ನಿಯಂತ್ರಣಕ್ಕೆ ಬಾರದ ಕೊರೋನಾ; ಮತ್ತೆ ವೀಕೆಂಡ್ ಲಾಕ್ ಡೌನ್ ಅಧಿಕೃತ
ಮಿತಿ ಮೀರಿದ ಕೊರೋನಾ/ ವಾರಾಂತ್ಯದ ಲಾಕ್ ಡೌನ್/ ಶನಿವಾರ ಮತ್ತು ಭಾನುವಾರ ಪೂರ್ಣ ಲಾಕ್ ಡೌನ್/ ಹರಿಯಾಣ ಸರ್ಕಾರದಿಂದ ಕ್ರಮ
ಹರಿಯಾಣ (ಆಗಸ್ಟ್ 21) ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ವೀಕೆಂಡ್ ಲಾಕ್ ಡೌನ್ ಮೊರೆ ಹೋಗಿದೆ. ನಾವು ಹೇಳುತ್ತಿರುವುದು ಹರಿಯಾಣದ ಸುದ್ದಿ.
ರಾಷ್ಟ್ರ ರಾಜಧಾನಿ ದೆಹಲಿಯ ಜೊತೆಗೆ ಗಡಿ ಹಂಚಿಕೊಂಡಿರುವ ಹರಿಯಾಣದಲ್ಲಿ ಕೊರೋನಾ ವೈರಸ್ ಹಾವಳಿ ಮಿತಿಮೀರಿದ್ದು ರಾಜ್ಯ ಸರ್ಕಾರ ದಿಟ್ಟ ಕ್ರಮ ತೆಗೆದುಕೊಂಡಿದೆ. ಹರಿಯಾಣದಲ್ಲಿ ಈವರೆಗೆ 50,000ಕ್ಕೂ ಹೆಚ್ಚು ಜನ ಕೊರೋನಾ ವೈರಸ್‌ಗೆ ತುತ್ತಾಗಿದ್ದಾರೆ. ಕೊರೋನಾ ಸೋಂಕು ಹರಡುವುದನ್ನು ನಿಯಂತ್ರಿಸಲು ಸರ್ಕಾರ ಶನಿವಾರ ಮತ್ತು ಭಾನುವಾರ ಸಂಪೂರ್ಣ ಲಾಕ್ ಡೌನ್ ಗೆ ಮುಂದಾಗಿದೆ.
ವಾರಾಂತ್ಯದ ಶನಿವಾರ ಮತ್ತು ಭಾನುವಾರ ಹರಿಯಾಣದಲ್ಲಿ ಅಗತ್ಯ ವಸ್ತುಗಳ ಹೊರತು ಬೇರೆ ಯಾವ ಅಂಗಡಿಗಳು ಹಾಗೂ ಕಚೇರಿಗಳು ತೆರೆದಿರುವುದಿಲ್ಲ. ಎಲ್ಲವನ್ನೂ ಸಂಪೂರ್ಣವಾಗಿ ಮುಚ್ಚಲಾಗುತ್ತದೆ ಎಂದು ಸಚಿವ ಅನಿಲ್ ವಿಜ್ ಟ್ವೀಟ್ ಮೂಲಕ ತಿಳಿಸಿದ್ದು ಜನರು ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಕೊರೋನಾ ಮಿತಿಮೀರಿದ ಕಾರಣ ಪಂಜಾಬ್ ಸಹ ನಗರ ಮತ್ತು ಪಟ್ಟಣಗಳಲ್ಲಿ ದೈನಂದಿನ ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯದ ಲಾಕ್ ಡೌನ್ ಘೋಷಿಸಿತ್ತು. ಇದಾದ ಮೇಲೆ ಹರಿಯಾಣ ಸಹ ಅದೇ ಹಾದಿ ತುಳಿದಿದೆ. ಎಲ್ಲಿಯವರೆಗೆ ವಾರಾಂತ್ಯದ ಲಾಕ್ ಡೌನ್ ಜಾರಿಯಲ್ಲಿ ಇರುತ್ತದೆ ಎಂಬುದನ್ನು ಸರ್ಕಾರ ಹೇಳಿಲ್ಲ. ಆದರೆ ಪರಿಸ್ಥಿತಿ ನಿಭಾಯಿಸಲು ಅನಿವಾರ್ಯವಾಗಿ ಲಾಕ್ ಡೌನ್ ಮಾಡಲಾಗುತ್ತದೆ ಎಂದು ತಿಳಿಸಿದೆ.