ನವದೆಹಲಿ(ಆ.13): ನ್ಯಾಯಕ್ಕಾಗಿ ಹೋರಾಡಿದ 23 ವರ್ಷದ ದಲಿತ ಯುವಕನಿಗೆ ಪೊಲೀಸರಿಂದೆ, ಸ್ಥಳೀಯ ಆಡಳಿತಾಧಿಕಾರಿಗಳಿಂದ ನ್ಯಾಯ ಸಿಗಲಿಲ್ಲ. ಇದರಿಂದ ರೋಸಿಹೋದ ಯುವಕ ಪ್ರಸಾದ್ ನೇರವಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ಗೆ ಪತ್ರ ಬರೆದಿದ್ದಾರೆ. ಈತನ ಪತ್ರ ಓದಿದ ರಾಷ್ಟ್ರಪತಿ ತಕ್ಷಣವೇ ಸಮಸ್ಯೆ ಪರಿಹರಿಸಲು ಸೂಚಿಸಿದ್ದಾರೆ. ಹೌದು, ಆಂಧ್ರ ಪ್ರದೇಶದ ಯುವಕ ಪ್ರಸಾದ್ ಹೋರಾಟ ಹೊಸ ದಿಕ್ಕು ಪಡೆದುಕೊಂಡಿದೆ.

3 ಕೋಟಿ ಆಸ್ತಿಗಾಗಿ 79 ವರ್ಷದ ತಂದೆಯನ್ನು ಬೀದಿಗೆ ಬಿಟ್ಟ 'ಸುಪುತ್ರರು'!...

ಕಾನೂನು ವ್ಯವಸ್ಥೆ ನನಗೆ ನ್ಯಾಯ ಕೊಡಲು ವಿಫಲವಾಗಿದೆ. ಹೀಗಾಗಿ ನ್ಯಾಯ ಹಾಗೂ ನನ್ನ ಘನತೆ ಎತ್ತಿ ಹಿಡಿಯಲು ಇನ್ನೊಂದು ಮಾರ್ಗವನ್ನು ಹಿಡಿಯಲು ಬಯಸುತ್ತೇನೆ. ಇದಕ್ಕಾಗಿ ನನಗೆ ನಕ್ಸಲೈಟ್ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಅನುಮತಿ ನೀಡಿ ಎಂದು ಪ್ರಸಾದ್ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ಗೆ ಪತ್ರ ಬರೆದಿದ್ದಾನೆ. ಈತನ ಪತ್ರಕ್ಕ ಸ್ಪಂದಿಸಿದ ರಾಷ್ಟ್ರಪತಿ ಆಂಧ್ರ ಪ್ರದೇಶಕ್ಕೆ ಸಮಸ್ಯೆ ಆಲಿಸಿ ಪರಿಹಸಲು ಸೂಚಿಸಿದ್ದಾರೆ.

ಅಕ್ರಮ ಮರಳುಗಾರಿಕೆಯನ್ನು ಪ್ರಶ್ನಿಸಿದ ಪ್ರಸಾದ್ ಮೇಲೆ ಪೊಲೀಸರ ಹಲವು ಆರೋಪ ಹೊರಿಸಿ ಅರೆಸ್ಟ್ ಮಾಡಲಾಗಿದೆ. ಮುಖ್ಯಮಂತ್ರಿ ವೈ ಎಸ್ ಜಗನ್‌ಮೋಹನ್ ರೆಡ್ಡಿ ಸರ್ಕಾರದ ಶಾಸಕರೊಬ್ಬರ ಆದೇಶದ ಮೇರೆ ಪೊಲೀಸರು ಯುವಕ ಪ್ರಸಾದ್‌ನನ್ನು ಠಾಣೆಗೆ ಕರೆ ತಂದು ತಲೆ ಬೋಳಿಸಲಾಗಿದೆ. ಘಟನೆ ಬೆಳಕಿಗೆ ಬಂದ ಬಳಿಕ ಇನ್ಸ್‌ಪೆಕ್ಟರ್ ಪಿರೋಝ್ ಷಾ ಹಾಗೂ ಇಬ್ಬರೂ ಪೇದೆಗಳನ್ನು ಅಮಾನತು ಮಾಡಲಾಗಿತ್ತು. ಆದರೆ ಪ್ರಮುಖ ಆರೋಪಿಗಳನ್ನು ರಕ್ಷಿಸುವ ಕೆಲಸ ನಡೆದಿದೆ ಎಂದು ಯುವಕ ಆರೋಪಿಸಿದ್ದಾನೆ.

SI ಹಾಗೂ ಪೇದೆ ಅಮಾನತು ಮಾಡಿ ಕಣ್ಣೊರೆಸುವ ತಂತ್ರ ಮಾಡಿದ್ದಾರೆ. ಪ್ರಮುಖ ಆರೋಪಿಗಳಿಗೆ ರಾಜಕೀಯ, ಸರ್ಕಾರದ ಬೆಂಬಲವಿರುವ ಕಾರಣ ಯಾವುದೇ ಕ್ರಮ ಕೈಗೊಂಡಿಲ್ಲ. ಪೊಲೀಸ್ ಅಧಿಕಾರಿಗಳ ದೂರವಾಣಿ ಕರೆಗಳ ವಿವರ ಮುಚ್ಚಿಡಲಾಗಿದೆ. ನಿಜವಾದ ಅಪರಾಧಿಗಳನ್ನು ರಕ್ಷಿಸಲಾಗುತ್ತಿದೆ ಎಂದು ರಾಷ್ಟ್ರಪತಿಗೆ ಬರೆದ ಪತ್ರದಲ್ಲಿ ಪ್ರಸಾದ್ ಉಲ್ಲೇಖಿಸಿದ್ದಾನೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಪೂರ್ವ ಗೋದಾವರಿ ಜಿಲ್ಲಾಧಿಕಾರಿ ತಮ್ಮ ಆರೋಪವನ್ನು ಗಂಭೀರವಾಗಿ ಪರಿಗಣಿಸಿಲ್ಲ, ಇಷ್ಟೇ ಅಲ್ಲ ತಾರತಮ್ಯ ಮಾಡಿದ್ದಾರೆ. ನ್ಯಾಯಕ್ಕಾಗಿ ಮಾಡಿದ ಎಲ್ಲಾ ಪ್ರಯತ್ನಗಳ ವಿಫಲವಾಗಿದೆ. ಹೀಗಾಗಿ ನಕ್ಸಲ್ ಚಟುವಟಿಕೆಯಲ್ಲಿ ಸೇರಿ ನ್ಯಾಯಕ್ಕಾಗಿ ಹೋರಾಡಲು ಅನುಮತಿ ನೀಡಬೇಕು ಎಂದು ಪತ್ರ ಬರದಿದ್ದಾನೆ.

ಯುವಕ ಪ್ರಸಾದ್ ಪತ್ರಕ್ಕೆ ಸ್ಪಂದಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್, ತಕ್ಷಣವೇ ಆಂಧ್ರ ಪ್ರದೇಶ ಸರ್ಕಾರದ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ. ರಾಷ್ಟ್ರಪತಿಗಳಿಂದ ಸೂಚನೆ ಬಂದ ಬೆನ್ನಲ್ಲೇ ಆಂಧ್ರ ಪ್ರದೇಶ ಸರ್ಕಾರ ಎಚ್ಚೆತ್ತುಕೊಂಡಿದೆ. ಕ್ರೂರವಾಗಿ ನಡೆಸಿಕೊಂಡ ಕಾರಣಕ್ಕೆ ಪ್ರಸಾದ್‌ಗೆ 50,000 ರೂಪಾಯಿ ಪರಿಹಾರ ಮೊತ್ತವನ್ನು ನೀಡಲು ನಿರ್ಧರಿಸಲಾಗಿದೆ.

ಇದರ ಬೆನ್ನಲ್ಲೇ ತೆಲುಗು ದೇಶಂ ಪಾರ್ಟಿ ನಾಯಕ ಚಂದ್ರಬಾಬು ನಾಯ್ದು ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಯುವಕರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಕಳೆದಕೊಳ್ಳುತ್ತಿದ್ದಾರೆ. ನಕ್ಸಲೈಟ್ ಸಮಸ್ಯೆಗೆ ಮುಕ್ತಿ ಹಾಡಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಸರ್ಕಾರದ ನಿರ್ಲಕ್ಷ್ಯ ಹಾಗೂ ತಪ್ಪತಸ್ಥರ ವಿರುದ್ಧ ಕ್ರಮ ಕೈಗೊಳ್ಳದ ಕಾರಣ ಯುವಕರು ಈ ರೀತಿ ಅಡ್ಡ ದಾರಿ ಹಿಡಿಯುವ ಅಪಾಯ ಎದುರಾಗುತ್ತಿದೆ. ಇದಕ್ಕೆ ಜಗನ್ ಸರ್ಕಾರ ಕಾರಣ ಎಂದ ಆರೋಪಿಸಿದ್ದಾರೆ.