Asianet Suvarna News Asianet Suvarna News

ಪ್ರವಾಸಿಗರ ಸ್ವರ್ಗ ಪಿಒಕೆ; ಹೋಗಿ ಬರಲು ತಡವೇಕೆ!? ಹೇಳಿ ಓಕೆ..ಓಕೆ!

ಪಾಕ್‌ ಆಕ್ರಮಿತ ಕಾಶ್ಮೀರ ಭಾರತದ ಪಾಲಿಗೆ ಅತಿ ಮುಖ್ಯವಾದ ಸ್ಥಳ. ಏಕೆಂದರೆ ಪಿಒಕೆ ಭಾರತದ ನೆರೆಯ ಹಲವು ದೇಶಗಳೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ. ಪಂಜಾಬ್‌ ಮತ್ತು ನಾತ್‌ರ್‍-ವೆಸ್ಟ್‌ ಫ್ರಂಟಿಯರ್‌ ಪ್ರಾವಿನ್ಸ್‌, ಪಶ್ಚಿಮ ಭಾಗದಲ್ಲಿ ಪಾಕಿಸ್ತಾನ, ವಾಯವ್ಯದಲ್ಲಿ ಅಷ್ಘಾನಿಸ್ತಾನದ ವಖಾನ್‌ ಕಾರಿಡಾರ್‌, ಉತ್ತರದಲ್ಲಿ ಚೀನಾದ ಕ್ಸಿನ್‌ಜಾಂಗ್‌ ಪ್ರಾಂತ್ಯ ಮತ್ತು ಪೂರ್ವದಲ್ಲಿ ಜಮ್ಮು ಮತ್ತು ಕಾಶ್ಮೀರದೊಂದಿಗೆ ಗಡಿಯನ್ನು ಹಂಚಿಕೊಂಡಿದೆ. 

All you need to know about Centre govt next agenda to be getting back PoK
Author
Bengaluru, First Published Jan 13, 2020, 6:42 PM IST
  • Facebook
  • Twitter
  • Whatsapp

ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್‌ 370ಯನ್ನು ರದ್ದು ಮಾಡಿ, ಎರಡು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿತ್ತು. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರದ ಮುಂದಿನ ಗುರಿ ಪಾಕ್‌ ಆಕ್ರಮಿತ ಕಾಶ್ಮೀರ (ಪಿಒಕೆ) ಎಂದೇ ಹೇಳಲಾಗುತ್ತಿತ್ತು. ಅದಕ್ಕೆ ಪುಷ್ಟಿನೀಡುವಂತೆ ಸಂಸತ್ತು ಬಯಸಿದರೆ ಪಿಒಕೆ ಮರುವಶ ಮಾಡಿಕೊಳ್ಳಲು ಸಿದ್ಧ ಎಂದು ನೂತನ ಸೇನಾ ಮುಖ್ಯಸ್ಥ ಜ ಎಂ.ಎಂ ನರವಣೆ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಪಿಒಕೆ ಕುರಿತ ಕುತೂಹಲಕಾರಿ ವಿವರ ಇಲ್ಲಿದೆ.

ಇಂಥ ಹತ್ತಾರು ಪ್ರವಾಸಿ ಸ್ವರ್ಗಗಳು ಪಿಒಕೆಯಲ್ಲಿವೆ!

ನೀಲಂ ವ್ಯಾಲಿ, ರಾವಲ್‌ಕೋಟ್‌, ಬಂಜೋಸಾ ಸರೋವರ, ಝೇಲಂ ಕಣಿವೆ, ರಾಮ್‌ಕೋಟ್‌ ಕೋಟೆ, ಟೋಲಿ ಪಿರ್‌, ಪಿರ್‌ ಚಿನಾಸಿ, ಲೀಪಾ ಕಣಿವೆ ಹೀಗೆ ಹತ್ತಾರು ನಯನಮನೋಹರ ಪ್ರವಾಸಿ ತಾಣಗಳು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿವೆ. ಅವುಗಳಲ್ಲಿ ಕೆಲವು ತಾಣಗಳು ಜಮ್ಮು ಕಾಶ್ಮೀರದ ಪ್ರವಾಸಿ ತಾಣಗಳಿಗಿಂತ ಸುಂದರವಾಗಿವೆ. ಆದರೂ ಪಾಕಿಸ್ತಾನ ಅವುಗಳನ್ನು ಅಭಿವೃದ್ಧಿಪಡಿಸಿಲ್ಲ. ಪಿಒಕೆ ಭಾರತಕ್ಕೆ ಲಭಿಸಿದರೆ ಈ ತಾಣಗಳನ್ನು ಜಾಗತಿಕ ಪ್ರವಾಸಿ ತಾಣಗಳನ್ನಾಗಿ ರೂಪಿಸಲು ಸಾಧ್ಯವಿದೆ.

ರೊಮ್ಯಾನ್ಸ್‌ ಮಾಡೋಕೆ ಸ್ವಿಟ್ಜರ್‌ಲ್ಯಾಂಡೇ ಬೇಕಿಲ್ಲ ಭಾರತದ ಈ ಸ್ಥಳಕ್ಕೆ ಹೋದ್ರೂ ಸಾಕು!

ಪಾಕ್‌ ಆಕ್ರಮಿತ ಕಾಶ್ಮೀರ ಭಾರತಕ್ಕೆ ಏಕೆ ಮುಖ್ಯ?

ಪಾಕ್‌ ಆಕ್ರಮಿತ ಕಾಶ್ಮೀರ ಭಾರತದ ಪಾಲಿಗೆ ಅತಿ ಮುಖ್ಯವಾದ ಸ್ಥಳ. ಏಕೆಂದರೆ ಪಿಒಕೆ ಭಾರತದ ನೆರೆಯ ಹಲವು ದೇಶಗಳೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ. ಪಂಜಾಬ್‌ ಮತ್ತು ನಾತ್‌ರ್‍-ವೆಸ್ಟ್‌ ಫ್ರಂಟಿಯರ್‌ ಪ್ರಾವಿನ್ಸ್‌, ಪಶ್ಚಿಮ ಭಾಗದಲ್ಲಿ ಪಾಕಿಸ್ತಾನ, ವಾಯವ್ಯದಲ್ಲಿ ಅಷ್ಘಾನಿಸ್ತಾನದ ವಖಾನ್‌ ಕಾರಿಡಾರ್‌, ಉತ್ತರದಲ್ಲಿ ಚೀನಾದ ಕ್ಸಿನ್‌ಜಾಂಗ್‌ ಪ್ರಾಂತ್ಯ ಮತ್ತು ಪೂರ್ವದಲ್ಲಿ ಜಮ್ಮು ಮತ್ತು ಕಾಶ್ಮೀರದೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಹೀಗಾಗಿ ಪಾಕ್‌ ಆಕ್ರಮಿತ ಕಾಶ್ಮೀರವು ವ್ಯೂಹಾತ್ಮಕವಾಗಿಯೂ ಬಹಳ ಪ್ರಾಮುಖ್ಯತೆಯನ್ನು ಪಡೆದಿದೆ.

ಪಿಒಕೆ ಪಾಕ್‌ ವಶವಾಗಿದ್ದು ಹೇಗೆ?

ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಐತಿಹಾಸಿಕವಾಗಿ ಜಮ್ಮು ಮತ್ತು ಕಾಶ್ಮೀರದ ಹಿಂದಿನ ರಾಜಪ್ರಭುತ್ವಕ್ಕೆ ಸೇರಿದೆ. 1947ರಲ್ಲಿ ಭಾರತ ವಿಭಜನೆ ವೇಳೆ ಜಮ್ಮು-ಕಾಶ್ಮೀರದ ಮಹಾರಾಜ ಹರಿಸಿಂಗ್‌ ಅವರಿಗೆ ಜಮ್ಮು-ಕಾಶ್ಮೀರವನ್ನು ಭಾರತ ಅಥವಾ ಪಾಕಿಸ್ತಾನಕ್ಕೆ ಸೇರಿಸಬಹುದು ಎಂಬ ಆಯ್ಕೆ ನೀಡಲಾಗಿತ್ತು. ಆದರೆ ಹರಿಸಿಂಗ್‌ ಮೊದಲಿಗೆ ಜಮ್ಮು-ಕಾಶ್ಮೀರವನ್ನು ಎರಡೂ ದೇಶಗಳಿಗೂ ಸೇರಿಸದೆ ಸ್ವತಂತ್ರವಾಗಿ ಆಡಳಿತ ನಡೆಸಲು ಇಚ್ಛಿಸಿದರು. ಆದರೆ 1947ರಲ್ಲಿ ಪಾಕಿಸ್ತಾನದ ಪಾಸ್ತೂನ್‌ ಬುಡಕಟ್ಟು ಜನಾಂಗ ಜಮ್ಮು-ಕಾಶ್ಮೀರದ ಮೇಲೆ ಆಕ್ರಮಣ ಮಾಡಿತು.

ಪಾಕ್‌ ಸೇನೆ ಬೆಂಬಲಿತ ಬುಡಕಟ್ಟು ಜನಾಂಗ ನಾತ್‌ರ್‍ ವೆಸ್ಟ್‌ ಫ್ರಂಟಿಯರ್‌ ಪ್ರಾವಿನ್ಸ್‌ನಿಂದ ನುಸುಳಿ ಜಮ್ಮು-ಕಾಶ್ಮೀರವನ್ನು ಬಿಟ್ಟುಕೊಡುವಂತೆ ಹರಿಸಿಂಗ್‌ಗೆ ಆದೇಶಿಸಿತು. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಿ ಪೂಂಚನ್ನು ವಶಪಡಿಸಿಕೊಂಡಿತು. ಜೊತೆಗೆ ನುಸುಳುಕೋರರು ಮುಜಾಫ್ಫರ್‌ಬಾದ್‌ ಮತ್ತು ಬಾರಾಮುಲ್ಲಾವನ್ನೂ ವಶಪಡಿಸಿಕೊಂಡರು. ಈ ಪರಿಸ್ಥಿತಿಯ ನಿಯಂತ್ರಣಕ್ಕೆ ಮಹಾರಾಜ ಹರಿಸಿಂಗ್‌ ಆಗಿನ ಭಾರತದ ಗವರ್ನರ್‌ ಜನರಲ್‌ ಮೌಂಟ್‌ ಬ್ಯಾಟನ್‌ ಬಳಿ ಸೇನೆಯ ನೆರವು ಕೇಳಿದರು.

ಇದಾದ ಬಳಿಕ ಹರಿಸಿಂಗ್‌ ಜಮ್ಮು-ಕಾಶ್ಮೀರವನ್ನು ಭಾರತದ ಒಕ್ಕೂಟದೊಂದಿಗೆ ಸೇರಿಸಲು 1947ರ ಅಕ್ಟೋಬರ್‌ 26ರಂದು ಒಪ್ಪಿದರು. ಹಾಗಾಗಿ ಪಿಒಕೆ ಕಾನೂನುಬದ್ಧವಾಗಿ ಭಾರತದ ಅಂತರ್ಗತ ಭಾಗ. ಆದರೆ ಆ ವರ್ಷ ಪಾಕಿಸ್ತಾನ ಸೇನೆಯು ಬುಡಕಟ್ಟು ಜನರ ಮೂಲಕ ಆಕ್ರಮಣ ನಡೆಸಿ ವಶಪಡಿಸಕೊಂಡ ಪ್ರದೇಶಗಳು ಈಗಲೂ ಪಾಕಿಸ್ತಾನದ ಕಾನೂನುಬಾಹಿರ ನಿಯಂತ್ರಣದಲ್ಲಿವೆ. ಆದರೆ ಪಾಕ್‌ ಆಕ್ರಮಿತ ಕಾಶ್ಮೀರವನ್ನು ಪಾಕಿಸ್ತಾನ ಒಂದು ಪ್ರತ್ಯೇಕ ಆಡಳಿತ ಪ್ರದೇಶವೆಂದೇ ಆಳುತ್ತಿದೆ. ಗಿಲ್ಗಿಟ್‌-ಬಾಲ್ಟಿಸ್ತಾನದ ಬಗ್ಗೆ ಪಾಕಿಸ್ತಾನದ ಸಂವಿಧಾನದಲ್ಲೂ ಉಲ್ಲೇಖವಿಲ್ಲ.

ಜನಮತಗಣನೆಗೆ ಸಲಹೆ ನೀಡಿದ್ದ ಮೌಂಟ್‌ ಬ್ಯಾಟನ್‌

ಜಮ್ಮು-ಕಾಶ್ಮೀರದ ಮೇಲೆ ದಾಳಿಯಾದ ಸಂದರ್ಭದಲ್ಲಿ ಮಹಾರಾಜ ಹರಿಸಿಂಗ್‌ ಭಾರತದ ನೆರವು ಕೇಳಿದಾಗ ಆಗಿನ ಭಾರತದ ಗವರ್ನರ್‌ ಜನರಲ್‌ ಮೌಂಟ್‌ ಬ್ಯಾಟನ್‌ ಜಮ್ಮು-ಕಾಶ್ಮೀರ ಭಾರತದ ಭಾಗವಾಗಬೇಕೇ, ಇಲ್ಲಾ ಪಾಕಿಸ್ತಾನದ ವಶವಾಗಬೇಕೇ ಎಂಬುದನ್ನು ಜನಮತಗಣನೆಯ ಮೂಲಕ ನಿರ್ಧರಿಸುವುದು ಒಳಿತು ಎಂಬ ಸಲಹೆ ನೀಡಿದ್ದರು. ಇದರಂತೆ ಭಾರತ ಜನಮತಗಣನೆಗೆ ಮುಂದಾಗಿತ್ತು. ಆದರೆ ಪಾಕಿಸ್ತಾನ ಮತ್ತು ಕೆಲ ಕಾಶ್ಮೀರಿಗಳು ಭಾರತದ ಈ ಕ್ರಮವನ್ನು ಪ್ರಶ್ನಿಸಿದರು. ಇದರ ಹೊರತಾಗಿಯೂ ಹರಿಸಿಂಗ್‌ 1947ರ ಅಕ್ಟೋಬರ್‌ 26ರಂದು ಕಾಶ್ಮೀರವನ್ನು ಭಾರತದ ಒಕ್ಕೂಟಕ್ಕೆ ಸೇರಿಸುವ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆದರೆ ಮಹಾರಾಜ ಹರಿಸಿಂಗ್‌ ಅವರಿಂದ ಭಾರತ ಒತ್ತಾಯಪೂರ್ವಕವಾಗಿ ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡಿದೆ ಎಂದು ಪಾಕಿಸ್ತಾನ ವಾದಿಸುತ್ತಿದೆ.

ಇದು ಭಾರತದ ಕಾಶ್ಮೀರಕ್ಕಿಂತ 3 ಪಟ್ಟು ದೊಡ್ಡದು!

1947ರಲ್ಲಿ ಪಿಒಕೆಯನ್ನು ವಶಪಡಿಸಿಕೊಂಡಿದ್ದ ಪಾಕಿಸ್ತಾನ ಅದನ್ನು ಆಜಾದ್‌ ಜಮ್ಮು-ಕಾಶ್ಮೀರ ಮತ್ತು ಗಿಲ್ಗಿಟ್‌-ಬಾಲ್ಟಿಸ್ತಾನವನ್ನು ಒಳಗೊಂಡಂತೆ ಉತ್ತರ ಪ್ರದೇಶಗಳು ಎಂದು ವಿಭಜಿಸಿಕೊಂಡಿದೆ. ‘ಆಜಾದ್‌ ಜಮ್ಮು ಮತ್ತು ಕಾಶ್ಮೀರ’ವನ್ನು ಆಜಾದ್‌ ಕಾಶ್ಮೀರ ಎಂದೂ ಪಾಕ್‌ ಕರೆಯುತ್ತದೆ. ಭಾರತವು ಇದನ್ನೆಲ್ಲ ಸೇರಿಸಿ ‘ಪಾಕ್‌ ಆಕ್ರಮಿತ ಕಾಶ್ಮೀರ’ ಎಂದು ಕರೆಯುತ್ತದೆ.

ಆಜಾದ್‌ ಕಾಶ್ಮೀರದ ಪ್ರದೇಶವು 13,300 ಚದರ ಕಿಲೋಮೀಟರ್‌ (ಭಾರತೀಯ ಕಾಶ್ಮೀರದ ಸುಮಾರು 3 ಪಟ್ಟು) ವಿಸ್ತಾರವಾಗಿದೆ ಮತ್ತು ಅದರ ಜನಸಂಖ್ಯೆಯು ಸುಮಾರು 45 ಲಕ್ಷಗಳಷ್ಟಿದೆ. ಗಿಲ್ಗಿಟ್‌ ಬಾಲ್ಟಿಸ್ತಾನ್‌ 73,000 ಚ.ಕೀ.ಮೀ ವಿಸ್ತೀರ್ಣ ಇದ್ದು 19 ಲಕ್ಷ ಜನಸಂಖ್ಯೆ ಹೊಂದಿದೆ.

ತಾಜ್‌ ಮಹಲ್ ಆಯ್ತು ಈಗ ವೈಟ್‌ಹೌಸ್‌ ರಹಸ್ಯವೂ ಬಯಲಾಯ್ತು!

ಪಿಒಕೆ ಸ್ವಲ್ಪ ಭಾಗ ಚೀನಾ ವಶದಲ್ಲಿದೆ

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಹಂಜಾ-ಗಿಲ್ಗಿಟ್‌, ಷಾಕ್ಸ್‌ಗಮ… ಕಣಿವೆ, ರಾಕ್ಸಮ… ಮತ್ತು ಬಾಲ್ಟಿಸ್ತಾನ್‌ ಪ್ರದೇಶವನ್ನು 1963ರಲ್ಲಿ ಪಾಕಿಸ್ತಾನವು ಚೀನಾಕ್ಕೆ ಹಸ್ತಾಂತರಿಸಿತು. ಈ ಪ್ರದೇಶವನ್ನು ಬಿಟ್ಟುಕೊಟ್ಟಪ್ರದೇಶ ಅಥವಾ ಟ್ರಾನ್ಸ್‌-ಕಾರಾಕೋರಮ… ಟ್ರ್ಯಾಕ್ಟ್ ಎಂದು ಕರೆಯಲಾಗುತ್ತದೆ.

ಪ್ರತ್ಯೇಕ ಅಧ್ಯಕ್ಷ, ಪ್ರಧಾನಿ, ಸುಪ್ರೀಂಕೋರ್ಟ್‌

ಪಿಒಕೆ ಜನರ ಪ್ರಮುಖ ಉದ್ಯೋಗ ಕೃಷಿ. ಇವರ ಆದಾಯದ ಮುಖ್ಯ ಮೂಲವೆಂದರೆ ಮೆಕ್ಕೆಜೋಳ, ಗೋಧಿ, ಅರಣ್ಯ ಮತ್ತು ಜಾನುವಾರುಗಳು. ಈ ಪ್ರದೇಶದಲ್ಲಿ ಕಡಿಮೆ ದರ್ಜೆಯ ಕಲ್ಲಿದ್ದಲು ನಿಕ್ಷೇಪಗಳು, ಸೀಮೆಸುಣ್ಣದ ಮೀಸಲು, ಬಾಕ್ಸೈಟ್‌ ನಿಕ್ಷೇಪಗಳು ಕಂಡುಬರುತ್ತವೆ. ಕೆತ್ತಿದ ಮರದ ವಸ್ತುಗಳು, ಜವಳಿ ಮತ್ತು ರತ್ನಗಂಬಳಿಗಳನ್ನು ತಯಾರಿಸುವುದು ಈ ಪ್ರದೇಶಗಳಲ್ಲಿರುವ ಕೈಗಾರಿಕೆಗಳ ಮುಖ್ಯ ಉತ್ಪನ್ನಗಳಾಗಿವೆ. ಈ ಪ್ರದೇಶದಲ್ಲಿ ಶಾಲೆ ಮತ್ತು ಕಾಲೇಜುಗಳ ಕೊರತೆ ಇದೆ; ಆದರೂ ಇಲ್ಲಿ 72% ಸಾಕ್ಷರತಾ ಪ್ರಮಾಣವಿದೆ. ಇಲ್ಲಿನ ಆಡಳಿತವು ಪಾಕಿಸ್ತಾನದ ನಿಯಂತ್ರಣದಲ್ಲಿದ್ದರೂ ಪಿಒಕೆಗೆ ಪ್ರತ್ಯೇಕ ಅಧ್ಯಕ್ಷ ಮತ್ತು ಪ್ರಧಾನಿ ಇದ್ದಾರೆ. ಪಿಒಕೆಯ ಈಗಿನ ಅಧ್ಯಕ್ಷ ಸರ್ದಾರ್‌ ಮಸೂದ್‌ ಖಾನ್‌, ಪ್ರಧಾನಿ ರಾಜಾ ಮಹಮ್ಮದ್‌ ಫಾರೂಕ್‌ ಹೈದರ್‌. ಹಾಗೆಯೇ, ಪಿಒಕೆಗೆ ತನ್ನದೇ ಆದ ಸುಪ್ರೀಂಕೋರ್ಟ್‌ ಮತ್ತು ಹೈಕೋರ್ಟ್‌ ಇದೆ.

ನಾನಾ ಭಾಷೆಗಳ ತವರೂರು

ಆಜಾದ್‌ ಕಾಶ್ಮೀರದ ಅಧಿಕೃತ ಭಾಷೆ ಉರ್ದು ಆದರೂ ಆಂಗ್ಲ ಭಾಷೆಯನ್ನು ಹೆಚ್ಚಾಗಿ ಬಳಸಲಾಗುತ್ತದೆ. ಹಾಗಿದ್ದರೂ, ಬಹುಪಾಲು ಜನರು ಇತರ ಭಾಷೆಗಳನ್ನು ಮಾತನಾಡುವರು. ಇವುಗಳಲ್ಲಿ ಅಗ್ರಗಣ್ಯವೆಂದರೆ ಪಹಾರಿ-ಪೋಥ್ವರಿ ಮತ್ತು ಅದರ ವಿವಿಧ ಉಪಭಾಷೆಗಳು. ಗುಜಾರಿ ಮತ್ತು ಕಾಶ್ಮೀರಿ ಮಾತನಾಡುವ ಗಣನೀಯ ಸಮುದಾಯಗಳಿವೆ. ಜೊತೆಗೆ ಶಿನಾ, ಪಾಷ್ಟೋ ಮತ್ತು ಕುಂಡಲ… ಶಾಹಿ ಮಾತನಾಡುವ ಸಮುದಾಯವೂ ಇದೆ. ಪಾಷ್ಟೋ ಮತ್ತು ಇಂಗ್ಲಿಷ್‌ ಹೊರತುಪಡಿಸಿ ಈ ಭಾಷೆಗಳು ಇಂಡೋ-ಆರ್ಯನ್‌ ಭಾಷೆಗೆ ಸೇರಿವೆ.

ಶ್ರೀಮಂತ ಪಿಒಕೆ ಸ್ವಲ್ಪವೂ ಅಭಿವೃದ್ಧಿಯಾಗಿಲ್ಲ ಏಕೆ?

ಅಜಾದ್‌ ಕಾಶ್ಮೀರ ಅಥವಾ ಪಾಕ್‌ ಆಕ್ರಮಿತ ಕಾಶ್ಮೀರದ ಜಿಡಿಪಿ 320 ಕೋಟಿ ಡಾಲರ್‌. ಇಲ್ಲಿನ ಆರ್ಥಿಕತೆಯು ಕೃಷಿಯನ್ನೇ ಅವಲಂಬಿಸಿದೆ. ದಕ್ಷಿಣದ ಜಿಲ್ಲೆಯ ಹಲವರು ಪಾಕಿಸ್ತಾನದ ಸೇನೆ ಸೇರಿದ್ದಾರೆ. ಇನ್ನುಳಿದವರು ಯುರೋಪ್‌ ಮತ್ತು ಮಧ್ಯಪ್ರಾಚ್ಯಗಳಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಪಾಕಿಸ್ತಾನದ ಆಡಳಿತಕ್ಕೆ ಒಳಪಟ್ಟಿರುವ ಪಾಕ್‌ ಆಕ್ರಮಿತ ಕಾಶ್ಮೀರವು ತೀರಾ ಹಿಂದುಳಿದಿದೆ. ಅಲ್ಲಿ ಯಾವುದೇ ಅಭಿವೃದ್ಧಿ ಕಾರ‍್ಯಗಳೂ ಆಗುತ್ತಿಲ್ಲ. ಹಾಗಾಗಿ ಇಲ್ಲಿನ ಬಡ ಜನರನ್ನು ಪಾಕಿಸ್ತಾನ ಭಯೋತ್ಪಾದನೆಗೆ ತರಬೇತಿ ನೀಡಿ ಉಗ್ರರನ್ನಾಗಿ ಮಾಡುತ್ತಿದೆ. ಇಲ್ಲಿ ಸ್ವರ್ಗಸದೃಶ ಪ್ರವಾಸಿ ತಾಣಗಳಿವೆ. ಆದರೂ ಅವುಗಳನ್ನು ಅಭಿವೃದ್ಧಿಪಡಿಸಿ ಪ್ರವಾಸಿಗರನ್ನು ಆಕರ್ಷಿಸುವ ಕಾರ್ಯಕ್ಕೆ ಪಾಕಿಸ್ತಾನ ಕೈಹಾಕಿಲ್ಲ.

ಉಗ್ರರ ಅಡಗುದಾಣ ಎಂದೇ ಕುಖ್ಯಾತಿ

ಪಾಕ್‌ ಆಕ್ರಮಿತ ಕಾಶ್ಮೀರ ಭಾರತದ ನಡುವಿನ ವ್ಯಾಜ್ಯವಾಗಿ ಮಾತ್ರವಲ್ಲದೆ ಅನೇಕ ಬಾರಿ ಜಾಗತಿಕವಾಗಿಯೂ ಗಮನ ಸೆಳೆದಿದೆ. 2001ರಲ್ಲಿ ಅಲ್‌-ಖೈದಾ ಉಗ್ರ ಒಸಾಮಾ ಬಿನ್‌ ಲಾಡೆನ್‌ ಪಿಒಕೆ ರಾಜಧಾನಿ ಮುಜಫರ್‌ಬಾದ್‌ನಲ್ಲಿ ಅಡಗಿದ್ದಾನೆಂದು ಪಿಒಕೆ ಮೇಲೆ ಅಮೆರಿಕ ಕಾರಾರ‍ಯಚರಣೆ ನಡೆಸಿತ್ತು. 2005ರ ಅಕ್ಟೋಬರ್‌ 8ರಂದು ಭೂಕಂಪ ಉಂಟಾಗಿತ್ತು. ಅದು ರಿಕ್ಟರ್‌ ಮಾಪಕದಲ್ಲಿ 7.6 ಇತ್ತು. ಪಿಒಕೆಯಲ್ಲಿ ಇದರಿಂದ ಭಾರೀ ಹಾನಿಯಾಗಿತ್ತು. ಹಾಗೆಯೇ ಇದು ಉಗ್ರರ ತರಬೇತಿ ಸ್ಥಳ ಹಾಗೂ ಅಡಗುದಾಣ ಎಂದೇ ಕುಖ್ಯಾತಿ ಪಡೆದಿದೆ.

 

Follow Us:
Download App:
  • android
  • ios