ಪುರುಷ ಮತ್ತು ಮಹಿಳೆಯ ಅನುಪಸ್ಥಿತಿಯಲ್ಲಿ, ಭಾರತೀಯ ಸಂಸ್ಕೃತಿಯಲ್ಲಿ ವಿವಾಹವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಅದು ಭಾರತೀಯ ಕುಟುಂಬ ಪರಿಕಲ್ಪನೆಯನ್ನು ಮೀರಿದೆ ಎಂದು ರಾಜ್ಯ ಸರ್ಕಾರವು ನ್ನ ವರದಿಯನ್ನು ಸಲ್ಲಿಸಿತ್ತು.
ನವದೆಹಲಿ (ಏ. 14): ತಮ್ಮ ಮದುವೆಗೆ (Marriage) ಮಾನ್ಯತೆ ಕೋರಿ ಸಲಿಂಗ ದಂಪತಿಗಳ (Lesbian Couple) ಸಲ್ಲಿಸಿದ್ದ ಮನವಿಯನ್ನು ಅಲಹಾಬಾದ್ ಹೈಕೋರ್ಟ್ (Allahabad High Court) ವಜಾ ಮಾಡಿದೆ. ಮಹಿಳೆಯೊಬ್ಬಳು ಬಲವಂತವಾಗಿ ಮತ್ತು ಅಕ್ರಮವಾಗಿ ತನ್ನ ಮಗಳನ್ನು ಬಂಧನದಲ್ಲಿಟ್ಟಿದ್ದಾಳೆ, ಆಕೆಯನನು ನಮಗೆ ಒಪ್ಪಿಸಬೇಕು ಎಂದು ಹೇಳಿ ತಾಯಿಯೊಬ್ಬರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ (Habeas Corpus ) ಅರ್ಜಿಯನ್ನು ವಿಚಾರಣೆ ಮಾಡುವ ವೇಳೆ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ (Shekhar Kumar Yadav) ಈ ಆದೇಶವನ್ನು ಪ್ರಕಟಿಸಿದ್ದಾರೆ.
ನ್ಯಾಯಾಲಯದ ಹಿಂದಿನ ನಿರ್ದೇಶನದ ಮೇರೆಗೆ, ಹೆಚ್ಚುವರಿ ಸರ್ಕಾರಿ ವಕೀಲರು (Additional Government Advocate) ಮಗಳು ಮತ್ತು ಅವಳನ್ನು ಬಂಧಿಸಿದ ಮಹಿಳೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ನಂತರ ಇಬ್ಬರೂ ವಯಸ್ಕರಾಗಿದ್ದು, ಪರಸ್ಪರ ಒಪ್ಪಿಗೆಯೊಂದಿಗೆ ಪರಸ್ಪರ ಪ್ರೀತಿಸುತ್ತಿದ್ದರು ಎಂದು ನ್ಯಾಯಾಲಯಕ್ಕೆ ಅವರು ತಿಳಿಸಿದ್ದರು. ಅವರು ತಮ್ಮ ವಯಸ್ಸನ್ನು 23 ಮತ್ತು 22 ವರ್ಷ ಎಂದು ತೋರಿಸಿರುವ ವೈವಾಹಿಕ ಒಪ್ಪಿಗೆ ಪತ್ರವನ್ನು(matrimonial consent letter) ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ದಂಪತಿಗಳು ತಾವು ವಯಸ್ಕರು, ಉತ್ತಮ ಮನಸ್ಸಿನವರು ಮತ್ತು ಪರಸ್ಪರ ತುಂಬಾ ಪ್ರೀತಿಸುತ್ತಿದ್ದೇವೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಯಾವುದೇ ಭಯವಿಲ್ಲದೇ ಪರಸ್ಪರ ಒಪ್ಪಿಗೆ ಪಡೆದು ವಿವಾಹವಾಗಿದ್ದೇವೆ ಎಂದು ಹೇಳಿದ್ದರು.
ಆದ್ದರಿಂದ, ಅವರು ತಮ್ಮ ಜೀವನವನ್ನು ಕಾನೂನುಬದ್ಧವಾಗಿ ಸಮಾಜದ ಮುಂದೆ ಪ್ರಸ್ತುತಪಡಿಸಲು ತಮ್ಮ ಮದುವೆಯನ್ನು ಮಾನ್ಯ ಮಾಡಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ನವತೇಜ್ ಸಿಂಗ್ ಜೋಹರ್ ಮತ್ತು ಯೂನಿಯನ್ ಆಫ್ ಇಂಡಿಯಾ (Navtej Singh Johar v Union of India ) ಪ್ರಕರಣದಲ್ಲಿ ಇಬ್ಬರು ವಯಸ್ಕರಿಗೆ ಪರಸ್ಪರ ಒಪ್ಪಿಗೆಯೊಂದಿಗೆ ಒಟ್ಟಿಗೆ ಇರಲು ಸ್ವಾತಂತ್ರ್ಯವನ್ನು ನೀಡಿದ ಪ್ರಕರಣದಲ್ಲಿ ಅವರು ಸುಪ್ರೀಂ ಕೋರ್ಟ್‌ನ ತೀರ್ಪನ್ನು ಈ ವೇಳೆ ಉಲ್ಲೇಖಿಸಿದ್ದರು. ಹಿಂದೂ ವಿವಾಹ ಕಾಯ್ದೆಯು ಸಲಿಂಗ ವಿವಾಹವನ್ನು ನಿರ್ದಿಷ್ಟವಾಗಿ ವಿರೋಧಿಸುವುದಿಲ್ಲ ಎಂದು ದಂಪತಿಗಳು ಒತ್ತಿ ಹೇಳಿದರು. ಆದ್ದರಿಂದ, ಮದುವೆಯನ್ನು ಮಾನ್ಯ ಮಾಡಬೇಕೆಂದು ಒತ್ತಾಯಿಸಿದ್ದರು.
ವಿಶ್ವದ 25 ಕ್ಕೂ ಹೆಚ್ಚು ದೇಶಗಳು ಸಲಿಂಗ ವಿವಾಹವನ್ನು ಅಂಗೀಕರಿಸಿವೆ, ಸಲಿಂಗ ವಿವಾಹದ ಹಕ್ಕನ್ನು ಪಡೆಯದಿದ್ದರೆ ಅವರ ಮೂಲಭೂತ ಹಕ್ಕುಗಳು ರಾಜಿಯಾಗುತ್ತವೆ ಎಂದೂ ಈ ವೇಳೆ ನ್ಯಾಯಾಲಯದ ಮುಂದೆ ಹೇಳಿದ್ದರು. ಆದರೆ, ಪ್ರತಿವಾದಿಗಳು ಅರ್ಜಿದಾರರ ನಿಲುವಿಗೆ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ, ಭಾರತವು ಭಾರತೀಯ ಸಂಸ್ಕೃತಿ, ಧರ್ಮ ಮತ್ತು ಕಾನೂನಿನ ಪ್ರಕಾರ ನಡೆಯುವ ದೇಶವಾಗಿದ್ದು ಅಲ್ಲಿ ಮದುವೆಯನ್ನು ಒಪ್ಪಂದಕ್ಕೆ ವಿರುದ್ಧವಾಗಿ ಪವಿತ್ರ ಸಂಸ್ಕಾರವೆಂದು ಪರಿಗಣಿಸಲಾಗಿದೆ ಎಂದು ಹೇಳಲಾಗಿದೆ.
"ಭಾರತದಲ್ಲಿ ಮದುವೆಯ ಸಮಯದಲ್ಲಿ, ಹಿಂದೂ ಪುರುಷರು ಮತ್ತು ಮಹಿಳೆಯರು ಪರಸ್ಪರರ ಸುಖ-ದುಃಖಗಳಲ್ಲಿ ಪರಸ್ಪರ ತೊಡಗಿಸಿಕೊಳ್ಳುತ್ತಾರೆ ಎಂದು ದೇವರು ಮತ್ತು ಅಗ್ನಿಗೆ ಸಾಕ್ಷಿಯಾಗಿ ಪ್ರಮಾಣ ಮಾಡುತ್ತಾರೆ" ಎಂದು ರಾಜ್ಯ ಸರ್ಕಾರವು ಸಲ್ಲಿಸಿದ್ದ ವಿವರಣೆಯನ್ನೂ ಹೇಳಿದೆ. ಪುರುಷ ಮತ್ತು ಮಹಿಳೆಯ ಅನುಪಸ್ಥಿತಿಯಲ್ಲಿ, ಭಾರತೀಯ ಸಂಸ್ಕೃತಿಯಲ್ಲಿ ವಿವಾಹವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಅದು ಭಾರತೀಯ ಕುಟುಂಬ ಪರಿಕಲ್ಪನೆಯನ್ನು ಮೀರಿದೆ ಎಂದು ತಿಳಿಸಿತ್ತು.
ಹಿಂದೂ ವಿವಾಹ ಕಾಯಿದೆ 1955, ವಿಶೇಷ ವಿವಾಹ ಕಾಯಿದೆ 1954 ಮತ್ತು ವಿದೇಶಿ ವಿವಾಹ ಕಾಯಿದೆ 1969 ಸಲಿಂಗ ವಿವಾಹವನ್ನು ಅಂಗೀಕರಿಸುವುದಿಲ್ಲ ಎನ್ನುವ ಅಂಶವನ್ನೂ ಕೋರ್ಟ್ ನ ಮುಂದೆ ತರಲಾಗಿದೆ. ವಾಸ್ತವವಾಗಿ, ಮುಸ್ಲಿಮರು, ಬೌದ್ಧರು, ಜೈನರು, ಸಿಖ್ಖರು ಮುಂತಾದವರಲ್ಲಿಯೂ ಸಹ ಸಲಿಂಗ ವಿವಾಹವನ್ನು ಗುರುತಿಸಲಾಗಿಲ್ಲ ಎಂದು ತಿಳಿಸಲಾಗಿದೆ.
