‘ಅಗ್ನಿವೀರ’ರಿಗೆ ಕೇಂದ್ರೀಯ ಪೊಲೀಸ್ ಪಡೆ, ರಾಜ್ಯಗಳ ಆದ್ಯತೆ!
* 4 ವರ್ಷ ಸೇವೆ ಮುಗಿಸಿದವರಿಗೆ ಕೇಂದ್ರೀಯ ಪಡೆಗಳಲ್ಲಿ ಅವಕಾಶ: ಗೃಹ ಸಚಿವಾಲಯ
* ರಾಜ್ಯ ಪೊಲೀಸ್ ನೇಮಕದಲ್ಲಿ ಆದ್ಯತೆ: ಯೋಗಿ, ಶಿವರಾಜ್ ಭರವಸೆ
* ಅಗ್ನಿಪಥ ಯೋಜನೆಯಿಂದ ಸೇನೆಯ ಕ್ಷಮತೆಗೆ ಕುಂದು: ರಾಹುಲ್ ಕಿಡಿ
* ಬಿಹಾರದಲ್ಲಿ ಕಾಯಂ ಸೇನಾ ಆಕಾಂಕ್ಷಿಗಳಿಂದ ಅಗ್ನಿಪಥ ವಿರುದ್ಧ ಪ್ರತಿಭಟನೆ
ನವದೆಹಲಿ(ಜೂ.16): ಸೇನೆಯಲ್ಲಿ 4 ವರ್ಷದ ಮಟ್ಟಿಗೆ ಮಾತ್ರ ಇನ್ನು ಯೋಧರ ನೇಮಕಾತಿ ನಡೆಯಲಿದೆ ಎಂದು ಕೇಂದ್ರ ಸರ್ಕಾರು ‘ಅಗ್ನಿಪಥ’ ಯೋಜನೆ ಘೋಷಿಸುತ್ತಿದ್ದಂತೆಯೇ, 4 ವರ್ಷ ಬಳಿಕ ಈ ಯೋಜನೆಯಡಿ ನೇಮಕವಾದವರ ಕತೆ ಏನು ಎಂಬ ಪ್ರಶ್ನೆ ಉದ್ಭವಿಸಿದ್ದವು. ಆದರೆ, ಈ ಯೋಜನೆಯಡಿ ನೇಮಕಗೊಂಡು 4 ವರ್ಷ ಬಳಿಕ ಕೆಲಸದಿಂದ ಬಿಡುಗಡೆ ಹೊಂದುವ ‘ಅಗ್ನಿವೀರ’ರರಿಗೆ ಆದ್ಯತೆ ಮೇಲೆ ನೌಕರಿ ನೀಡಲು ಕೇಂದ್ರ ಗೃಹ ಸಚಿವಾಲಯ, ಉತ್ತರ ಪ್ರದೇಶ ಸರ್ಕಾರ ಹಾಗೂ ಮಧ್ಯಪ್ರದೇಶ ಸರ್ಕಾರಗಳು ನಿರ್ಧರಿಸಿವೆ.
‘ಅಗ್ನಿಪಥ’ ಯೋಜನೆಯಡಿ ನೇಮಕಗೊಂಡು ಸೇವೆಯಿಂದ ಬಿಡುಗಡೆಗೊಳ್ಳುವ ‘ಅಗ್ನಿವೀರ’ ಯೋಧರಿಗೆ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳು ಹಾಗೂ ಅಸ್ಸಾಂ ರೈಫಲ್ಸ್‌ನಲ್ಲಿ ಆದ್ಯತೆ ನೀಡಲಾಗುವುದು. ಇದಕ್ಕೆ ನಿಯಮಾವಳಿ ರಚನೆ ಆರಂಭಿಸಲಾಗಿದೆ’ ಎಂದು ಅಮಿತ್ ಶಾ ಸಚಿವರಾಗಿರುವ ಕೇಂದ್ರ ಗೃಹ ಸಚಿವಾಲಯ ಹೇಳಿದೆ.
ಇನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಟ್ವೀಟ್ ಮಾಡಿದ್ದು, ‘ಭಾರತ ಮಾತೆಯ ಸೇವೆಗೈದು ಮರಳಿದ ಅಗ್ನಿವೀರರಿಗೆ ರಾಜ್ಯ ಪೊಲೀಸ್ ಹಾಗೂ ಸಂಬಂಧಿತ ಸೇವೆಗಳ ನೇಮಕದಲ್ಲಿ ಆದ್ಯತೆ ನೀಡಲಾಗುವುದು’ ಎಂದಿದ್ದಾರೆ.
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕೂಡ ಇದೇ ಮಾತು ಹೇಳಿದ್ದು , ‘ಮಧ್ಯಪ್ರದೇಶ ಪೊಲೀಸ ನೇಮಕಾತಿ ವೇಳೆ, ಸೇನೆಯಲ್ಲಿ ಸೇವೆಗೈದು ಮರಳಿದ ಅಗ್ನಿವೀರರನ್ನು ಮೊದಲು ಪರಿಗಣಿಸಲಾಗುವುದು’ ಎಂದರು.
ಸೇನಾ ಶಿಸ್ತಿನೊಂದಿಗೆ ರಾಜಿ: ರಾಹುಲ್ ಟೀಕೆ
ಅಗ್ನಿಪಥ ಯೋಜನೆಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ. ‘ದೇಶ ಪಾಕಿಸ್ತಾನ ಹಾಗೂ ಚೀನಾದಿಂದ ಬೆದರಿಕೆ ಎದುರಿಸುತ್ತಿದೆ. ಆದರೆ ಅಗ್ನಿಪಥ ಯೋಜನೆಯಿಂದ ಸೇನಾಪಡೆಗಳ ಕಾರ್ಯವಿಧಾನದ ಮೇಲೆ ಪರಿಣಾಮ ಬೀರುತ್ತದೆ. ದೇಶದ ಗೌರವ, ಸಂಪ್ರದಾಯ, ಪಡೆಗಳ ಶಿಸ್ತಿನೊಂದಿಗೆ ಸರ್ಕಾರವು ರಾಜಿ ಮಾಡಿಕೊಳ್ಳುವುದನ್ನು ಬಿಡಬೇಕು’ ಎಂದಿದ್ದಾರೆ.
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಖೂಡ ‘ಸರ್ಕಾರವು ಸೇನೆಯನ್ನು ಏಕೆ ಪ್ರಯೋಗಶಾಲೆ ಮಾಡುತ್ತಿದೆ?’ ಎಂದು ಪ್ರಶ್ನಿಸಿದ್ದಾರೆ.
ಅಗ್ನಿಪಥ ವಿರುದ್ಧ ಬಿಹಾರದಲ್ಲಿ ಪ್ರತಿಭಟನೆ
ಬಿಹಾರದಲ್ಲಿ ಅಗ್ನಿಪಥ ಯೋಜನೆ ವಿರೋಧಿಸಿ ಸೈನಿಕ ಹುದ್ದೆ ಆಕಾಂಕ್ಷಿಗಳು ಪ್ರತಿಭಟನೆ ನಡೆಸಿದ್ದಾರೆ. ‘ಕೊರೋನಾ ಕಾರಣ 2 ವರ್ಷ ಸೇನಾ ನೇಮಕ ನಡೆದಿರಲಿಲ್ಲ. ಈ ಹಂತದಲ್ಲಿ ಕೇವಲ 4 ವರ್ಷ ಸೇವೆ ಸಲ್ಲಿಕೆಯ ‘ಅಗ್ನಿಪಥ’ ಘೋಷಿಸಲಾಗಿದೆ. ಸೇನೆಯ ಕಾಯಂ ಸೇವಾ ಸ್ಥಾನಾಕಾಂಕ್ಷಿಗಳಾಗಿದ್ದ ನಮ್ಮ ಗತಿ ಏನು?’ ಎಂದು ಪ್ರಶ್ನಿಸಿದ್ದಾರೆ. ‘ಅಲ್ಲದೆ, ಸೇನಾ ಸೇರ್ಪಡೆಗೆ 21 ವರ್ಷದ ಮಿತಿ ಹೇರಲಾಗಿದೆ. 2 ವರ್ಷ ನೇಮಕವೇ ನಡೆದಿರಲಿಲ್ಲ. ಈ 2 ವರ್ಷ ಕಾದು ಕೂತು 21 ವರ್ಷ ಮೀರಿದವರ ಗತಿ ಏನು? ನೇಮಕಕ್ಕೆ ವಯೋಮಿತಿಯನ್ನು ಏಕೆ ಕೇಂದ್ರ ಸಡಿಲಿಸಿಲ್ಲ?’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.