ಕಾಳಿಗಂಜ್‌[ಮಾ.04]: ಪೌರತ್ವ ತಿದ್ದುಪಡಿ ಕಾಯ್ದೆ, ಎನ್‌ಪಿಆರ್‌ ಮತ್ತು ಆರ್‌ಆರ್‌ಸಿ ವಿಷಯ ಸಂಬಂಧ, ಕೇಂದ್ರ ಸರ್ಕಾರದ ಜೊತೆ ನೇರ ಸಂಘರ್ಷಕ್ಕೆ ಇಳಿದಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಇದೀಗ ಬಾಂಗ್ಲಾದೇಶದಲ್ಲಿ ಬಂದು ಭಾರತದಲ್ಲಿ ನೆಲೆಸಿದವರೆಲ್ಲಾ ಭಾರತೀಯ ಪ್ರಜೆಗಳೇ ಎಂದು ಹೊಸ ಕ್ಯಾತೆ ತೆಗೆದಿದ್ದಾರೆ.

ಇಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮಮತಾ, ‘ಬಾಂಗ್ಲಾದಿಂದ ಬಂದು ಇಲ್ಲಿ ನೆಲೆಸಿದವರೆಲ್ಲಾ ಭಾರತೀಯರೇ.... ಅವರಿಗೆಲ್ಲಾ ಪೌರತ್ವ ಸಿಕ್ಕಿದೆ. ಹೀಗಾಗಿ ನೀವೆಲ್ಲಾ ಮತ್ತೆ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಬೇಕಿಲ್ಲ. ನೀವೆಲ್ಲಾ ಹಲವು ವರ್ಷಗಳಿಂದ ಪ್ರಧಾನಿ, ಮುಖ್ಯಮಂತ್ರಿ, ಜಿಲ್ಲಾ ಪರಿಷತ್‌ ಸದಸ್ಯರ ಆಯ್ಕೆಗೆ ಮತ ಚಲಾವಣೆ ಮಾಡುತ್ತಲೇ ಬಂದಿದ್ದೀರಿ. ಇದೀಗ ನೀವೆಲ್ಲಾ ಭಾರತೀಯ ಪ್ರಜೆಗಳಲ್ಲ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ ನಾವು ಒಬ್ಬನೇ ಒಬ್ಬ ವ್ಯಕ್ತಿಯನ್ನು ಬಂಗಾಳದಿಂದ ಹೊರಹಾಕಲು ಬಿಡುವುದಿಲ್ಲ. ನೀವ್ಯಾರು ಚಿಂತಿಸಬೇಕಿಲ್ಲ. ದೀದಿ ನಿಮ್ಮ ಜೊತೆ ಸದಾ ಇರಲಿದ್ದಾರೆ’ ಎಂದು ಹೇಳಿದ್ದಾರೆ.

ಇದೇ ವೇಳೆ ದೆಹಲಿ ಹಿಂಸಾಚಾರ ಪ್ರಕರಣ ನಿರ್ವಹಿಸಿದ ರೀತಿ ಬಗ್ಗೆ ಕೇಂದ್ರದ ಬಗ್ಗೆ ಹರಿಹಾಯ್ದಿರುವ ಮಮತಾ, ಪಶ್ಚಿಮ ಬಂಗಾಳವನ್ನು ಮತ್ತೊಂದು ದೆಹಲಿ ಆಗಲು ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.