ಮುಸ್ಲಿಮರು ಅಲ್ಲಾಹನಿಂದ ದೂರ ಸರಿದಿರುವುದರಿಂದ ಇಂದಿನ ಪರಿಸ್ಥಿತಿ ಬಂದಿದೆ ಎಂದು ಫಾರೂಕ್ ಅಬ್ದುಲ್ಲಾ ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲಾಹನ ಮೇಲೆ ಸಂಪೂರ್ಣ ನಂಬಿಕೆ ಇಟ್ಟಾಗ ಮಾತ್ರ ಎಲ್ಲವೂ ಸರಿಹೋಗುತ್ತದೆ ಎಂದು ಅವರು ಹೇಳಿದ್ದಾರೆ.
ಜಮ್ಮು ಕಾಶ್ಮೀರ: ಅಲ್ಲಾಹನಿಂದ ದೂರವಿರುವುದರಿಂದ ಇಂದು ನಮ್ಮ(ಮುಸ್ಲಿಮರ) ಪರಿಸ್ಥಿತಿ ಕೆಟ್ಟಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಮತ್ತು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ದೇಶದ ಮುಸ್ಲಿಮರ ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಫಾರೂಕ್ ಅಬ್ದುಲ್ಲಾ ಅವರು, ನಾವು ಹೆಸರಿಗೆ ಮಾತ್ರ ಮುಸ್ಲಿಮರೇ ಹೊರತು ಆಚರಣೆಯಲ್ಲಿ ಮುಸ್ಲಿಮರಲ್ಲ. ಯಾವತ್ತೂ ಅಲ್ಲಾಹನ ಮೇಲೆ ಸಂಪೂರ್ಣ ನಂಬಿಕೆ ಇಡುತ್ತೇವೋ ಆ ದಿನವೇ ಎಲ್ಲ ಸರಿಹೋಗಲಿದೆ. ಹೀಗಾಗಿ ನಾವು ನಮ್ಮ ಕಾರ್ಯಗಳನ್ನು ಸರಿಪಡಿಸಿಕೊಂಡು ಮತ್ತು ಅಲ್ಲಾನಲ್ಲಿ ಸಂಪೂರ್ಣ ನಂಬಿಕೆಯನ್ನು ಹೊಂದಿದ ದಿನ ಅವನು(ದೇವರು) ಮಾತ್ರ ಇರುತ್ತಾನೆ, ಉಳಿದೆಲ್ಲವೂ ಕಣ್ಮರೆಯಾಗುತ್ತದೆ. ನಂತರ ಇನ್ಶಾ ಅಲ್ಲಾಹ್ ಮುಸ್ಲಿಮರು ಮತ್ತೆ ಎದ್ದು ಕಾಣುತ್ತಾರೆ ಎಂದಿದ್ದಾರೆ.
ಇದನ್ನೂ ಓದಿ: ವಕ್ಫ್ ಜೆಪಿಸಿ ಸಭೆಯಲ್ಲಿ ಗದ್ದಲ: 10 ವಿಪಕ್ಷ ಸಂಸದರು ಸಸ್ಪೆಂಡ್
ವಕ್ಫ್ ತಿದ್ದುಪಡಿ ಬಗ್ಗೆ ಹೇಳಿದ್ದೇನು?
ವಕ್ಫ್ ತಿದ್ದುಪಡಿ ವಿಚಾರವಾಗಿಯೂ ಮಾತನಾಡಿರುವ ಫಾರೂಕ್ ಅಬ್ದುಲ್ಲಾ ಅವರು, 'ಅಲ್ಲಾಹನು ವಕ್ಫ್ ಅನ್ನು ಉಳಿಸುತ್ತಾನೆ, ಎಲ್ಲವನ್ನೂ ಸರಿಪಡಿಸುತ್ತಾನೆ. ವಕ್ಫ್ ತಿದ್ದುಪಡಿ ಹೆಸರಿನಲ್ಲಿ ನಿಮಗೆ ಬೇಕಾದುದನ್ನು ಮಾಡಿ. ಆದರೆ ಅಲ್ಲಾಹನ ಹೆಸರನ್ನು ಅಳಿಸಲು ಸಾಧ್ಯವಿಲ್ಲ. ಅದರ ಪ್ರವಾದಿಯನ್ನು ನಾಶಮಾಡಲಾಗುವುದಿಲ್ಲ. ಅಲ್ಲಾಹ ಸರ್ವಸ್ವ, ಅವನ ಹೊರತಾಗಿ ಇಲ್ಲಿ ಏನೂ ಇಲ್ಲ ಎಂದಿದ್ದಾರೆ.
ಇದನ್ನೂ ಓದಿ: ಎಲ್ಲಾ ಧರ್ಮಗಳ ಧಾರ್ಮಿಕ ಆಸ್ತಿಗಳಿಗೆ ಏಕರೂಪ ಕಾನೂನು ಮಾಡಿ: ವಿಎಚ್‌ಪಿ ಸಲಹೆ
ಈ ಬಾರಿಯ ಸಂಸತ್ತಿನ ಬಜೆಟ್ ಅಧಿವೇಶನ ಜನವರಿ 31 ರಿಂದ ಪ್ರಾರಂಭವಾಗಲಿದ್ದು, ಆಡಳಿತಾರೂಢ ಎನ್‌ಡಿಎ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಬಹುಮತ ಹೊಂದಿರುವ ಕಾರಣ ಅಧಿವೇಶನದ ಮೊದಲ ಹಂತದಲ್ಲಿ ವಕ್ಫ್ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಬಹುದು. ಇದಕ್ಕೂ ಮೊದಲು, ಪ್ರತಿಪಕ್ಷಗಳ ವಿರೋಧದ ನಡುವೆಯೂ ವಕ್ಫ್ ಮೇಲಿನ ಸಂಸತ್ತಿನ ಜಂಟಿ ಸಮಿತಿಯು ಆಡಳಿತ ಒಕ್ಕೂಟದ ತಿದ್ದುಪಡಿಗಳನ್ನು ಅಂಗೀಕರಿಸಿದೆ.
