ಕುಟುಂಬಕ್ಕೆ 1500 ರೂ., 6 ಎಲ್ಪಿಜಿ ಸಿಲಿಂಡರ್ ಉಚಿತ: ಮತದಾರರಿಗೆ ಭರ್ಜರಿ ಗಿಫ್ಟ್!
ಎಐಎಡಿಎಂಕೆ ಗೆದ್ದರೆ ಕುಟುಂಬಕ್ಕೆ 1500, 6 ಎಲ್ಪಿಜಿ ಸಿಲಿಂಡರ್ ಉಚಿತ| ಮತಬೇಟೆಗೆ ಎಡಪ್ಪಾಡಿ ತರಹೇವಾರಿ ಘೋಷಣೆ| ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ತಮಿಳುನಾಡಿನಲ್ಲಿ ಮತದಾರರಿಗೆ ಉಚಿತ ಕೊಡುಗೆ
ಚೆನ್ನೈ(ಮಾ.10): ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ತಮಿಳುನಾಡಿನಲ್ಲಿ ಮತದಾರರಿಗೆ ಉಚಿತ ಕೊಡುಗೆಗಳನ್ನು ಘೋಷಿಸುವ ರಾಜಕೀಯ ಪಕ್ಷಗಳ ಪೈಪೋಟಿ ತೀವ್ರಗೊಂಡಿದೆ. ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರು ತಮ್ಮ ಎಐಎಡಿಎಂಕೆ ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲಾ ಕುಟುಂಬಗಳ ಮಹಿಳಾ ಮುಖ್ಯಸ್ಥರಿಗೆ ತಿಂಗಳಿಗೆ 1500 ರು. ಹಾಗೂ ವರ್ಷಕ್ಕೆ 6 ಎಲ್‌ಪಿಜಿ ಸಿಲಿಂಡರ್ ಉಚಿತವಾಗಿ ನೀಡುವುದಾಗಿ ಘೋಷಿಸಿದ್ದಾರೆ.
ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲಾ ಕುಟುಂಬಗಳ ಮಹಿಳಾ ಮುಖ್ಯಸ್ಥರಿಗೆ ಪ್ರತಿ ತಿಂಗಳು 1000 ರು. ನೀಡುವುದಾಗಿ ಘೋಷಿಸಿದ ಬೆನ್ನಲ್ಲೇ ಈ ಘೋಷಣೆ ಹೊರಬಿದ್ದಿದೆ.
ಇತ್ತೀಚೆಗಷ್ಟೇ ಪಳನಿಸ್ವಾಮಿ ಸರ್ಕಾರ ಜನರ ಚಿನ್ನದ ಮೇಲಿನ ಸಾಲ ಮನ್ನಾ ಮಾಡಿತ್ತು. ಈಗ ಮಾಸಿಕ ಗೌರವಧನ ಹಾಗೂ ಉಚಿತ ಸಿಲಿಂಡರ್‌ನ ಭರವಸೆ ಘೋಷಣೆ ಮಾಡಿದೆ. ಅಲ್ಲದೆ, ಮುಂದೆ ಬಿಡುಗಡೆಯಾಗುವ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಈ ಅಂಶ ಇರಲಿದ್ದು, ಡಿಎಂಕೆ ನಾಯಕ ಸ್ಟಾಲಿನ್ ನಮ್ಮ ಐಡಿಯಾವನ್ನು ಕದ್ದು ಪ್ರಕಟಿಸಿದ್ದಾರೆ ಎಂದೂ ಪಳನಿಸ್ವಾಮಿ ಆರೋಪಿಸಿದ್ದಾರೆ.
‘ಎಐಡಿಎಂಕೆಯ ಚುನಾವಣಾ ಪ್ರಣಾಳಿಕೆ ಸಿದ್ಧವಾಗುತ್ತಿದೆ. ಅದರಲ್ಲಿ ಇಂತಹ ಇನ್ನೂ ಅನೇಕ ಘೋಷಣೆಗಳು ಇರಲಿವೆ. ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ರಾಜ್ಯದ ಎಲ್ಲಾ ಕುಟುಂಬಗಳ ಪಡಿತರ ಚೀಟಿಯಲ್ಲಿ ಹೆಸರಿರುವ ಮನೆಯ ಯಜಮಾನ್ತಿಗೆ ಮಾಸಿಕ 1500 ರು. ಗೌರವಧನ ಹಾಗೂ ವರ್ಷಕ್ಕೆ 6 ಉಚಿತ ಸಿಲಿಂಡರ್ ನೀಡುವ ಘೋಷಣೆ ಮಾಡುತ್ತಿದ್ದೇವೆ. ಇದು ಮಹಿಳೆಯರ ಆರ್ಥಿಕ ಸಂಕಷ್ಟವನ್ನು ಕಡಿಮೆ ಮಾಡಲಿದೆ’ ಎಂದು ಪಳನಿಸ್ವಾಮಿ ತಿಳಿಸಿದ್ದಾರೆ.