ನವದೆಹಲಿ(ಫೆ.18): ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಬಹುದೊಡ್ಡ ಸುಧಾರಣೆಯೊಂದು ಸದ್ದಿಲ್ಲದೆ ಜಾರಿಗೆ ಬರುತ್ತಿದೆ. ಕಾರವಾರದಲ್ಲಿ ‘ಸಾಗರ ಥಿಯೇಟರ್‌ ಕಮಾಂಡ್‌’ ಹಾಗೂ ಉತ್ತರಪ್ರದೇಶದ ಪ್ರಯಾಗರಾಜ್‌ನಲ್ಲಿ ಏರ್‌ ಡಿಫೆನ್ಸ್‌ ಕಮಾಂಡ್‌ ಸ್ಥಾಪಿಸಲು ಸಕಲ ಸಿದ್ಧತೆಗಳು ನಡೆದಿವೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಏಪ್ರಿಲ್‌ ವೇಳೆಗೆ ಏರ್‌ ಡಿಫೆನ್ಸ್‌ ಕಮಾಂಡ್‌ ಹಾಗೂ ಮೇ ವೇಳೆಗೆ ಸಾಗರ ಥಿಯೇಟರ್‌ ಕಮಾಂಡ್‌ ಅಸ್ತಿತ್ವಕ್ಕೆ ಬರಲಿವೆ.

ಚೀನಾ ಹಾಗೂ ಪಾಕಿಸ್ತಾನದಿಂದ ಪೂರ್ವ ಹಾಗೂ ಪಶ್ಚಿಮದ ಗಡಿಯಲ್ಲಿ ಏಕಕಾಲಕ್ಕೆ ಬೆದರಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶದ ರಕ್ಷಣಾ ವ್ಯವಸ್ಥೆಯು ಏರ್‌ ಡಿಫೆನ್ಸ್‌ ಕಮಾಂಡ್‌ (ವಾಯುರಕ್ಷಣಾ ತ್ರಿವಳಿ ಕಣ್ಗಾವಲು ಪಡೆ) ಮತ್ತು ಸಾಗರ ಥಿಯೇಟರ್‌ ಕಮಾಂಡ್‌ (ಸಾಗರ ತ್ರಿವಳಿ ಕಣ್ಗಾವಲು ಪಡೆ) ಸ್ಥಾಪಿಸುವ ಮೂಲಕ ತನ್ನ ಬಲ ಪ್ರದರ್ಶನ ಮಾಡಲು ಮುಂದಾಗಿದೆ ಎಂದು ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಎರಡೂ ಕಮಾಂಡ್‌ಗಳನ್ನು ಸ್ಥಾಪಿಸುವ ನಿರ್ಧಾರ ಅಂತಿಮವಾಗಿದೆ. ಇವುಗಳಿಗೆ ಸಂಬಂಧಪಟ್ಟಸಿದ್ಧತೆಗಳು ಭರದಿಂದ ನಡೆಯುತ್ತಿವೆ. ಕಮಾಂಡ್‌ಗಳ ಸ್ವರೂಪ, ನಿಯಂತ್ರಣ ಹಾಗೂ ಹಣಕಾಸು ಅಗತ್ಯಗಳ ಬಗ್ಗೆ ಅಂತಿಮ ಹಂತದ ಚರ್ಚೆ ನಡೆಯುತ್ತಿದೆ ಎಂದು ಸೇನಾಪಡೆಯ ಉನ್ನತ ಮೂಲಗಳು ತಿಳಿಸಿರುವುದಾಗಿ ಕೆಲ ಮಾಧ್ಯಮಗಳು ವರದಿ ಮಾಡಿವೆ.

ಏರ್‌ ಡಿಫೆನ್ಸ್‌ ಕಮಾಂಡ್‌ಗೆ ವಾಯುಪಡೆಯ 3 ಸ್ಟಾರ್‌ ರಾರ‍ಯಂಕಿಂಗ್‌ನ ಅಧಿಕಾರಿಯೊಬ್ಬರು ಕಮಾಂಡರ್‌ ಇನ್‌ ಚೀಫ್‌ ಆಗಿರುತ್ತಾರೆ. ಸಾಗರ ಥಿಯೇಟರ್‌ ಕಮಾಂಡ್‌ಗೆ ನೌಕಾಪಡೆಯ 3 ಸ್ಟಾರ್‌ ರಾರ‍ಯಂಕಿಂಗ್‌ನ ಅಧಿಕಾರಿಯೊಬ್ಬರು ಕಮಾಂಡರ್‌ ಇನ್‌ ಚೀಫ್‌ ಆಗಿರುತ್ತಾರೆ. ಇವರಿಬ್ಬರೂ ನೇರವಾಗಿ ಸೇನಾಪಡೆಗಳ ಮಹಾದಂಡನಾಯಕ (ಸಿಡಿಎಸ್‌)ರಿಗೆ ವರದಿ ಮಾಡಿಕೊಳ್ಳುತ್ತಾರೆ ಎಂದು ತಿಳಿದುಬಂದಿದೆ.

ಏನಿದು ಏರ್‌ ಡಿಫೆನ್ಸ್‌ ಕಮಾಂಡ್‌?

ಆಗಸದ ಮೂಲಕ ದೇಶಕ್ಕೆ ಎದುರಾಗುವ ಎಲ್ಲಾ ಅಪಾಯಗಳನ್ನು ತಡೆಯುವ ಹಾಗೂ ಎದುರಿಸುವ ಹೊಣೆಯುಳ್ಳ ರಕ್ಷಣಾ ವಿಭಾಗವಿದು. ಭೂಸೇನೆ, ವಾಯುಪಡೆ ಹಾಗೂ ನೌಕಾಪಡೆ ಈ ಮೂರರಿಂದಲೂ ಕೆಲ ರಕ್ಷಣಾ ವ್ಯವಸ್ಥೆಗಳನ್ನು ಅಳವಡಿಸಿಕೊಂಡು ಇದು ಕಾರ‍್ಯನಿರ್ವಹಿಸುತ್ತದೆ.

ಏಕೆ ಇದು ಮುಖ್ಯ?

ಸಾಮಾನ್ಯವಾಗಿ ಭಾರತಕ್ಕೆ ಬೇರೆ ದೇಶದ ವಾಯುಪಡೆಯಿಂದ ಅಪಾಯ ಎದುರಾದಾಗ ನಮ್ಮ ವಾಯುಪಡೆ, ಬೇರೆ ದೇಶದ ಭೂಸೇನೆಯಿಂದ ಅಪಾಯ ಎದುರಾದಾಗ ನಮ್ಮ ಭೂಸೇನೆ ಹಾಗೂ ಬೇರೆ ದೇಶದ ನೌಕಾಪಡೆಯಿಂದ ಅಪಾಯ ಎದುರಾದಾಗ ನಮ್ಮ ನೌಕಾಪಡೆಗಳು ರಕ್ಷಣೆಗೆ ಇಳಿಯುತ್ತವೆ. ಆದರೆ, ಮೂರೂ ರಕ್ಷಣಾ ಪಡೆಗಳು ಜಂಟಿಯಾಗಿ ತಮ್ಮ ಶಕ್ತಿಯನ್ನು ಬಳಸಿಕೊಂಡು ಶತ್ರುವಿನ ಮೇಲೆ ಮುಗಿಬೀಳಲು ಇಂತಹ ಕಮಾಂಡ್‌ಗಳಿಂದ ಸಾಧ್ಯವಾಗುತ್ತದೆ. ದೇಶದಲ್ಲಿ ಇಲ್ಲಿಯವರೆಗೆ ಈ ಮಾದರಿಯ ವಿಭಾಗವಿಲ್ಲ.

ಸಾಗರ ಥಿಯೇಟರ್‌ ಕಮಾಂಡ್‌ ಏನಿದು?

ಸಮುದ್ರದ ಮೂಲಕ ದೇಶಕ್ಕೆ ಎದುರಾಗಬಹುದಾದ ಎಲ್ಲಾ ಅಪಾಯಗಳನ್ನು ತಡೆಯುವ ಹಾಗೂ ಎದುರಿಸುವ ಹೊಣೆಯುಳ್ಳ ರಕ್ಷಣಾ ವಿಭಾಗ. ಭೂಸೇನೆ, ವಾಯುಪಡೆ ಮತ್ತು ನೌಕಾಪಡೆ ಈ ಮೂರರಿಂದಲೂ ಕೆಲ ರಕ್ಷಣಾ ವ್ಯವಸ್ಥೆಗಳನ್ನು ಅಳವಡಿಸಿಕೊಂಡು ಇದು ಕಾರ‍್ಯನಿರ್ವಹಿಸುತ್ತದೆ.