ನ್ಯೂಯಾರ್ಕ್(ಜ.25): ಭಾರತದ 1115 ಸೇರಿದಂತೆ ವಿಶ್ವದ 32000ಕ್ಕೂ ಹೆಚ್ಚು ದೊಡ್ಡ ಅಣೆಕಟ್ಟುಗಳು 2025ರ ವೇಳೆಗೆ 50 ವರ್ಷಗಳನ್ನು ಪೂರೈಸಲಿದ್ದು, ಮನುಕುಲಕ್ಕೆ ಅಪಾಯದ ಭೀತಿ ಸೃಷ್ಟಿಸಿವೆ ಎಂದು ವರದಿಯೊಂದು ಎಚ್ಚರಿಸಿದೆ. 20ನೇ ಶತಮಾನದಲ್ಲಿ ನಿರ್ಮಿಸಲಾದ ಬಹುತೇಕ ಅಣೆಕಟ್ಟುಗಳ ಕೆಳಪಾತ್ರದಲ್ಲೇ ವಿಶ್ವದ ಬಹುತೇಕ ಜನರು ವಾಸ ಮಾಡುತ್ತಿರುವ ಕಾರಣ, ಈ ಬಗ್ಗೆ ಮುನ್ನೆಚ್ಚರಿಕೆ ಕ್ರಮ ಅಗತ್ಯ ಎಂದು ವಿಶ್ವಸಂಸ್ಥೆಯ ವರದಿಯೊಂದು ಎಚ್ಚರಿಸಿದೆ.

ವಿಶ್ವದ 58700 ದೊಡ್ಡ ಅಣೆಕಟ್ಟುಗಳ ಪೈಕಿ ಬಹುತೇಕವನ್ನು 1930-1970ರ ನಡುವೆ ನಿರ್ಮಿಸಲಾಗಿದೆ. ಅವುಗಳ ನಿರ್ಮಾಣ ವಿನ್ಯಾಸ 50-100 ವರ್ಷ ಬಾಳುವಂಥದ್ದು. 50 ವರ್ಷದ ಬಳಿಕ ಇಂಥ ಅಣೆಕಟ್ಟುಗಳು, ತಮಗೆ ವಯಸ್ಸಾಗಿರುವ ಕುರುಹುಗಳನ್ನು ತೋರಿಸಲು ಆರಂಭಿಸುತ್ತವೆ. ನಿರ್ವಹಣೆಯಲ್ಲಿ ಕಂಡುಬರುವ ವ್ಯತ್ಯಯ, ನಿರ್ವಹಣಾ ವೆಚ್ಚ ಏರಿಕೆ, ಹೂಳಿನ ಪ್ರಮಾಣ ಏರಿಕೆ, ಕಾರ್ಯಕ್ಷಮತೆಯ ಕುಂಠಿತ ಮೊದಲಾದವುಗಳು ಅಣೆಕಟ್ಟಿನ ಆಯುಷ್ಯ ಮೀರಿರುವ ಸುಳಿವಾಗಿ ಗುರುತಿಸಬಹುದು ಎಂದು ‘ಏಜಿಂಗ್‌ ವಾಟರ್‌ ಇನ್ಫ್ರಾಸ್ಟ್ರಕ್ಚರ್‌: ಆ್ಯನ್‌ ಎಮರ್ಜಿಂಗ್‌ ಗ್ಲೋಬಲ್‌ ರಿಸ್ಕ್‌’ ಎಂಬ ವರದಿಯಲ್ಲಿ ತಿಳಿಸಲಾಗಿದೆ. ವಿಶ್ವದ 32716 ದೊಡ್ಡ ಅಣೆಕಟ್ಟುಗಳ ಪೈಕಿ ಶೇ.55ರಷ್ಟುಚೀನಾ, ಭಾರತ, ಜಪಾನ್‌ ಮತ್ತು ದಕ್ಷಿಣ ಕೊರಿಯಾದಲ್ಲೇ ಇವೆ ಎಂದು ವರದಿ ಹೇಳಿದೆ.

ಭಾರತದ ಕಥೆ:

ಭಾರತದ 1115 ಅಣೆಕಟ್ಟುಗಳು 2025ಕ್ಕೆ ಬಹುತೇಕ 50 ವರ್ಷ ಪೂರೈಸುತ್ತವೆ. 4250 ಡ್ಯಾಂಗಳು 2050ಕ್ಕೆ 50 ವರ್ಷ ಪೂರ್ಣಗೊಳಿಸುತ್ತವೆ ಮತ್ತು 64 ಡ್ಯಾಮ್‌ಗಳು 2050ಕ್ಕೆ 150 ವರ್ಷ ಪೂರ್ಣಗೊಳಿಸುತ್ತವೆ.

ಮುಲ್ಲಪೆರಿಯಾರ್‌ ಅಪಾಯ:

100 ವರ್ಷಗಳಿಗೂ ಹಿಂದೆ ನಿರ್ಮಿಸಲಾದ ಕೇರಳದ ಮುಲ್ಲಪೆರಿಯಾರ್‌ ಅಣೆಕಟ್ಟಿನ ಕೆಳಪಾತ್ರದಲ್ಲಿ 35 ಲಕ್ಷಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ. ಒಂದು ವೇಳೆ ಅಣೆಕಟ್ಟಿಗೆ ಹೆಚ್ಚುಕಡಿಮೆ ಆದರೆ 35 ಲಕ್ಷ ಜನರು ತೀವ್ರ ತೊಂದರೆ ಎದುರಿಸಬೇಕಾಗಿ ಬರುತ್ತದೆ. ಮೇಲಾಗಿ ಈ ಅಣೆಕಟ್ಟು ಇರುವ ಪ್ರದೇಶ ಭೂಕಂಪ ವಲಯದಲ್ಲಿ ಬರುತ್ತದೆ. ಇದು ಅಣೆಕಟ್ಟು ರಚನಾತ್ಮಕ ವೈಫಲ್ಯ ತೋರಿಸುತ್ತದೆ ಎಂದು ವರದಿ ಹೇಳಿದೆ.

ಅಮೆರಿಕ ಕಥೆ:

ಅಮೆರಿಕದ 90580 ಅಣೆಕಟ್ಟುಗಳ ಸರಾಸರಿ ಆಯುಷ್ಯ 56 ವರ್ಷ. 2020ರಲ್ಲಿ ಬಳಕೆಯಲ್ಲಿರುವ ಅಮೆರಿಕದ ಶೇ.85ರಷ್ಟುಅಣೆಕಟ್ಟುಗಳ ತಮ್ಮ ಆಯುಷ್ಯ ಮೀರಿ ಕಾರ್ಯನಿರ್ವಹಿಸುತ್ತಿವೆ ಮತ್ತು ಶೇ.75ರಷ್ಟು ಅಣೆಕಟ್ಟುಗಳು ನಿರ್ಮಾಣದ 50 ವರ್ಷದ ಬಳಿಕ ವೈಫಲ್ಯಕ್ಕೆ ತುತ್ತಾಗಿರುವುದನ್ನು ಗಮನಿಸಬಹುದು ಎಂದು ವರದಿ ಹೇಳಿದೆ.