* ಇಂದಿನಿಂದಲೇ ಅಗ್ನಿವೀರರ ನೇಮಕ ಪ್ರಕ್ರಿಯೆ* ಅಗ್ನಿವೀರರು ಹಿಂಸೆಯಲ್ಲಿ ಭಾಗವಹಿಸಿಲ್ಲ ಎಂದು ಮುಚ್ಚಳಿಕೆ ನೀಡಬೇಕು* ಪೊಲೀಸ್‌ ಪರಿಶೀಲನೆಯಲ್ಲಿ ಪಾಸಾಗದಿದ್ದರೆ ಅಗ್ನಿವೀರರ ನೇಮಕ ಇಲ್ಲ

ನವದೆಹಲಿ(ಜೂ.20): ಯುವಕ, ಯುವತಿಯರಿಗೆ ಸೇನೆಯಲ್ಲಿ 4 ವರ್ಷಗಳ ಅಲ್ಪಾವಧಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸುವ ‘ಅಗ್ನಿಪಥ’ ಯೋಜನೆ ಕುರಿತು ಹಲವು ರಾಜ್ಯಗಳಲ್ಲಿ ಭಾರೀ ಪ್ರತಿಭಟನೆಗಳು ನಡೆಯುತ್ತಿರುವ ಹೊರತಾಗಿಯೂ, ‘ಯಾವುದೇ ಕಾರಣಕ್ಕೂ ಯೋಜನೆಯನ್ನು ಹಿಂದಕ್ಕೆ ಪಡೆಯುವುದಿಲ್ಲ’ ಎಂದು ಕೇಂದ್ರ ಸರ್ಕಾರ ಮತ್ತು ಸೇನೆ ಸ್ಪಷ್ಟಪಡಿಸಿವೆ. ಜೊತೆಗೆ ಸೇನಾಪಡೆ, ವಾಯುಪಡೆ ಮತ್ತು ನೌಕಪಡೆಗಳು, ಅಗ್ನಿವೀರರ ನೇಮಕಾತಿ ಪ್ರಕ್ರಿಯೆಯ ಅಧಿಕೃತ ದಿನಾಂಕಗಳನ್ನು ಪ್ರಕಟಿಸಿದ್ದು, ಸೋಮವಾರವೇ ಸೇನೆಯ ಕರಡು ಅಧಿಸೂಚನೆ ಹೊರಬೀಳಲಿದೆ. ಈ ಮೂಲಕ, ಯೋಜನೆ ಜಾರಿಗೆ ಸರ್ಕಾರ ಕಟಿಬದ್ಧವಾಗಿದೆ ಎಂಬುದರ ಬಗ್ಗೆ ಸ್ಪಷ್ಟಸಂದೇಶ ರವಾನಿಸಿವೆ.

ಅಲ್ಲದೆ, ‘ಸೇನೆಗೆ ಬೇಕಾಗಿರುವುದು ಶಿಸ್ತಿನ ಸಿಪಾಯಿಗಳು, ಗಲಭೆಕೋರರು, ಲೂಟಿಕೋರರು ಸೇನೆಗೆ ಬೇಕಾಗಿಲ್ಲ. ಅಂಥವರಿಗೆ ಅವಕಾಶವನ್ನೂ ನೀಡುವುದಿಲ್ಲ’ ಎಂದು ಸ್ಪಷ್ಟಪಡಿಸುವ ಮೂಲಕ, ಹಿಂಸಾಕೃತ್ಯಗಳಲ್ಲಿ ಭಾಗಿಯಾದವರಿಗೆ ಸೇನೆಗೆ ಪ್ರವೇಶವಿಲ್ಲ ಎಂಬ ಕಠಿಣ ಎಚ್ಚರಿಕೆ ನೀಡಿವೆ. ಹೋರಾಟ ಕೈಬಿಡುವಂತೆ ಮನವಿ ಮಾಡಿವೆ.

ಹಿಂಪಡೆಯಲ್ಲ:

ಅಗ್ನಿಪಥ ಯೋಜನೆಗೆ ಭಾರೀ ವಿರೋಧದ ಬೆನ್ನಲ್ಲೇ, ಸೇನೆಯ ಮೂರೂ ವಿಭಾಗದ ಹಿರಿಯ ಅಧಿಕಾರಿಗಳು ಮತ್ತು ಕೇಂದ್ರ ಮಿಲಿಟಿರಿ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಲೆ.ಜ. ಅನಿಲ್‌ ಪುರಿ, ಭಾನುವಾರ ಇಲ್ಲಿ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ಈ ವೇಳೆ ಅಗ್ನಿಪಥ ಯೋಜನೆ ಯುವಕರನ್ನು ನೇಮಕ ಮಾಡಿಕೊಳ್ಳುವ ಪ್ರಮುಖ ಉದ್ದೇಶದ ಬಗ್ಗೆ ಮಾಹಿತಿ ನೀಡಿದ ಲೆ.ಜ.ಅನಿಲ್‌ ಪುರಿ ‘ಸೇನೆಯಲ್ಲಿನ ಯೋಧರ ಸರಾಸರಿ ವಯಸ್ಸನ್ನು ಕಡಿಮೆ ಮಾಡುವ ಉದ್ದೇಶದಿಂದಲೇ ಅಗ್ನಿಪಥ ಯೋಜನೆ ಜಾರಿಗೆ ನಿರ್ಧರಿಸಲಾಗಿದೆ. ಸೇನೆಯಲ್ಲಿ ಹಾಲಿ ಯೋಧರ ಸರಾಸರಿ ವಯಸ್ಸು 30ಕ್ಕಿಂತ ಹೆಚ್ಚಿದೆ. ಇದು ಸಹಜವಾಗಿಯೇ ಕಳವಳದ ವಿಷಯವಾಗಿತ್ತು. 1999ರ ಕಾರ್ಗಿಲ್‌ ಯುದ್ಧದ ಕುರಿತು ವರದಿ ನೀಡಿದ್ದ ಸಮಿತಿ ಕೂಡಾ ಸೇನೆಯಲ್ಲಿ ಯುವಶಕ್ತಿ ತುಂಬಬೇಕಾದ ಅಗತ್ಯ ಪ್ರತಿಪಾದಿಸಿತ್ತು’ ಎಂದರು.

ಜತೆಗೆ, ‘ಯುವಕರಿಗೆ ಅಪಾಯವನ್ನು ಎದುರಿಸುವ ಶಕ್ತಿ ಸಾಮರ್ಥ್ಯ ಹೆಚ್ಚಿರುತ್ತದೆ. ಸೇನೆಯನ್ನು ನಾವು ಜೋಷ್‌ ಮತ್ತು ಹೋಷ್‌ (ಉತ್ಸಾಹ ಮತ್ತು ಅನುಭವ)ನ ಮಿಶ್ರಣವಾಗಿ ಹೊಂದಲು ಬಯಸುತ್ತೇವೆ. ಅಲ್ಲದೆ ವಿದೇಶಗಳಲ್ಲಿನ ಸೇನೆಗಳನ್ನೂ ಅಧ್ಯಯನ ಮಾಡಿ, ಸುದೀರ್ಘ ಸಮಾಲೋಚನೆ ಬಳಿಕ ದೇಶದಲ್ಲೂ ಯೋಜನೆ ಜಾರಿಗೆ ನಿರ್ಧರಿಸಲಾಗಿದೆ. ಯೋಜನೆ ಜಾರಿಗೆ ಇದಕ್ಕಿಂತ ಉತ್ತಮ ಸಮಯ ಸಿಗಲು ಸಾಧ್ಯವಿಲ್ಲ. ಹೀಗಾಗಿ ಯೋಜನೆಯನ್ನು ಯಾವುದೇ ಕಾರಣಕ್ಕೂ ಹಿಂದಕ್ಕೆ ಪಡೆಯುವುದಿಲ್ಲ. ಅಷ್ಟಕ್ಕೂ ನಾವು ಯೋಜನೆಯನ್ನು ಯಾಕೆ ಹಿಂದಕ್ಕೆ ಪಡೆಯಬೇಕು?’ ಎಂದು ಪ್ರಶ್ನಿಸಿದರು.

ಸೇನಾಪಡೆ:

ಸೇನಾಪಡೆಯ ನೇಮಕಾತಿ ಬಗ್ಗೆ ವಿವರ ನೀಡಿದ ಲೆ.ಜ ಬನ್ಸಿ ಪೊನ್ನಪ್ಪ ‘ನೇಮಕಾತಿ ಸಂಬಂಧ ಜೂ.20ರಂದು ಕರಡು ಅಧಿಸೂಚನೆ ಹೊರಡಿಸಲಾಗುವುದು. ಜು.1ರ ನಂತರ ವಿವಿಧ ಪಡೆಗಳಿಗೆ ನೇಮಕ ಸಂಬಂಧ ಮತ್ತಷ್ಟುಅಧಿಸೂಚನೆ ಪ್ರಕಟಗೊಳ್ಳಲಿದೆ. ಆಗಸ್ಟ್‌ ಮೊದಲ ವಾರದಲ್ಲಿ ಸೇನೆಗೆ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. 25,000 ಅಗ್ನಿವೀರರನ್ನು ಒಳಗೊಂಡ ಮೊದಲ ತಂಡವು ಡಿಸೆಂಬರ್‌ ಮೊದಲ ಅಥವಾ ಎರಡನೇ ವಾರದಲ್ಲಿ ತರಬೇತಿಗೆ ಆಗಮಿಸಲಿದೆ. ಎರಡನೇ ತಂಡವು ಫೆ.23ರಿಂದ ತರಬೇತಿಗೆ ಆಗಮಿಸಲಿದೆ. ಒಟ್ಟಾರೆ 40,000 ಯೋಧರ ನೇಮಕ ಸಂಬಂಧ ದೇಶದ ಎಲ್ಲಾ ಪ್ರದೇಶಗಳ ಜನರಿಗೂ ಅನುಕೂಲವಾಗುವಂತೆ 83 ನೇಮಕಾತಿ ಕೇಂದ್ರಗಳ ಮೂಲಕ ಪ್ರಕ್ರಿಯೆ ನಡೆಸಲಾಗುವುದು’ ಎಂದು ತಿಳಿಸಿದರು.

ವಾಯುಪಡೆ:

ವಾಯುಪಡೆ ನೇಮಕ ಬಗ್ಗೆ ಮಾಹಿತಿ ನೀಡಿದ ಏರ್‌ ಮಾರ್ಷಲ್‌ ಎಸ್‌.ಕೆ.ಝಾ ‘ಜೂ.24ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ. ಮೊದಲ ಹಂತದ ನೇಮಕಕ್ಕಾಗಿ ಆನ್‌ಲೈನ್‌ ಪರೀಕ್ಷೆಗಳ ಪ್ರಕ್ರಿಯೆ ಜು.24ರಿಂದ ಆರಂಭವಾಗಲಿದೆ. ಮೊದಲ ತಂಡಕ್ಕೆ ಡಿ.30ರಿಂದ ತರಬೇತಿ ಆರಂಭಿಸುವ ಉದ್ದೇಶವಿದೆ ಎಂದು ತಿಳಿಸಿದರು.

ನೌಕಾಪಡೆ:

ನೌಕಾಪಡೆ ನೇಮಕ ಕುರಿತು ಮಾಹಿತಿ ನೀಡಿ ವೈಸ್‌ ಅಡ್ಮಿರಲ್‌ ದಿನೇಶ್‌ ತ್ರಿಪಾಠಿ ‘ನೇಮಕ ಸಂಬಂಧ ಜೂ.25ರಂದು ವಿಸ್ತೃತ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು. ಮೊದಲ ತಂಡವು ನ.21ರಂದು ತರಬೇತಿಗೆ ಹಾಜರಾಗಲಿದೆ. ಯುವಕ, ಯುವತಿಯರನ್ನು ನೇಮಕಕ್ಕೆ ಪರಿಗಣಿಸಲಾಗುವುದು ಎಂದು ತಿಳಿಸಿದರು.

ಸೇನಾ ನೇಮಕಾತಿ ವೇಳಾಪಟ್ಟಿ

* ಭೂಸೇನೆ

- ಸೋಮವಾರವೇ ಅಗ್ನಿಪಥ ಕರಡು ಅಧಿಸೂಚನೆ ಪ್ರಕಟ

- ಜು.1ರ ನಂತರ ವಿವಿಧ ಪಡೆಗಳಿಗೆ ನೇಮಕ ಮತ್ತಷ್ಟುಅಧಿಸೂಚನೆ

- 83 ರಾರ‍ಯಲಿ ಆಯೋಜನೆ, ಒಟ್ಟು 40 ಸಾವಿರ ನೇಮಕ

- ಡಿಸೆಂಬರ್‌ನಲ್ಲಿ 25 ಸಾವಿರ ಅಗ್ನಿವೀರರು ಸೇನೆಗೆ ಸೇರ್ಪಡೆ

- ಅಗ್ನಿವೀರರ 2ನೇ ತಂಡ ಫೆಬ್ರವರಿಗೆ

* ವಾಯುಸೇನೆ

- ಜೂ.24ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ.

- ಮೊದಲ ಹಂತದ ನೇಮಕಕ್ಕಾಗಿ ಜು.24ರಿಂದ ಆನ್‌ಲೈನ್‌ ಪರೀಕ್ಷೆ ಪ್ರಕ್ರಿಯೆ

- ಡಿ.30ರಿಂದ ವಾಯುಪಡೆ ಅಗ್ನಿವೀರರ ತರಬೇತಿ ಆರಂಭ

* ನೌಕಾಪಡೆ

- ನೇಮಕ ಸಂಬಂಧ ಜೂ.25ರಂದು ವಿಸ್ತೃತ ಮಾರ್ಗಸೂಚಿ ಬಿಡುಗಡೆ

- ಮೊದಲ ತಂಡವು ನ.21ರಂದು ತರಬೇತಿಗೆ ಹಾಜರು