ಕೋಲ್ಕತಾ(ನ.12): ಬಿಹಾರ ಚುನಾವಣೆಯ ಗೆಲುವಿನ ಬೆನ್ನಲ್ಲೇ, ಬಿಜೆಪಿ ತನ್ನ ಮುಂದಿನ ಗುರಿಯನ್ನು ನೆರೆಯ ಪಶ್ಚಿಮ ಬಂಗಾಳದತ್ತ ತಿರುಗಿಸಿದೆ. 2021ರ ಏಪ್ರಿಲ್‌- ಮೇನಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ತನ್ನ ಚುನಾವಣಾ ರಣತಂತ್ರಕ್ಕೆ ಅಂತಿಮ ಸ್ಪರ್ಶ ನೀಡುವ ಕೆಲಸದಲ್ಲಿ ಬಿಜೆಪಿ ತೊಡಗಿಸಿಕೊಂಡಿದೆ.

ದಶಕಗಳಿಂದಲೂ ಬಿಜೆಪಿಗೆ ಬಂಗಾಳ ಗಗನ ಕುಸುಮವಾಗಿಯೇ ಉಳಿದಿತ್ತು. ಆದರೆ ಅಮಿತ್‌ ಶಾ ನೇತೃತ್ವದಲ್ಲಿ ಕಳೆದ ಲೋಕಸಭಾ ಚುನಾವಣೆ ವೇಳೆ ರಾಜ್ಯದ 42 ಸ್ಥಾನಗಳ ಪೈಕಿ 18ರಲ್ಲಿ ಗೆಲ್ಲುವ ಮೂಲಕ ಬಿಜೆಪಿ ಐತಿಹಾಸಿಕ ಸಾಧನೆ ಮಾಡಿತ್ತು. ಜೊತೆಗೆ ಈ ವೇಳೆ ಚಲಾವಣೆಯಾದ ಮತಗಳ ಅನ್ವಯ ಸುಮಾರು 125 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಹೊಂದಿತ್ತು. ಹೀಗಾಗಿಯೇ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 294 ಸ್ಥಾನಗಳ ಪೈಕಿ 200 ಸ್ಥಾನ ಗೆಲ್ಲುವ ಗುರಿಯನ್ನು ಪಕ್ಷ ಹಾಕಿಕೊಂಡಿದೆ.

ಚುನಾವಣೆ ಗೆಲ್ಲುವ ಸಂಬಂಧ ಕಳೆದೊಂದು ವರ್ಷದಿಂದ ತಂತ್ರಗಾರಿಕೆ ರೂಪಿಸಿದ್ದ ಬಿಜೆಪಿ, ಅದಕ್ಕೀಗ ಬಿಹಾರದಲ್ಲಿ ಕಲಿತ ಪಾಠವನ್ನು ಸೇರಿಸಿಕೊಳ್ಳಲು ಮುಂದಾಗಿದೆ. ಕಾರಣ, ಇದುವರೆಗೂ ಬಿಜೆಪಿ ಮಮತಾ ಸರ್ಕಾರದ ವಿರುದ್ಧ ಭ್ರಷ್ಟಾಚಾರ, ದುರಾಡಳಿತ, ಹಿಂಸಾಚಾರ, ಕೋವಿಡ್‌ ನಿಯಂತ್ರಣದಲ್ಲಿನ ವೈಫಲ್ಯ, ಕಾನೂನು ಸುವ್ಯವಸ್ಥೆಯನ್ನೇ ದಾಳಿಯ ಅಸ್ತ್ರವಾಗಿ ಬಳಸಿಕೊಂಡು ಬಂದಿದೆ. ಜೊತೆಗೆ ಅದನ್ನೇ ಮುಂದುವರೆಸುವ ಇರಾದೆಯನ್ನು ಹೊಂದಿತ್ತು. ಆದರೆ ಬಿಹಾರ ಚುನಾವಣೆಯಲ್ಲಿ ಪ್ರಮುಖವಾಗಿ ಗಮನ ಸೆಳೆದ ನಿರುದ್ಯೋಗ, ವಲಸಿಗ ಕಾರ್ಮಿಕರ ಸಮಸ್ಯೆ ಕೂಡ ಅತ್ಯಂತ ಮಹತ್ವದ್ದು ಎಂಬುದು ನಮಗೆ ಅರಿವಾಗಿದೆ. ಹೀಗಾಗಿ ಅದನ್ನೂ ನಾವು ಪ್ರಮುಖ ಅಸ್ತ್ರವಾಗಿ ಬಳಸಿಕೊಳ್ಳಲಿದ್ದೇವೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ಹೀಗಾಗಿಯೇ ಮುಂಬರುವ ದಿನಗಳಲ್ಲಿ ಮಮತಾ ಸರ್ಕಾರದ ವಿರುದ್ಧ ಮುಗಿಬೀಳಲು ಬಿಜೆಪಿ ಸಿದ್ಧತೆ ಆರಂಭಿಸಿದೆ. ಜೊತೆಗೆ ಜನರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಜಿಲ್ಲಾ ಮಟ್ಟದಲ್ಲಿ ದೊಡ್ಡ ಮಟ್ಟದ ಹೋರಾಟ ರೂಪಿಸುವಂತೆಯೂ ರಾಜ್ಯ ನಾಯಕರಿಗೆ ದೆಹಲಿಯಿಂದ ಸೂಚನೆ ಹೋಗಿದೆ.