ಚೀನಾ ಸೈಬರ್‌ ದಾಳಿಯಿಂದ ತೆಲಂಗಾಣ ವಿದ್ಯುತ್‌ ಜಾಲ ಜಸ್ಟ್‌ ಮಿಸ್‌| ಮುಂಬೈ ರೀತಿ ತೆಲಂಗಾಣವನ್ನು ಕತ್ತಲಲ್ಲಿ ಕೆಡವಲು ಚೀನಾ ಸಂಚು

ಹೈದರಾಬಾದ್‌(ಮಾ.04): ಸೈಬರ್‌ ದಾಳಿ ನಡೆಸಿ ಭಾರತದ ವಿದ್ಯುತ್‌ ಪೂರೈಕೆ ಜಾಲವನ್ನು ಅಸ್ತವ್ಯಸ್ತಗೊಳಿಸಲು ಚೀನಾ ಸರ್ಕಾರದ ಪ್ರೋತ್ಸಾಹದೊಂದಿಗೆ ಅಲ್ಲಿನ ಹ್ಯಾಕರ್‌ಗಳು ಯತ್ನಿಸುತ್ತಿದ್ದಾರೆಂಬ ವರದಿಗಳ ಬೆನ್ನಲ್ಲೇ ತೆಲಂಗಾಣದಲ್ಲಿ ಚೀನಾದ ಹ್ಯಾಕರ್‌ಗಳ ಇಂತಹ ಪ್ರಯತ್ನ ಕೊನೆಯ ಕ್ಷಣದಲ್ಲಿ ವಿಫಲವಾಗಿರುವುದು ಬೆಳಕಿಗೆ ಬಂದಿದೆ.

ತೆಲಂಗಾಣದ ಟಿಎಸ್‌ ಜೆನ್‌ಕೋ ಮತ್ತು ಟಿಎಸ್‌ ಟ್ರಾನ್ಸ್‌ಕೋ ಎಂಬ ವಿದ್ಯುತ್‌ ಪೂರೈಕೆ ಕಂಪನಿಗಳ ಸಾಫ್ಟ್‌ವೇರ್‌ ಹ್ಯಾಕ್‌ ಮಾಡಲು ಚೀನಾದ ಹ್ಯಾಕರ್‌ಗಳು ಯತ್ನಿಸುತ್ತಿದ್ದಾರೆಂದು ಕೇಂದ್ರ ಸರ್ಕಾರಿ ಸ್ವಾಮ್ಯದ ಸಿಇಆರ್‌ಟಿ-ಇನ್‌ ಸಂಸ್ಥೆ ಸೋಮವಾರ ಸಂಜೆ ಎಚ್ಚರಿಸಿತ್ತು. ತಕ್ಷಣ ತೆಲಂಗಾಣ ಸರ್ಕಾರ ಕ್ರಮ ಕೈಗೊಂಡು, ಪವರ್‌ ಗ್ರಿಡ್‌ಗಳಲ್ಲಿ ಪ್ರಮುಖ ಕಾರ್ಯ ನಿರ್ವಹಿಸುವ ಅಧಿಕಾರಿಗಳು ತಮ್ಮ ಪಾಸ್‌ವರ್ಡ್‌ಗಳನ್ನು ಬದಲಿಸುವಂತೆ ಸೂಚಿಸಿತು. ಅಲ್ಲದೆ ಕೆಲ ಐಪಿ ಅಡ್ರೆಸ್‌ಗಳನ್ನು ಬ್ಲಾಕ್‌ ಮಾಡಿತು. ಹೀಗಾಗಿ ಕಳೆದ ವರ್ಷ ಚೀನಾದ ಹ್ಯಾಕರ್‌ಗಳ ಸೈಬರ್‌ ದಾಳಿಯಿಂದಾಗಿ ಮುಂಬೈ ಮಹಾನಗರ ಕತ್ತಲಲ್ಲಿ ಮುಳುಗಿದಂತೆ ತೆಲಂಗಾಣ ಕೂಡ ಕತ್ತಲಲ್ಲಿ ಮುಳುಗುವುದು ತಪ್ಪಿತು ಎಂದು ತಿಳಿದುಬಂದಿದೆ.

ತೆಲಂಗಾಣದ 40ಕ್ಕೂ ಹೆಚ್ಚು ಸಬ್‌ ಸ್ಟೇಶನ್‌ಗಳ ಮೇಲೆ ಚೀನಾದ ಹ್ಯಾಕರ್‌ಗಳು ಕಣ್ಣು ಹಾಕಿದ್ದರು. ಅಲ್ಲಿಂದ ಮಾಹಿತಿ ಕಳವು ಮಾಡಿ, ವಿದ್ಯುತ್‌ ವಿತರಣಾ ಜಾಲವನ್ನು ನಿಯಂತ್ರಿಸುವ ಕಂಪ್ಯೂಟರ್‌ಗಳನ್ನು ಹ್ಯಾಕ್‌ ಮಾಡುವ ಮೂಲಕ ‘ಬ್ಲ್ಯಾಕೌಟ್‌’ ಮಾಡಲು ಯತ್ನಿಸಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಚೀನಾ-ಭಾರತದ ನಡುವೆ ಕಳೆದ ವರ್ಷ ಗಡಿ ವಿವಾದ ತೀವ್ರಗೊಂಡ ನಂತರ 2020ರ ಮಧ್ಯಭಾಗದಿಂದ ಈಚೆಗೆ ಚೀನಾ ಸರ್ಕಾರ ತನ್ನ ಹ್ಯಾಕರ್‌ಗಳ ಮೂಲಕ ಭಾರತದ ವಿದ್ಯುತ್‌ ಜಾಲದ ಮೇಲೆ ಸೈಬರ್‌ ದಾಳಿ ನಡೆಸಲು ಯತ್ನಿಸುತ್ತಿದೆ ಎಂದು ಇತ್ತೀಚೆಗಷ್ಟೇ ಅಮೆರಿಕದ ಇಂಟರ್ನೆಟ್‌ ಕಂಪನಿಯೊಂದು ವರದಿ ಬಿಡುಗಡೆ ಮಾಡಿತ್ತು. ಅದರ ಬೆನ್ನಲ್ಲೇ ತೆಲಂಗಾಣದ ಘಟನೆ ಬೆಳಕಿಗೆ ಬಂದಿರುವುದು ಕುತೂಹಲ ಮೂಡಿಸಿದೆ.