ಅಗ್ನಿವೀರರಿಗೆ ಡಿಗ್ರಿ ವಿಶೇಷ ಕೋರ್ಸ್, ಕೇಂದ್ರದ ಸೌಲಭ್ಯ, 50% ಅಂಕ ಕೊಡುಗೆ!
* ಅಗ್ನಿಪಥ ಯೋಜನೆಗೆ ಇನ್ನು 30 ದಿನದಲ್ಲಿ ನೇಮಕ ಆರಂಭ
* ಅಗ್ನಿವೀರರಿಗೆ 3 ವರ್ಷದ ಕೌಶಲ್ಯಾಧರಿತ ನಿಸ್ತಂತು ಡಿಗ್ರಿ ಕೋರ್ಸ್
* 4 ವರ್ಷದ ಸೇವೆ ಬಳಿಕ ಅವರಿಗೆ ಉನ್ನತ ಶಿಕ್ಷಣ ಅಥವಾ ನೌಕರಿ ಗಿಟ್ಟಿಸಲು ಸಾಧ್ಯ
ನವದೆಹಲಿ(ಜೂ.16): ಸೇನೆಯಲ್ಲಿ ಅಗ್ನಿಪಥ ಯೋಜನೆಯಡಿ 4 ವರ್ಷ ಸೇವೆ ಸಲ್ಲಿಸಿ ಬಿಡುಗಡೆ ಹೊಂದುವ ಅಗ್ನಿವೀರರ ಶೈಕ್ಷಣಿಕ ಮತ್ತು ಉದ್ಯೋಗದ ಭವಿಷ್ಯದ ಕುರಿತು ಅನುಮಾನಗಳು ವ್ಯಕ್ತವಾದ ಬೆನ್ನಲ್ಲೇ, ಇಂಥ ಯೋಧರಿಗೆ ಶಿಕ್ಷಣ ಮತ್ತು ಉದ್ಯೋಗಕ್ಕೆ ನೆರವಾಗುವ ಮಹತ್ವದ ಯೋಜನೆಯೊಂದನ್ನು ಕೇಂದ್ರ ಸರ್ಕಾರ ಬುಧವಾರ ಪ್ರಕಟಿಸಿದೆ.
ಈ ಯೋಜನೆಯಡಿ 4 ವರ್ಷಗಳ ಸೇವೆಯ ವೇಳೆಯೇ ಅಗ್ನಿವೀರರಿಗೆ 3 ವರ್ಷದ ಕೌಶಲ್ಯಾಧರಿತ ನಿಸ್ತಂತು ಡಿಗ್ರಿ ಕೋರ್ಸ್ ಆರಂಭಿಸಲಾಗುವುದು. ಇದರಿಂದ 4 ವರ್ಷದ ಸೇವೆ ಬಳಿಕ ಅವರಿಗೆ ಉನ್ನತ ಶಿಕ್ಷಣ ಅಥವಾ ನೌಕರಿ ಗಿಟ್ಟಿಸಲು ಸಾಧ್ಯವಾಗಲಿದೆ ಎಂದು ಕೇಂದ್ರ ಶಿಕ್ಷಣ ಸಚಿವಾಲಯ ಘೋಷಿಸಿದೆ.
ಈ ಯೋಜನೆ ಅನ್ವಯ 4 ವರ್ಷದ ಸೇವಾವಧಿಯಲ್ಲಿ ಅವರು ಪಡೆದ ಕೌಶಲ್ಯಕ್ಕೆ ಅಧಿಕೃತ ಮನ್ನಣೆ ನೀಡುವುದಕ್ಕೆ ಇಂದಿರಾ ಗಾಂಧಿ ಮುಕ್ತ ವಿವಿಯಲ್ಲಿ (ಇಗ್ನೋ) ಡಿಗ್ರಿ ಕೋರ್ಸ್ ಆರಂಭಿಸಲಾಗುತ್ತದೆ. 3 ವರ್ಷದ ಡಿಗ್ರಿ ಕೋರ್ಸ್ ಅನ್ನು ತಲಾ 50 ಅಂಕಗಳ ಎರಡು ಭಾಗಗಳಾಗಿ ವಿಂಗಡಿಸಲಾಗುತ್ತದೆ. ಮೊದಲ ಶೇ.50ರಷ್ಟುಅಂಕವು ಅಗ್ನಿವೀರರು ತಮ್ಮ ಸೇವಾವಧಿಯಲ್ಲಿ ಪಡೆದ ತಾಂತ್ರಿಕ ಹಾಗೂ ತಾಂತ್ರಿಕೇತರ ತರಬೇತಿಯ ಕೌಶಲ್ಯಾಧರಿತವಾಗಿರುತ್ತದೆ. ಇದರ ಆಧಾರದಲ್ಲೇ ಅವರಿಗೆ ಶೇ.50ರಷ್ಟುಅಂಕ ಬರುತ್ತವೆ. ಇನ್ನುಳಿದ ಶೇ.50ರಷ್ಟುಪಠ್ಯ ಭಾಷೆ, ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಜ್ಯೋತಿಷ್ಯದಂಥ ವಿಷಯಗಳಿಗೆ ಸಂಬಂಧಿಸಿದ್ದಾಗಿರುತ್ತದೆ. ಈ ವಿಷಯಗಳ ಆಧಾರದಲ್ಲಿ ಉಳಿದ ಶೇ.50 ಅಂಕ ನೀಡಲಾಗುತ್ತದೆ.
ಬಿಎ, ಬಿಕಾಂ ಮಾದರಿಯಲ್ಲಿ ಯುಜಿಸಿ ನಿಯಮಗಳಿಗೆ ಅನುಗುಣವಾಗಿ ಇಗ್ನೋ ಶಿಕ್ಷಣ ನೀಡಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಡಿಗ್ರಿಗೆ ದೇಶ ವಿದೇಶಗಳಲ್ಲಿ ನೌಕರಿ ಹಾಗೂ ಶೈಕ್ಷಣಿಕ ಮಾನ್ಯತೆ ಇರುತ್ತದೆ. ಈ ಸಂಬಂಧವಾಗಿ ಸೇನೆ, ನೌಕಾಪಡೆ ಹಾಗೂ ವಾಯುಪಡೆಗಳೊಂದಿಗೆ ಶೀಘ್ರದಲ್ಲೇ ಇಗ್ನೋ ಒಪ್ಪಂದ ಮಾಡಿಕೊಳ್ಳಲಿದೆ ಎಂದು ಕೇಂದ್ರ ಶಿಕ್ಷಣ ಇಲಾಖೆ ತಿಳಿಸಿದೆ.
3 ತಿಂಗಳಲ್ಲಿ ಅಗ್ನಿವೀರರ ನೇಮಕ ಶುರು
ಅಗ್ನಿಪಥ ಯೋಜನೆಯಡಿ 4 ವರ್ಷದ ಅಲ್ಪಾವಧಿಗೆ ಯುವ ಯೋಧರನ್ನು ನೇಮಿಸಿಕೊಳ್ಳಲಾಗುವುದು ಎಂದು ಸರ್ಕಾರ ಘೋಷಿಸಿದ ಬೆನ್ನಲ್ಲೇ ಮುಂಬರುವ ತಿಂಗಳುಗಳಲ್ಲಿ 40 ಸಾವಿರ ಯೋಧರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ಭಾರತೀಯ ಸೇನೆ ತಿಳಿಸಿದೆ. ‘ಮುಂದಿನ 180 ದಿನಗಳಲ್ಲಿ 25 ಸಾವಿರ ಅಗ್ನಿವೀರರನ್ನು ನೇಮಕ ಮಾಡಿಕೊಳ್ಳಲು ಸೇನೆ ನಿರ್ಧರಿಸಿದೆ. ಉಳಿದ 15 ಸಾವಿರ ಯೋಧರ ನೇಮಕ 1 ತಿಂಗಳ ನಂತರ ಆರಂಭವಾಗಲಿದೆ. ಈ ನೇಮಕಾತಿ ದೇಶದ ಎಲ್ಲಾ ಜಿಲ್ಲೆಗಳನ್ನು ಒಳಗೊಳ್ಳಲಿದೆ ಎಂದು ಉಪ ಸೇನಾ ಮುಖ್ಯಸ್ಥ ಲೆ| ಜ| ಬಿ.ಎಸ್.ರಾಜು ಹೇಳಿದ್ದಾರೆ.