ನವದೆಹಲಿ(ಅ.22): ಭಾರತದಲ್ಲಿ 2019ರಲ್ಲಿ ವಾಯುಮಾಲಿನ್ಯದಿಂದಾಗಿ 16.7 ಲಕ್ಷ ಜನರು ಸಾವನ್ನಪ್ಪಿದ್ದಾರೆ. ಈ ಪೈಕಿ ಒಂದು ಲಕ್ಷಕ್ಕೂ ಹೆಚ್ಚು ತಿಂಗಳೂ ತುಂಬದ ಹಸುಗೂಸುಗಳೂ ಸೇರಿವೆ ಎಂಬ ಆತಂಕಕಾರಿ ವರದಿಯನ್ನು ಅಮೆರಿಕ ಮೂಲಕ ಸರ್ಕಾರೇತರ ಸಂಸ್ಥೆಯೊಂದು ಬಿಡುಗಡೆ ಮಾಡಿದೆ.

ಸ್ಟೇಟ್‌ ಆಫ್‌ ಗ್ಲೋಬಲ್‌ ಏರ್‌ ವರದಿ-2020 ಅನ್ನು ಹೆಲ್ತ್‌ ಎಫೆಕ್ಟ್ ಇನ್‌ಸ್ಟಿಟ್ಯೂಟ್‌ (ಎಚ್‌ಇಐ) ಬುಧವಾರ ಬಿಡುಗಡೆ ಮಾಡಿದ್ದು, ವಾಯು ಮಾಲಿನ್ಯವೇ ಭಾರತದಲ್ಲಿ ಆರೋಗ್ಯಕ್ಕಿರುವ ಬಹುದೊಡ್ಡ ತೊಡಕು ಎಂದು ಅದು ಅಭಿಪ್ರಾಯಪಟ್ಟಿದೆ.

2019ರಲ್ಲಿ ಮನೆಯಿಂದ ಹೊರಗೆ ಮತ್ತು ಒಳಗೆ ಇರುವ ಪರ್ಟಿಕ್ಯುಲೇಟ್‌ ಮ್ಯಾಟರ್‌ ಮಾಲಿನ್ಯವೇ ಸುಮಾರು 1,16,000 ಹಸುಗೂಸು (ಒಂದು ತಿಂಗಳ ಮಕ್ಕಳು)ಗಳ ಸಾವಿಗೆ ಕಾರಣ. ಅಲ್ಲದೆ ವಾರ್ಷಿಕ ಪಾಶ್ರ್ವವಾಯು, ಹೃದಯಾಘಾತ, ಶ್ವಾಸಕೋಶ ಕ್ಯಾನ್ಸರ್‌ ಮಂತಾದ ಕಾಯಲೆಗಳಿಂದ ಸಂಭವಿಸಿದ 16.7 ಲಕ್ಷ ಸಾವಿಗೂ ವಾಯುಮಾಲಿನ್ಯವೇ ಕಾರಣ ಎಂದು ಸಮೀಕ್ಷೆ ಹೇಳಿದೆ. ಹಾಗೆಯೇ ಪ್ರಧಾನ ಮಂತ್ರಿ ಉಜ್ವಲಾ ಯೋಜನೆ ಮತ್ತಿತರ ಯೋಜನೆಗಳು ಗ್ರಾಮೀಣ ಪ್ರದೇಶದಲ್ಲಿ ವಾಯು ಮಾಲಿನ್ಯ ಅಲ್ಪಮಟ್ಟಿಗೆ ತಗ್ಗಲು ಸಹಕಾರಿಯಾಗಿವೆ ಎಂದು ತಿಳಿಸಿದೆ.