Agnipath Scheme: CAPF, ಅಸ್ಸಾಂ ರೈಫಲ್ಸ್‌ನಲ್ಲಿ ಅಗ್ನಿವೀರರಿಗೆ 10% ಮೀಸಲಾತಿ: ಗೃಹ ಸಚಿವಾಲಯ!
* ಅಗ್ನಿಪಥ ಯೋಜನೆಗೆ ಹಲವು ಜಿಲ್ಲೆಗಳಲ್ಲಿ ವಿರೋಧ
* ಹಿಂಸಾಚಾರ, ಪ್ರತಿಭಟನೆಗೆ ಮುಂದಾದ ಜನರು
* ವಿವಾದದ ನಡುವೆಯೇ ಮಹತ್ವದ ಘೋಚಣೆ ಮಾಡಿದ ಗೃಹಸಚಿವಾಲಯ
ನವದೆಹಲಿ(ಜೂ.18): ಅಗ್ನಿಪಥ್ ಯೋಜನೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳ ನಡುವೆ ಗೃಹ ಸಚಿವಾಲಯವು ಮಹತ್ವದ ಘೋಷಣೆ ಮಾಡಿದೆ. ಸಿಎಪಿಎಫ್ ಮತ್ತು ಅಸ್ಸಾಂ ರೈಫಲ್ಸ್ ನೇಮಕಾತಿಯಲ್ಲಿ ಅಗ್ನಿವೀರರಿಗೆ ಶೇ.10ರಷ್ಟು ಮೀಸಲಾತಿ ನೀಡಲು ನಿರ್ಧರಿಸಲಾಗಿದೆ ಎಂದು ಗೃಹ ಸಚಿವಾಲಯ ಟ್ವೀಟ್ ಮಾಡಿದೆ.
CAPF ಗಳು ಮತ್ತು ಅಸ್ಸಾಂ ರೈಫಲ್ಸ್‌ನಲ್ಲಿ ನೇಮಕಾತಿಗಾಗಿ ಅಗ್ನಿವೀರ್‌ಗಳಿಗೆ ಸೂಚಿಸಲಾದ ಗರಿಷ್ಠ ವಯಸ್ಸಿನ ಮಿತಿಯಿಂದ 3 ವರ್ಷಗಳ ಸಡಿಲಿಕೆ ನೀಡಲು ಗೃಹ ವ್ಯವಹಾರಗಳ ಸಚಿವಾಲಯ ನಿರ್ಧರಿಸಿದೆ. ಅಲ್ಲದೆ, ಅಗ್ನಿವೀರ್‌ನ ಮೊದಲ ಬ್ಯಾಚ್‌ಗೆ ವಯಸ್ಸಿನ ಸಡಿಲಿಕೆಯು ನಿಗದಿತ ಗರಿಷ್ಠ ವಯಸ್ಸಿನ ಮಿತಿಗಿಂತ 5 ವರ್ಷಗಳವರೆಗೆ ಇರುತ್ತದೆ.
ಇನ್ನು ಬಿಹಾರ ಸೇರಿದಂತೆ ದೇಶದ 13 ರಾಜ್ಯಗಳಲ್ಲಿ, ಯುವಕರ ಹಿಂಸಾತ್ಮಕ ಪ್ರದರ್ಶನಗಳ ಬಗ್ಗೆ ಪೊಲೀಸರು ಇದೀಗ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ದೇಶಾದ್ಯಂತ ಬಂಧನಗಳ ಸುತ್ತು ನಡೆಯುತ್ತಿದೆ. ದುಷ್ಕರ್ಮಿಗಳನ್ನು ಹಿಡಿಯಲು ಸಿಸಿಟಿವಿ ದೃಶ್ಯಾವಳಿ, ವಿಡಿಯೋ ಮತ್ತು ಫೋಟೋಗಳ ಸಹಾಯ ಪಡೆಯಲಾಗುತ್ತಿದೆ. ಉತ್ತರಪ್ರದೇಶ ಮತ್ತು ಬಿಹಾರದಲ್ಲಿ ಹೆಚ್ಚಿನ ಬೆಂಕಿ ಹಚ್ಚುವ ಘಟನೆಗಳು ವರದಿಯಾಗಿವೆ. ಯುಪಿ, ತೆಲಂಗಾಣ ಮತ್ತು ಬಿಹಾರದಲ್ಲಿ ದುಷ್ಕರ್ಮಿಗಳು 12 ರೈಲುಗಳಿಗೆ ಬೆಂಕಿ ಹಚ್ಚಿದ್ದಾರೆ. ರೈಲು ನಿಲ್ದಾಣಗಳು ಮತ್ತು ಬಸ್ಸುಗಳ ಮೇಲೆ ಕಲ್ಲು ತೂರಾಟ, ಲೂಟಿ ಮಾಡಲಾಯಿತು. ರೈಲ್ವೆಯು 200 ಕ್ಕೂ ಹೆಚ್ಚು ರೈಲುಗಳನ್ನು ರದ್ದುಗೊಳಿಸಿದೆ.
ನಾಲ್ಕನೇ ದಿನವೂ (ಜೂನ್ 18) ಈ ಹಿಂಸಾಚಾರ ಮುಂದುವರಿದಿದೆ. ಬಿಹಾರದ ಜೆಹಾನಾಬಾದ್‌ನ ತೆಹ್ತಾ ಬಜಾರ್‌ನಲ್ಲಿ ಬೆಳಗ್ಗೆ 7:30ಕ್ಕೆ ಕಲ್ಲು ತೂರಾಟ ನಡೆಸುತ್ತಿದ್ದ ಪ್ರತಿಭಟನಾಕಾರರು ಟ್ರಕ್‌ಗೆ ಬೆಂಕಿ ಹಚ್ಚಿದ್ದಾರೆ. ಪೊಲೀಸರು ಅಲ್ಲಿಗೆ ತಲುಪುವಷ್ಟರಲ್ಲಿ ದುಷ್ಕರ್ಮಿಗಳು ಪರಾರಿಯಾಗಿದ್ದರು.