ಕೋಲ್ಕತ್ತಾ(ಏ.06): ಪಂಚ ರಾಜ್ಯಗಳ ಚುನಾವಣಾ ಪ್ರಕ್ರಿಯೆ ಆರಂಭಗೊಂಡಿದ್ದು, ಮತದಾನ ಇನ್ನೂ ಮುಂದುವರೆದಿದೆ. ತಮುಳುನಾಡು, ಪುದುಚೇರಿ ಹಾಗೂ ಕೇರಳದಲ್ಲಿ ಏಕ ಹಂತದ ಚುನಾವಣೆ ನಡೆಯುತ್ತಿದ್ದರೆ, ಅಸ್ಸಾಂ ಹಾಗೂ ಪಶ್ಚಿಮ ಬಂಗಾಳದಲ್ಲಿ ಮೂರನೇ ಹಂತದ ಚುನಾವಣೆ ನಡೆಯುತ್ತಿದೆ. ಆದರೀಗ ತೀವ್ರ ಕುತೂಹಲ ಮೂಡಿಸಿರುವ ಪಶ್ಚಿಮ ಬಂಗಾಳ ಚುನಾವಣೆಗೂ ಮುನ್ನ ಟಿಎಂಸಿ ನಾಯಕನ ಮನೆಯಲ್ಲಿ ಇವಿಎಂ ಹಾಗೂ ವಿವಿ ಪ್ಯಾಟ್ ಪತ್ತೆಯಾಗಿರುವುದು ಭಾರೀ ಸಂಚಲನ ಮೂಡಿಸಿದೆ. ಇದರ ಬೆನ್ನಲ್ಲೇ ಚುನಾವಣಾ ಆಯೋಗವು ವಲಯ ಅಧಿಕಾರಿ ಎಸಗಿದ ತಪ್ಪಿಗೆ ಅಮಾನತು ಶಿಕಗ್ಷೆ ವಿಧಿಸಿದೆ.

ಬಂಗಾಳದ ಚುನಾವಣಾಧಿಕಾರಿ ಮತಯಂತ್ರವನ್ನು ತನ್ನೊಂದಿಗೆ ಇರಿಸಿಕೊಂಡು ಟಿಎಂಸಿ ನಾಯಕನ ಮನೆಯಲ್ಲಿ ಇಡೀ ರಾತ್ರಿ ಮಲಗಿದ್ದ ಹಿನ್ನೆಲೆ, ಅವರನ್ನು ಚುನಾವಣಾ ಆಯೋಗವು ಅಮಾನತು ಮಾಡಿರುವುದಾಗಿ ವರದಿಗಳು ಉಲ್ಲೇಖಿಸಿವೆ.

ಏನಿದು ಪ್ರಕರಣ?

ಪಶ್ಚಿಮ ಬಂಗಾಳದ ಉಲುಬೆರಿಯಾದಲ್ಲಿ ಟಿಎಂಸಿ ನಾಯಕನ ​ ಮನೆಯಲ್ಲಿ ಈ ಘಟನೆ ನಡೆದಿದೆ. ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಇವಿಎಂ ಹಾಗೂ ವಿವಿಪ್ಯಾಟ್​​ಗಳನ್ನು ವಶಕ್ಕೆ ಪಡೆದಿದ್ದಾರೆ. ಟಿಎಂಸಿ ನಾಯಕ​ ಗೌತಮ್​ ಘೋಷ್​​ ಹಾಗೂ ಹೌರಾ ಜಿಲ್ಲೆಯ ಎಸಿ 177 ಉಲುಬೇರಿಯಾ ಉತ್ತರದ ಸೆಕ್ಟರ್ 17ರ ನಿಯೋಜಿತ ಅಧಿಕಾರಿ ತಪನ್ ಸರ್ಕಾರ್  ಸಂಬಂಧಿಕನೆಂದು ತಿಳಿದು ಬಂದಿದೆ. ಒಟ್ಟಾರೆ ಚುನಾವಣಾಧಿಕಾರಿ ನಿಯಮ ಉಲ್ಲಂಘಿಸಿ ಮಾಡಿದ ತಪ್ಪಿಗೆ ಅಮಾನತುಗೊಂಡಿದ್ದಾರೆ. ಜೊತೆಗೆ ಮತದಾನಕ್ಕಾಗಿ ಕಾಯ್ದಿರಿಸಿದ್ದ ಇವಿಎಂ ಯಂತ್ರವನ್ನು ಅಲ್ಲಿಂದ ತೆರವುಗೊಳಿಸಲಾಗಿದೆ ಎಂದು ಚುನಾವಣಾ ಆಯೋಗವು ಹೇಳಿದೆ. ಇದೇ ವೇಳೆ ಈ ಕೃತ್ಯದಲ್ಲಿ ಭಾಗಿಯಾಗಿರುವ ಚುನಾವಣಾಧಿಕಾರಿ ಹಾಗೂ ಇನ್ನಿತರರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.