ನವದೆಹಲಿ (ಮಾ. 27): ಮಧ್ಯಪ್ರದೇಶದಲ್ಲಿ ಕಮಲನಾಥ್‌ ಸರ್ಕಾರ ಕೆಡವಿ ಶಿವರಾಜ್‌ ಸಿಂಗ್‌ ಚೌಹಾಣ್‌ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ರಾಜಸ್ಥಾನದಲ್ಲಿಯೂ ಅಶೋಕ್‌ ಗೆಹ್ಲೋ​ಟ್‌ ಸರ್ಕಾರ ಕೆಡವಲು ಅಲ್ಲಿನ ಸ್ಥಳೀಯ ಬಿಜೆಪಿ ನಾಯಕರು ಉತ್ಸುಕರಾಗಿದ್ದಾರೆ. ಆದರೆ ಮೋದಿ ಮತ್ತು ಅಮಿ​ತ್‌ ಶಾ ಗ್ರೀ​ನ್‌ ಸಿಗ್ನಲ್ ಕೊಡಲು ತಯಾರಿಲ್ಲ.

ರಾಜಸ್ಥಾನ ಸರ್ಕಾರ ಕೆಡವಬೇಕೆಂದರೆ ಕನಿಷ್ಠ 35 ಕಾಂಗ್ರೆಸ್‌ ಶಾಸಕರು ರಾಜೀನಾಮೆ ಕೊಡಬೇಕು. ಒಂದೊಮ್ಮೆ ಬಿದ್ದರೆ ಮುಖ್ಯಮಂತ್ರಿ ಆಗುವವರು ಮಹಾರಾಣಿ ವಸುಂಧರಾ ರಾಜೇ ಸಿಂಧಿಯಾ. ಆದರೆ ತಮಗೆ ಕ್ಯಾರೇ ಅನ್ನದ ಮಹಾರಾಣಿಯನ್ನು ಮರಳಿ ಮುಖ್ಯಮಂತ್ರಿ ಮಾಡಲು ಅಮಿತ್‌ ಶಾಗೆ ಇಷ್ಟವಿಲ್ಲ. ತನ್ನನ್ನು ಮುಖ್ಯಮಂತ್ರಿ ಮಾಡದೇ ಹೋದರೆ ಕಾಂಗ್ರೆಸ್‌ನಿಂದ ಹೊರಬರಲು ಸಚಿನ್‌ ಪೈಲಟ್‌ ಕೂಡ ತಯಾರಿಲ್ಲ. ಹೀಗಾಗಿ ರಾಜಸ್ಥಾನದಲ್ಲಿ ಬಿಜೆಪಿ ಸರ್ಕಾರ ತರೋದು ಕಷ್ಟ, ಅತಿ ಕಷ್ಟ.

ಮಂತ್ರಿಗಳಿಗೆ ಕೊರೋ​ನಾ ಜತೆ ಮೋದಿ ಭಯ! ಗಡ್ಕರಿಗೆ ಪತ್ನಿಯಿಂದ ಗೃಹಬಂಧನ

ಸಂತೋಷ ಜಿ ಫುಲ್‌ ಆಕ್ಟಿವ್‌!

ದಿಲ್ಲಿ ಬಿಜೆಪಿ ರಾಜಕಾರಣಕ್ಕೆ ಶಿ​ಫ್ಟ್‌ ಆಗಿರುವ ಸಂಘ ಪ್ರಚಾರಕ ಸಂತೋಷ ಜಿ, ಕೊರೋನಾ ಕಾಲದಲ್ಲಿ ಕಡ್ಡಾಯವಾಗಿ ದಿಲ್ಲಿ ಕಾರ್ಯಾಲಯ ಬಿಟ್ಟು ಹೊರಗೆ ತೆರಳದೇ ಇರಲು ನಿರ್ಧರಿಸಿದ್ದಾರೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಫುಲ್  ಆಕ್ಟಿವ್‌ ಆಗಿದ್ದಾರೆ.

ಫೇಸ್‌ಬುಕ್‌ನಿಂದಲೇ ಮಂಡಲ ಸ್ತರದವರೆಗಿನ ಕಾರ್ಯಕರ್ತರು ಹೇಗೆ ಜನರಿಗೆ ಸಹಾಯ ಮಾಡಬೇಕು ಎಂದು ಹೇಳುತ್ತಿರುವ ಸಂತೋಷ್‌, ತಾಸಿಗೊಂದು ಪೋಸ್ಟ್‌ ಹಾಕಿ ‘ಮನೆಯಲ್ಲೇ ಇರಿ’ ಎಂದು ಜನರನ್ನು ಕೇಳಿಕೊಳ್ಳುತ್ತಿದ್ದಾರೆ. ಮೊದಲೆಲ್ಲಾ ದಿನಕ್ಕೆ ಒಂದು ಪೋಸ್ಟ್‌ ಹಾಕುತ್ತಿದ್ದ ಸಂತೋಷ, ಈಗ ತಾಸಿಗೆ ಕನಿಷ್ಠ ಹತ್ತು ಪೋಸ್ಟ್‌ ಹಾಕುತ್ತಿದ್ದಾರೆ.

 

-  ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

ಇಂಡಿಯಾ ಗೇಟ್ (ದೆಹಲಿಯಿಂದ ಕಂಡ ರಾಜಕಾರಣ)