ಅಹಮದಾಬಾದ್[ಡಿ.16]: ಸ್ಟಾರ್ ಹೋಟೆಲ್ ಗಳಿಗೆ ಹೋದಾಗ ಕಾರು ಪಾರ್ಕ್ ಮಾಡಲು ಅಲ್ಲಿನ ಸಿಬ್ಬಂದಿಗಳಿಗೆ ಕೀ ನೀಡುವ ಮುನ್ನ ಎಚ್ಚರ. ಕೀ ಪಡೆದ ಸಿಬ್ಬಂದಿ ನಿಮ್ಮ ಕಾರು ತೆಗೆದುಕೊಂಡು ಪರಾರಿಯಾಗುವ ಸಾಧ್ಯತೆಗಳಿವೆ. 

ಹೌದು... ಅಹಮದಾಬಾದ್ ನ ಉಸ್ಮಾನ್ ಪುರದಲ್ಲಿ ಇಂತಹುದೆ ಘಟನೆಯೊಂದು ನಡೆದಿದೆ. ಕೆಲ ದಿನಗಳ ಹಿಂದಷ್ಟೇ ಆರಂಭವಾಗಿದ್ದ ಸ್ಟಾರ್ ಹೋಟೆಲ್ ಗೆ ಉದ್ಯಮಿಯೊಬ್ಬ ಬಂದಿದ್ದ. ಈ ವೇಳೆ ತನ್ನ SUV ಕಾರು ಪಾರ್ಕ್ ಮಾಡಲು ಹೋಟೆಲ್ ಸಿಬ್ಬಂದಿಗೆ ಕೀ ನೀಡಿದ್ದಾರೆ. ಆದರೆ ಕೀ ಪಡೆದ ಸಿಬ್ಬಂದಿ ಮಾತ್ರ ಕಾರಿನೊಂದಿಗೆ ಪರಾರಿಯಾಗಿದ್ದಾನೆ. ಕಾರಿನೊಳಗೆ ಅಮೂಲ್ಯವಾದ ವಸ್ತು ಹಾಗೂ ಮಹತ್ವದ ದಾಖಲೆಗಳೂ ಇದ್ದವು. 

ಇನ್ನು ಪ್ರಕರಣದ ಆರೋಪಿ, ಮಧ್ಯಪ್ರದೇಶದ 28 ವರ್ಷದ ನಿತಿನ್ ಮಾಳವೀಯ ಕೀ ಕೊಟ್ಟಿದ್ದ ಉದ್ಯಮಿಗೆ ಕರೆ ಮಾಡಿ ತಾನು SUV ಕಾರನ್ನು ರತ್ಲಾಮ್ ರೈಲ್ವೇ ನಿಲ್ದಾಣದ ಪಾರ್ಕಿಂಗ್ ಏರಿಯಾದಲ್ಲಿ ಪಾರ್ಕ್ ಮಾಡಿರುವುದಾಗಿ ಹೇಳಿದ್ದಾರೆ. ಮಾಹಿತಿ ಪಡೆದ ಉದ್ಯಮಿ ಹಾಗೂ ಪೊಲೀಸರು ಕೂಡಲೇ ರೈಲ್ವೇ ನಿಲ್ದಾಣಕ್ಕೆ ಧಾವಿಸಿದ್ದಾರೆ. ಅದೃಷ್ಟವಶಾತ್ ಆರೋಪಿ ಕೊಟ್ಟ ಮಾಹಿತಿಯಂತೆ ಕಾರು ಅಲ್ಲಿ ಒತ್ತೆಯಾಗಿದೆ. ಹೀಗಿದ್ದರೂ ಆತ ಪೊಲೀಸರು ಆತನನ್ನು ಹಿಡಿಯುವಲ್ಲಿ ವಿಫಲರಾಗಿದ್ದಾರೆ.

ಉದ್ಯಮಿ ರುತುಲ್ ಶಾ ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದು ಘಟನೆಯನ್ನು ವಿವರಿಸಿದ್ದಾರೆ. ದೂರಿನ ಪ್ರತಿಯಲ್ಲಿ 'ಬಡಕ್ದೇವ್ ಪ್ರದೇಶದಲ್ಲಿರುವ ಹೋಟೆಲ್ ಪ್ರೈಡ್ ಪ್ಲಾಜಾಗೆ ಪ್ರದರ್ಶನವೊಂದನ್ನು ವೀಕ್ಷಿಸಲು ತೆರಳಿದ್ದೆ. ಬೆಳಗ್ಗೆ ಸುಮಾರು 11.30ಕ್ಕೆ ನಾನು ತಲುಪಿದ್ದು, ಕಾರು ಪಾರ್ಕಿಂಗ್ ಮಾಡಲು ತೆರಳಿದಾಗ ಸಿಬ್ಬಂದಿಯೊಬ್ಬ ಬಂದು ವಾಲೆಟ್ ಪಾರ್ಕಿಂಗ್ ಮಾಡಲು ಕೀ ಕೇಳಿದ. ಹೀಗಾಗಿ ನಾನು ನೀಡಿದೆ'

ಆದರೆ 12.50ಕ್ಕೆ ಪ್ರದರ್ಶನ ಕಾರ್ಯಕ್ರಮ ಮುಗಿಸಿ ಬಂದ ರುತುಲ್ ಹೋಟೆಲ್ ಸಿಬ್ಬಂದಿ ಬಳಿ ಕೀ ಕೇಳಿದ್ದಾರೆ. ಆಧರೆ ಕೀ ಕಾಣದಾಗ ಸಿಬ್ಬಂದಿ ವಿಚಾರಣೆ ಆರಮಭಿಸಿದ್ದು, ಮಾಳವೀಯ ಇಲ್ಲದಿರುವುದು ಗಮನಕ್ಕೆ ಬಂದಿದೆ. ಮಧ್ಯಾಹ್ನದ ಊಟಕ್ಕೆ ತೆರಳಿರಬಹುದು ಎಂದು ಕೊಂಚ ಹೊತ್ತು ಕಾದರೂ ಬಾರದಿದ್ದಾಗ ಆತ ಕಾರಿನೊಂದಿಗೆ ಪರಾರಿಯಾಗಿರುವುದು ಖಚಿತವಾಗಿದೆ. ಕೂಡಲೇ ರುತುಲ್ ಪೊಲೀಸರಿಗೆ ದೂರು ನೀಡಿದ್ದಾನೆ. ಇದಾದ ಕೆಲವೇ ಕ್ಷಣದಲ್ಲಿ ಆರೋಪಿ ಕರೆ ಮಾಡಿ ಕಾರು ಪಾರ್ಕ್ ಮಾಡಿರುವ ಮಾಹಿತಿ ನೀಡಿದ್ದಾನೆ.