ಹೈದರಾಬಾದ್‌(ನ.30): ಮಹಾನಗರ ಪಾಲಿಕೆ ಚುನಾವಣೆ ಸ್ಥಳೀಯ ಮಟ್ಟದ ಮತ ಸಮರ ಎಂಬುದು ಸಾಮಾನ್ಯ ನಂಬಿಕೆ. ಆದರೆ ಹೈದರಾಬಾದ್‌ ಮಹಾನಗರ ಪಾಲಿಕೆ ಚುನಾವಣೆ ಯಾವುದೇ ವಿಧಾನಸಭೆ ಚುನಾವಣೆಗೆ ಕಡಿಮೆ ಇಲ್ಲದಂತೆ ನಡೆಯುತ್ತಿದ್ದು, ಬಿಜೆಪಿಯ ಅತಿರಥ ಮಹಾರಥ ನಾಯಕರೇ ಪ್ರಚಾರ ಕಣಕ್ಕೆ ಇಳಿಯುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

150 ಸದಸ್ಯ ಬಲದ, ತೆಲಂಗಾಣ ರಾಷ್ಟ್ರ ಸಮಿತಿ ಆಳ್ವಿಕೆಯಲ್ಲಿರುವ ಹೈದರಾಬಾದ್‌ ಪಾಲಿಕೆಯನ್ನು ಕೈವಶ ಮಾಡಿಕೊಳ್ಳಲೇಬೇಕು ಎಂದು ಹಟಕ್ಕೆ ಬಿದ್ದಿರುವ ಬಿಜೆಪಿ, ಇದನ್ನು ಪ್ರತಿಷ್ಠೆಯ ಮಹಾಸಮರವಾಗಿಸಿಕೊಂಡಿದೆ. ಶುಕ್ರವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೇ ಹೈದರಾಬಾದಲ್ಲಿ ಪ್ರಚಾರ ಮಾಡಿದ್ದರು. ಶನಿವಾರ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಅಖಾಡದಲ್ಲಿ ಧೂಳೆಬ್ಬಿಸಿದರು. ಬಹಿರಂಗ ಪ್ರಚಾರದ ಕೊನೆಯ ದಿನವಾದ ಭಾನುವಾರ ಕೇಂದ್ರದ ಗೃಹ ಸಚಿವ ಹಾಗೂ ಚುನಾವಣಾ ಚಾಣಕ್ಯ ಖ್ಯಾತಿಯ ಅಮಿತ್‌ ಶಾ ಅವರು ರೋಡ್‌ ಶೋ ನಡೆಸಿ ಎದುರಾಳಿಗಳಲ್ಲಿ ಆತಂಕ ಮೂಡಿಸಿದ್ದಾರೆ. ಹೈದರಾಬಾದ್‌ ಪಾಲಿಕೆ ಚುನಾವಣೆ ಡಿ.1ರಂದು ನಡೆಯಲಿದ್ದು, ಡಿ.4ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

ಕರ್ನಾಟಕದ ಆರೋಗ್ಯ ಸಚಿವ ಡಾ| ಕೆ. ಸುಧಾಕರ್‌ ಹಾಗೂ ಬೆಂಗಳೂರಿನ ಬೊಮ್ಮನಹಳ್ಳಿ ಬಿಜೆಪಿ ಶಾಸಕ ಸತೀಶ್‌ ರೆಡ್ಡಿ ಅವರನ್ನು ಹೈದರಾಬಾದ್‌ ಪಾಲಿಕೆ ಚುನಾವಣೆಯ ಪ್ರಭಾರಿಗಳನ್ನಾಗಿ ನೇಮಕ ಮಾಡುವ ಮೂಲಕ ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಸುಳಿವನ್ನು ಬಿಜೆಪಿ ನೀಡಿತ್ತು. ಆದರೆ ಇದೀಗ ಘಟಾನುಘಟಿಗಳನ್ನೇ ಪಾಲಿಕೆ ಚುನಾವಣೆ ಅಖಾಡಕ್ಕೆ ಇಳಿಸುವ ಮೂಲಕ ಸ್ಥಳೀಯ ಮಟ್ಟದ ಚುನಾವಣೆಗಳನ್ನೂ ಲಘುವಾಗಿ ಪರಿಗಣಿಸುವುದಿಲ್ಲ ಎಂಬ ಸಂದೇಶ ನೀಡಿದೆ.

ಏಕೆ ಈ ಪ್ರತಿಷ್ಠೆ?:

ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಅಧಿಕಾರ ನಡೆಸುತ್ತಿರುವ ತೆಲಂಗಾಣ ರಾಜ್ಯದಲ್ಲಿ ಪ್ರಬಲ ಪ್ರತಿಪಕ್ಷದ ಕೊರತೆ ಇದೆ. ಜತೆಗೆ 2023ಕ್ಕೆ ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆ ನಡೆಯಬೇಕಿದೆ. ಇತ್ತೀಚೆಗೆ ನಡೆದ ದುಬಾಕಾ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿಯು ಆಡಳಿತಾರೂಢ ಟಿಆರ್‌ಎಸ್‌ ಅಭ್ಯರ್ಥಿಯನ್ನೇ ಮಣಿಸಿರುವುದರಿಂದ ಆ ಪಕ್ಷದ ವಿಶ್ವಾಸ ಇಮ್ಮಡಿಗೊಂಡಿದೆ.

ಹೈದರಾಬಾದ್‌ ಪಾಲಿಕೆಯಲ್ಲಿ 150 ಸ್ಥಾನಗಳಿದ್ದು, ಕಳೆದ ಚುನಾವಣೆಯಲ್ಲಿ ಟಿಆರ್‌ಎಸ್‌ 99 ಹಾಗೂ ಒವೈಸಿ ಪಕ್ಷ ಎಂಐಎಂ 44 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಹೈದರಾಬಾದ್‌ ಪಾಲಿಕೆ ವ್ಯಾಪ್ತಿಯಲ್ಲಿ ಶೇ.52ರಷ್ಟುಹಿಂದುಗಳು ಹಾಗೂ ಶೇ.44ರಷ್ಟುಮುಸಲ್ಮಾನರು ಇದ್ದಾರೆ. 119 ಕ್ಷೇತ್ರಗಳನ್ನು ಹೊಂದಿರುವ ತೆಲಂಗಾಣದ ವಿಧಾನಸಭಾ ಕ್ಷೇತ್ರಗಳ ಪೈಕಿ 24 ಹೈದರಾಬಾದ್‌ ವ್ಯಾಪ್ತಿಯಲ್ಲೇ ಇವೆ. ಇದು ಒಟ್ಟು ಸ್ಥಾನದ ಶೇ.20ರಷ್ಟು. ಹಿಂದುಗಳ ಮತಗಳನ್ನು ನೆಚ್ಚಿಕೊಂಡು ಹೈದರಾಬಾದ್‌ ಗೆದ್ದುಕೊಂಡರೆ ಮುಂದೆ ವಿಧಾನಸಭೆ ಚುನಾವಣೆಯಲ್ಲೂ ಅನುಕೂಲವಾಗಬಹುದು ಎಂಬ ಲೆಕ್ಕಾಚಾರವನ್ನು ಬಿಜೆಪಿ ಹೊಂದಿದೆ.