ಬಿಜೆಪಿ ಇವಿಎಂ ತಿರುಚುತ್ತಿದೆ: ಅಖಿಲೇಶ್‌

ವಾರಾಣಸಿ(ಮಾ.09): ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿರುವ ಹೊತ್ತಿನಲ್ಲೇ, ರಾಜ್ಯದಲ್ಲಿ ಬಿಜೆಪಿ ನಾಯಕರು ಇವಿಎಂಗಳನ್ನು ತಿರುಚುತ್ತಿದ್ದಾರೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಗಂಭೀರ ಆರೋಪ ಮಾಡಿದ್ದಾರೆ.

ಇಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅಖಿಲೇಶ್‌, ವಾರಾಣಸಿಯಲ್ಲಿ ಲಾರಿಯೊಂದನ್ನು ತಪಾಸಣೆ ಮಾಡಿದಾಗ ಅದರಲ್ಲಿ ಇವಿಎಂಗಳು ಪತ್ತೆಯಾಗಿವೆ. ಅಲ್ಲದೆ ರಾಜ್ಯದ ಹಿರಿಯ ಅಧಿಕಾರಿಗಳು, ಮತ ಎಣಿಕೆ ಪ್ರಕ್ರಿಯೆಯನ್ನು ನಿಧಾನವಾಗಿ ಮಾಡುವ ಮೂಲಕ ರಾತ್ರಿಯವರೆಗೂ ಪ್ರಕ್ರಿಯೆ ವಿಸ್ತರಿಸುವಂತೆ ಕಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಮೂಲಕ ಮತ ಎಣಿಕೆಯಲ್ಲಿ ಗೋಲ್‌ಮಾಲ್‌ಗೆ ಮುಂದಾಗಿದ್ದಾರೆ. ಅಲ್ಲದೆ ಎಲ್ಲೆಲ್ಲಿ ಬಿಜೆಪಿ ಸೋಲುವ ಸಾಧ್ಯತೆ ಇದೆಯೋ ಅಲ್ಲೆಲ್ಲಾ ಇವಿಎಂಗಳನ್ನು ಕಳವು ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಆದರೆ ಈ ಆರೋಪ ತಳ್ಳಿಹಾಕಿರುವ ವಾರಾಣಸಿ ಜಿಲ್ಲಾಡಳಿತ, ಅಧಿಕಾರಿಗಳಿಗೆ ಮತ ಎಣಿಕೆ ಪ್ರಕ್ರಿಯೆ ಬಗ್ಗೆ ತರಬೇತಿ ನೀಡಲು ಇವಿಎಂಗಳನ್ನು ಲಾರಿಯಲ್ಲಿ ಸಾಗಿಸಲಾಗುತ್ತಿತ್ತು. ಆದರೆ ಕೆಲ ವ್ಯಕ್ತಿಗಳೂ ರಾಜಕೀಯ ಕಾರಣಕ್ಕಾಗಿ ವೃಥಾ ಆರೋಪ ಮಾಡುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದೆ.

ಉತ್ತರಪ್ರದೇಶದಲ್ಲಿ ಬಿಜೆಪಿ ಇತಿಹಾಸ ಸೃಷ್ಟಿ?

ಉತ್ತರಪ್ರದೇಶದಲ್ಲಿ ಕಳೆದ 35 ವರ್ಷದಲ್ಲಿ ಸತತ 2ನೇ ಬಾರಿ ಪಕ್ಷವೊಂದು ಅಧಿಕಾರಕ್ಕೆ ಬಂದ ಉದಾಹರಣೆ ಇರಲಿಲ್ಲ. ಆದರೆ ಈ ಸಲ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹಾಗೂ ಪ್ರಧಾನಿ ನರೇಂದ್ರ ಮೋದಿ ಜೋಡಿ ಮ್ಯಾಜಿಕ್‌ ನಡೆಸುವ ಸಾಧ್ಯತೆ ಇದೆ.

ಕಳೆದ ಸಲಕ್ಕಿಂತ ಕಡಿಮೆ ಸ್ಥಾನ ಗಳಿಸಿದರೂ ಆಡಳಿತ ವಿರೋಧಿ ಅಲೆ ಮೆಟ್ಟಿನಿಂತು ರಾಜ್ಯದಲ್ಲಿ ನಿರಂತರವಾಗಿ ಬಿಜೆಪಿ ಅಧಿಕಾರಕ್ಕೆ ಬರುವುದು ಪಕ್ಕಾ ಎಂದು ಸಮೀಕ್ಷೆಗಳು ಹೇಳಿವೆ. ತೀವ್ರ ಸ್ಪರ್ಧೆ ನೀಡಿದರೂ ಅಖಿಲೇಶ್‌ ಯಾದವ್‌ರ ಸಮಾಜವಾದಿ ಪಕ್ಷಕ್ಕೆ ಶತಕ ದಾಟಲು ಮಾತ್ರ ಸಾಧ್ಯವಾಗಲಿದೆ. ಬಿಎಸ್‌ಪಿ, ಕಾಂಗ್ರೆಸ್‌ ಇನ್ನಿಲ್ಲದಂತೆ ನೆಲಕಚ್ಚಲಿವೆ ಎಂದು ಹೇಳಲಾಗಿದೆ.’

ಬಿಜೆಪಿ ಜಯಕ್ಕೆ ಕಾರಣವೇನು?:

ರಾಜ್ಯದಲ್ಲಿ, ಕೇಂದ್ರದ ಕೃಷಿ ಕಾಯ್ದೆ ವಿರುದ್ಧ ಆಕ್ರೋಶವಿದ್ದರೂ ಬಿಜೆಪಿ ಗೆಲ್ಲಲಿದೆ ಎಂಬ ಸಮೀಕ್ಷೆಗಳ ಭವಿಷ್ಯಕ್ಕೆ, ಮೋದಿ-ಆದಿತ್ಯನಾಥ್‌ ಪ್ರಬಲ ಜೋಡಿಯ ಜಾದೂ ಕಾರಣ ಎಂದು ಹೇಳಲಾಗಿದೆ. ಕೃಷಿ ಕಾಯ್ದೆಗಳು ಬಿಜೆಪಿಗೆ ಮುಳುವಾಗಬಹುದು ಎಂಬ ಸುಳುಹು ಮೋದಿಗೆ ಸಿಕ್ಕ ಕಾರಣ ಅವರು ಆ ಕಾಯ್ದೆಗಳನ್ನು ಹಿಂಪಡೆದರು. ಹೀಗಾಗಿ ಕಾಯ್ದೆ ವಿರುದ್ಧವಿದ್ದ ಜಾಟ್‌ ಸಮುದಾಯದ ಆಕ್ರೋಶ ತಣಿಯಿತು ಎನ್ನಲಾಗಿದೆ.

ಇದೇ ವೇಳೆ, ಎಸ್‌ಪಿಯ ಅಖಿಲೇಶ್‌ ಯಾದವ್‌ ಈ ಸಲ ಏಕಾಂಗಿಯಾಗಿದ್ದಾರೆ. ತಂದೆ ಮುಲಾಯಂ ಅನಾರೋಗ್ಯದ ಕಾರಣ ಅಖಾಡಕ್ಕೆ ಇಳಿಯದೇ ಇರುವುದು ಅವರಿಗೆ ಮುಳುವಾಗಬಹುದು. ಇನ್ನುಮಾಯವತಿ ಹಾಗೂ ಕಾಂಗ್ರೆಸ್‌ ಕಳಾಹೀನವಾಗಿರುವುದು ಮೊದಲೇ ಮತದಾರರಿಗೆ ಮನವರಿಕೆಯಾಗಿತ್ತು. ಹೀಗಾಗಿ ಈ ಪಕ್ಷಗಳು ಪ್ರಬಲ ಪ್ರಚಾರ ನಡೆಸಲೇ ಇಲ್ಲ. ಇವರ ವಿರುದ್ಧ ‘ಮಾಫಿಯಾ ಮಟ್ಟಹಾಕಿದ್ದೇವೆ’ ಎಂದು ಯೋಗಿ-ಮೋದಿ ಜೋಡಿ ಮಾಡಿದ ಪ್ರಚಾರದ ಅಬ್ಬರ ಹಾಗೂ ಮೋದಿ ಅವರ ‘ಡಬಲ್‌ ಎಂಜಿನ್‌’ ಸರ್ಕಾರದ ಮಂತ್ರ ಬಿಜೆಪಿಗೆ ವರವಾಗಬಹುದು ಎಂದು ಸಮೀಕ್ಷೆಗಳು ಹೇಳಿವೆ.