ನಾವು ಗೆದ್ದರೆ ತಾಲಿಬಾನ್‌ ರೀತಿ ಸರ್ಕಾರ: ಬಾಂಗ್ಲಾ ಇಸ್ಲಾಮಿಕ್‌ ಪಕ್ಷ ಭರವಸೆ

ಢಾಕಾ: ಬಾಂಗ್ಲಾದೇಶದಲ್ಲಿ ಒಂದು ವೇಳೆ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ತಾಲಿಬಾನ್ ಸರ್ಕಾರವನ್ನು ಮಾದರಿಯನ್ನಾಗಿ ಇಟ್ಟುಕೊಂಡು ರಾಷ್ಟ್ರವ್ಯಾಪಿ ಷರಿಯಾ ಕಾನೂನು ಜಾರಿಗೆ ತರುತ್ತೇವೆ ಎಂದು ಬಾಂಗ್ಲಾದ ಜಮಾತ್‌ - ಚಾರ್‌ ಮೊನ್ನೈ ನಾಯಕ ಮತ್ತು ಇಸ್ಲಾಮಿ ಆಂದೋಲನ ಬಾಂಗ್ಲಾದೇಶದ ಮುಖ್ಯಸ್ಥ ಮುಫ್ತಿ ಸೈಯದ್‌ ಮುಹಮ್ಮದ್‌ ಫೈಜುಲ್ಲಾ ಕರೀಮ್ ಭರವಸೆ ನೀಡಿದ್ದಾರೆ. ಜೊತೆಗೆ ಅಗತ್ಯವಿದ್ದರೆ ಇರಾನ್ ಮಾದರಿಯನ್ನು ಸಹ ಅನುಸರಿಸುತ್ತೇವೆ’ ಎಂದಿದ್ದಾರೆ. 2021ರಲ್ಲಿ ಅಫ್ಘಾನಿಸ್ತಾನ ವಶಪಡಿಸಿಕೊಂಡ ತಾಲಿಬಾನಿಗಳು ಅಲ್ಲಿ ಷರಿಯಾ ಕಾನೂನು ಜಾರಿಗೆ ತಂದಿದ್ದರು. ಇಲ್ಲಿ ಪೂರ್ಣವಾಗಿ ಧರ್ಮಾಧರಿತ ಕಾನೂನುಗಳು ಇದ್ದು, ಮಹಿಳೆಯರ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಲಾಗಿದೆ.

ಬಿಹಾರದಲ್ಲಿ ಮತಪಟ್ಟಿ ಪರಿಷ್ಕರಣೆ ವಿರುದ್ಧ ಎಡಿಆರ್‌ ಸುಪ್ರೀಂಗೆ

ನವದೆಹಲಿ: ಮುಂದಿನ ವರ್ಷ ವಿಧಾನಸಭೆ ಚುನಾವಣೆಗೆ ಸಾಕ್ಷಿಯಾಗಲಿರುವ ಬಿಹಾರದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆಗೆ ಚುನಾವಣಾ ಆಯೋಗ ಆದೇಶಿಸಿರುವುದರ ವಿರುದ್ಧ ಅಸೋಸಿಯೇಷನ್‌ ಆಫ್‌ ಡೆಮಾಕ್ರೆಟಿಕ್‌ ರಿಫಾರ್ಮ್ಸ್‌( ಎಡಿಆರ್‌) ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ಜೂ.24ರಂದು ಚುನಾವಣಾ ಆಯೋಗವು ಬಿಹಾರದಲ್ಲಿ ಅನರ್ಹರ ಹೆಸರು ತೆಗೆದು ಹಾಕಿ, ಅರ್ಹರ ಹೆಸರನ್ನು ಮಾತ್ರ ಸೇರಿಸಲಾಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯನ್ನು ಮಾಡಬೇಕು ಎಂದು ಆದೇಶಿಸಿತ್ತು. ಇದರ ವಿರುದ್ಧ ಎಡಿಆರ್‌ ಅರ್ಜಿ ಸಲ್ಲಿಸಿದ್ದು ಆಯೋಗದ ಕ್ರಮ ಸಂವಿಧಾನದ ವಿಧಿಯ ಉಲ್ಲಂಘನೆ. ಇದರಿಂದ ಲಕ್ಷಾಂತರ ಮತದಾರರು ತಮ್ಮ ಹಕ್ಕಿನಿಂದ ವಂಚಿತರಾಗಬಹುದು ಎಂದು ಆರೋಪಿಸಿದೆ.

ಎಐಎಡಿಎಂಕೆ ಜೊತೆಗೆ ಮೈತ್ರಿಗೆ ವಿಜಯ್‌ಗೆ ಮಾಜಿ ಸಿಎಂ ಇಪಿಎಸ್‌ ಆಹ್ವಾನ

ಚೆನ್ನೈ: ತಮಿಳುನಾಡಿನಲ್ಲಿ ಸಿಎಂ ಸ್ಟಾಲಿನ್‌ ನೇತೃತ್ವದ ಡಿಎಂಕೆ ಸರ್ಕಾರವನ್ನು ಸೋಲಿಸಲು ಎಐಎಡಿಎಂಕೆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವಂತೆ ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ ನಟ ವಿಜಯ್‌ ಅವರ ಟಿವಿಕೆ ಪಕ್ಷಕ್ಕೆ ಆಹ್ವಾನ ನೀಡಿದ್ದಾರೆ. ಪಕ್ಷದ ಚುನಾವಣಾ ಚಿಹ್ನೆ, ಬಾವುಟವನ್ನು ಬಿಡುಗಡೆ ಮಾಡಿ ಮಾತನಾಡಿದ ಪಳನೀಸ್ವಾಮಿ, ‘ಡಿಎಂಕೆ ವಿರುದ್ಧ ಅಸಮಾಧಾನವಿರುವ ಎಲ್ಲಾ ಪಕ್ಷಗಳು ಸರ್ವಾನುಮತವಾಗಿ ಒಗ್ಗೂಡಿ, ಬಲದಿಂದ ಡಿಎಂಕೆಯನ್ನು ಸೋಲಿಸಬೇಕು’ಎಂದು ಹೇಳಿದರು. ಟಿವಿಕೆ ಬಗ್ಗೆ ಕೇಳಿದಾಗ, ನಮ್ಮೊಂದಿಗೆ ಮೈತ್ರಿ ಮಾಡಿಕೊಳ್ಳಲು ಅವಕಾಶವಿದೆ. ಅವರು ನಮ್ಮೊಂದಿಗೆ ಸೇರಿ ಜನವಿರೋಧಿ ಡಿಎಂಕೆ ಸರ್ಕಾರವನ್ನು ಸೋಲಿಸಬಹುದು’ ಎಂದು ಹೇಳಿದರು.