ಧರ್ಮದ್ವೇಷದ ಟ್ವೀಟ್ ತನಿಖೆಗೆ ಪತ್ರಕರ್ತ ಅಸಹಕಾರ, ಜುಬೇರ್ 4 ದಿನ ಪೊಲೀಸ್ ವಶಕ್ಕೆ!
* ಧರ್ಮದ್ವೇಷದ ಟ್ವೀಟ್ ತನಿಖೆಗೆ ಪತ್ರಕರ್ತ ಅಸಹಕಾರ
* ಮೊಬೈಲ್ ಹಸ್ತಾಂತರಕ್ಕೂ ಒಪ್ಪುತ್ತಿಲ್ಲ
* 3 ತಿಂಗಳಲ್ಲಿ 50 ಲಕ್ಷ ಹಣ ಜುಬೇರ್ ಖಾತೆಗೆ
* ಈ ಬಗ್ಗೆ ವಿಚಾರಣೆಗೆ ಪೊಲೀಸರ ನಿರ್ಧಾರ
ನವದೆಹಲಿ(ಜೂ.29): 2018ರಲ್ಲಿ ಹಿಂದೂ ದೇವರ ಬಗ್ಗೆ ಅವಹೇಳನಕಾರಿಯಾಗಿ ಧರ್ಮದ್ವೇಷದ ಕಿಚ್ಚು ಹೊತ್ತಿಸುವ ಟ್ವೀಟ್ ಮಾಡಿದ್ದರು ಎನ್ನಲಾದ ‘ಆಲ್ಟ್‌ನ್ಯೂಸ್’ ಆನ್‌ಲೈನ್ ಮಾಧ್ಯಮದ ಸಂಸ್ಥಾಪಕ ಹಾಗೂ ಪತ್ರಕರ್ತ ಮೊಹಮ್ಮದ್ ಜುಬೇರ್ ಅವರನ್ನು ದಿಲ್ಲಿ ನ್ಯಾಯಾಲಯ ಮಂಗಳವಾರ 4 ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿದೆ.
ಇನ್ನೊಂದೆಡೆ ಅವರು 2018ರ ಧರ್ಮದ್ವೇಷದ ವಿವಾದಿತ ಟ್ವೀಟ್ ಬಗ್ಗೆ ಹಾರಿಕೆ ಉತ್ತರ ನೀಡುತ್ತಿದ್ದಾರೆ. ತಮ್ಮದೇ ಆದ ವಿವಾದಿತ ಟ್ವೀಟನ್ನೂ ಅವರು ಖಚಿತಪಡಿಸುತ್ತಿಲ್ಲ ಎಂದು ತಿಳಿದುಬಂದಿದೆ. ಅಲ್ಲದೆ, ತಾವು ಟ್ವೀಟ್ ಮಾಡಲು ಬಳಸಿದ ಮೊಬೈಲ್ ಹಾಗೂ ಇತರ ವಿದ್ಯುನ್ಮಾನ ಸಾಧನಗಳನ್ನು ಪೊಲೀಸರಿಗೆ ಹಸ್ತಾಂತರಿಸಲು ನಿರಾಕರಿಸುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿಯೇ ಹೆಚ್ಚಿನ ವಿಚಾರಣೆಗೆ ಬಯಸಿ, ದಿಲ್ಲಿ ಮೆಟ್ರೋಪಾಲಿಟನ್ ಕೋರ್ಚ್ ಎದುರು 5 ದಿನ ಕಸ್ಟಡಿಗೆ ಕೋರಿದರು. ಆದರೆ ನ್ಯಾಯಾಧೀಶರು 4 ದಿನ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿದರು.
50 ಲಕ್ಷ ಜಮೆ, ಹಾರಿಕೆ ಉತ್ತರ:
ಈ ನಡುವೆ, ಜುಬೇರ್ ಖಾತೆಗೆ ಕೇವಲ 3 ತಿಂಗಳಲ್ಲಿ 50 ಲಕ್ಷ ರು. ಹರಿದುಬಂದಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಈ ಹಣದ ಮೂಲದ ಹಾಗೂ ಹಣ ಕಳಿಸಿದ ಉದ್ದೇಶದ ಬಗ್ಗೆ ತನಿಖೆ ಮಾಡಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಜುಬೇರ್, ಜನರಿಂದ ದೇಣಿಗೆ ಕೇಳಿ ‘ಆಲ್ಟ್ ನ್ಯೂಸ್’ ನಡೆಸುತ್ತಿದ್ದರು ಎಂಬುದು ಇಲ್ಲಿ ಹಮನಾರ್ಹ.
ಬಿಡುಗಡೆಗೆ ಆಗ್ರಹ:
‘ಪ್ರಧಾನಿ ನರೇಂದ್ರ ಮೋದಿ ಅವರು ಜಿ-7 ಶೃಂಗದಲ್ಲಿ ವಾಕ್ ಸ್ವಾತಂತ್ರ್ಯದ ಬಗ್ಗೆ ಮಾತನಾಡಿದ್ದಾರೆ. ಇದಕ್ಕೆ ಅನುಗುಣವಾಗಿ ಜುಬೇರ್ ಅವರನ್ನು ಬಿಡುಗಡೆ ಮಾಡಬೇಕು’ ಎಂದು ಮಾಧ್ಯಮ ಸಂಪಾದಕರ ಒಕ್ಕೂಟ ಆಗ್ರಹಿಸಿದೆ.
ಬೆಂಗಳೂರು ನಿವಾಸಿ ಜುಬೇರ್!
ಬಂಧಿತ ಪತ್ರಕರ್ತ ಮೊಹಮ್ಮದ್ ಜುಬೇರ್ ಬೆಂಗಳೂರು ನಿವಾಸಿ ಎಂದು ತಿಳಿದುಬಂದಿದೆ. ಬೆಂಗಳೂರಿಂದ ದಿಲ್ಲಿಗೆ ಅವರು ಅನ್ಯ ಕೇಸಿನ ವಿಚಾರಣೆಗೆಂದು ದಿಲ್ಲಿಗೆ ಹೋದಾಗ ಅವರನ್ನು ಬಂಧಿಸಲಾಯಿತು ಎಂದು ಗೊತ್ತಾಗಿದೆ.
‘ಜುಬೇರ್ ಈ ಹಿಂದೆ ಬೆಂಗಳೂರಿನಲ್ಲಿ ಟೆಲಿಕಾಂ ಎಂಜಿನಿಯರ್ ಆಗಿದ್ದರು. ಅವರು ತನಿಖೆಗೆ ಸಹಕರಿಸದೇ ವಿವಾದಿತ ಟ್ವೀಟ್ ಮಾಡಿದ್ದ ಮೊಬೈಲ್ ಹಾಗೂ ವಿದ್ಯುನ್ಮಾನ ಸಾಧನಗಳನ್ನು ಪೊಲೀಸರಿಗೆ ಹಸ್ತಾಂತರಿಸುತ್ತಿಲ್ಲ. ಮೊಬೈಲ್ ಕಳೆದುಕೊಂಡಿದ್ದೇನೆ ಎಂದು ಹೇಳುತ್ತಿದ್ದಾರೆ. ಹೀಗಾಗಿ ಅವರ ಬೆಂಗಳೂರು ನಿವಾಸದಲ್ಲಿ ಶೋಧ ನಡೆಸಲಾಗುವುದು’ ಎಂದು ದಿಲ್ಲಿ ಪೊಲೀಸ್ ಮೂಲಗಳು ಹೇಳಿವೆ.