ಕರ್ನಾಟಕದಲ್ಲಿ ನಂದಿನಿ ಹಾಲಿನ ದರ ಲೀಟರ್ಗೆ ಕನಿಷ್ಠ 8 ರು. ಹೆಚ್ಚಳವಾದ ಬೆನ್ನಲ್ಲೇ ಇದೀಗ ಅಮುಲ್, ಮದರ್ ಡೈರಿ ಕೂಡ ಗ್ರಾಹಕರಿಗೆ ಬೆಲೆಯೇರಿಕೆ ಶಾಕ್ ನೀಡಿದೆ. ಗುರುವಾರದಿಂದಲೇ ಲೀಟರ್ಗೆ 2 ರಿಂದ 4 ರು.ಗಳು ಹೆಚ್ಚಳವಾಗಲಿದೆ.
ನವದೆಹಲಿ: ಇತ್ತೀಚೆಗಷ್ಟೆ ಜನಸಾಮಾನ್ಯರ ದೈನಂದಿನ ಖರ್ಚಿಗೆ ಕರ್ನಾಟಕದ ಕೆಎಂಎಫ್ ಮತ್ತೊಮ್ಮೆ ದೊಡ್ಡ ಹೊಡೆತ ಕೊಟ್ಟಿತ್ತು. ನಂದಿನಿ ಹಾಲಿನ ಬೆಲೆಯನ್ನು ದುಪ್ಪಟ್ಟು ಹೆಚ್ಚಿಸಿತ್ತು. ಇದೀಗ ಇದೇ ಹಾದಿಯಲ್ಲಿ ದೇಶದ ಪ್ರಮುಖ ಡೈರಿ ಸಂಸ್ಥೆಗಳಾದ ಗುಜರಾತ್ ನ ಅಮುಲ್ ಮತ್ತು ಭಾರತ ಸರ್ಕಾರದ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯ ಅಂಗ ಸಂಸ್ಥೆಯಾಗಿರುವ ಮದರ್ ಡೈರಿ ತಮ್ಮ ಹಾಲಿನ ದರವನ್ನು ಪ್ರತಿ ಲೀಟರ್ಗೆ ₹2ರಿಂದ ₹4ರವರೆಗೆ ಏರಿಸಿದೆ. ಈ ಪರಿಷ್ಕೃತ ದರಗಳು ಗುರುವಾರ ನವೆಂಬರ್ 12, 2026ರಿಂದಲೇ ದೇಶಾದ್ಯಂತ ಜಾರಿಗೆ ಬರಲಿವೆ. ಕಳೆದ ಮೇ ತಿಂಗಳಲ್ಲಿ ಈ ಸಂಸ್ಥೆಗಳು ಬೆಲೆ ಏರಿಕೆ ಮಾಡಿತ್ತು. ಇದೀಗ ಕೇವಲ ಆರು ತಿಂಗಳ ಅಂತರದಲ್ಲಿ ಮತ್ತೊಮ್ಮೆ ದರ ಏರಿಕೆ ಮಾಡುವ ಮೂಲಕ ಗ್ರಾಹಕರಿಗೆ ಶಾಕ್ ಕೊಟ್ಟಿದೆ.
ಅಮುಲ್ ಹಾಲಿನ ದರ ಎಷ್ಟಾಗಿದೆ?
ಅಮುಲ್ ಬ್ರಾಂಡ್ ಅಡಿಯಲ್ಲಿ ಹಾಲು ಮತ್ತು ಡೈರಿ ಉತ್ಪನ್ನಗಳನ್ನು ಮಾರಾಟ ಮಾಡುವ 'ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟ' (GCMMF), ತನ್ನ ತಾಜಾ ಪೌಚ್ ಹಾಲಿನ ವಿವಿಧ ರೂಪಾಂತರಗಳ ಬೆಲೆಯಲ್ಲಿ ಶೇ. 4ರಿಂದ 5ರಷ್ಟು ಹೆಚ್ಚಳ ಮಾಡಿರುವುದಾಗಿ ಬುಧವಾರ ಅಧಿಕೃತವಾಗಿ ಘೋಷಿಸಿದೆ. ಅತಿ ಹೆಚ್ಚು ಮಾರಾಟವಾಗುವ, ಶೇ. 3ರಷ್ಟು ಕೊಬ್ಬಿನಾಂಶ ಹೊಂದಿರುವ 'ಅಮುಲ್ ತಾಜಾ' (ಟೋನ್ಡ್ ಹಾಲು) ದರವನ್ನು ಪ್ರತಿ ಲೀಟರ್ಗೆ 2 ರೂ ಹೆಚ್ಚಿಸಲಾಗಿದೆ. ಶೇ. 6ರಷ್ಟು ಕೊಬ್ಬಿನಾಂಶವಿರುವ 'ಅಮುಲ್ ಗೋಲ್ಡ್' ಹಾಲಿನ ದರದಲ್ಲಿ ಪ್ರತಿ ಲೀಟರ್ಗೆ 4 ರೂ ಏರಿಕೆ ಮಾಡಲಾಗಿದೆ.
ದರ ಏರಿಕೆಗೆ ಅಮುಲ್ ನೀಡಿದ ಕಾರಣವಿದು
ಹಾಲು ಉತ್ಪಾದನೆ ಮತ್ತು ಸಂಸ್ಕರಣಾ ವೆಚ್ಚದಲ್ಲಿ ತೀವ್ರ ಏರಿಕೆಯಾಗಿರುವುದೇ ಈ ನಿರ್ಧಾರಕ್ಕೆ ಪ್ರಮುಖ ಕಾರಣ ಎಂದು ಒಕ್ಕೂಟ ಸ್ಪಷ್ಟಪಡಿಸಿದೆ. ಕಳೆದ ಒಂದು ವರ್ಷದಲ್ಲಿ ಹಸಿರು ಮತ್ತು ಒಣ ಮೇವು, ಹಿಂಡಿ , ಮೆಕ್ಕೆಜೋಳ ಹಾಗೂ ಮೊಲಾಸಸ್ನಂತಹ ಜಾನುವಾರು ಆಹಾರದ ಬೆಲೆ ಗಗನಕ್ಕೇರಿದೆ. ಇದರ ಜೊತೆಗೆ ಪ್ಯಾಕೇಜಿಂಗ್ ಫಿಲ್ಮ್ ಮತ್ತು ಇಂಧನ ವೆಚ್ಚವೂ ದುಬಾರಿಯಾಗಿದೆ ಎಂದಿದೆ.
ಗುಜರಾತ್ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಮಳೆಯ ಕೊರತೆ ಹಾಗೂ ಅಸಮಾನ ಮಳೆಯಿಂದಾಗಿ ಹೈನುಗಾರಿಕೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಹಾಲು ಉತ್ಪಾದಕ ರೈತರಿಗೆ ಉತ್ತಮ ಬೆಂಬಲ ಬೆಲೆ ನೀಡುವುದು ಅನಿವಾರ್ಯವಾಗಿದೆ. ಗ್ರಾಹಕರಿಂದ ಸಂಗ್ರಹವಾಗುವ ಪ್ರತಿ ರೂಪಾಯಿಯಲ್ಲಿ ಸುಮಾರು 80 ಪೈಸೆಯಷ್ಟು (ಶೇ.80) ಹಣವನ್ನು ತನ್ನ 36 ಲಕ್ಷ ಹಾಲು ಉತ್ಪಾದಕರಿಗೆ ನೇರವಾಗಿ ತಲುಪಿಸಲಾಗುತ್ತದೆ. ಈ ಹೊಸ ದರ ಏರಿಕೆಯ ಸಿಂಹಪಾಲು ಕೂಡ ರೈತರಿಗೇ ಸೇರಲಿದೆ ಎಂದು GCMMF ತಿಳಿಸಿದೆ.
ಮದರ್ ಡೈರಿ ಹಾಲಿನ ಪರಿಷ್ಕೃತ ದರ ಪಟ್ಟಿ
ಮತ್ತೊಂದೆಡೆ, ದೆಹಲಿ-ಎನ್ಸಿಆರ್ ಭಾಗದ ಅತಿದೊಡ್ಡ ಹಾಲು ಪೂರೈಕೆದಾರ ಸಂಸ್ಥೆಯಾದ ಮದರ್ ಡೈರಿ ಕೂಡ ನವೆಂಬರ್ 12ರಿಂದಲೇ ಜಾರಿಗೆ ಬರುವಂತೆ ದ್ರವ ಹಾಲಿನ ದರವನ್ನು ಲೀಟರ್ಗೆ ₹2ರಿಂದ ₹4ರವರೆಗೆ ಹೆಚ್ಚಿಸಿದೆ. ಈ ಹಿಂದೆ ಮೇ 14, 2026ರಂದು ಬೆಲೆ ಪರಿಷ್ಕರಿಸಲಾಗಿತ್ತು. ಹಾಲು ಖರೀದಿ ವೆಚ್ಚ ಹೆಚ್ಚಾಗಿರುವುದರಿಂದ, ಆ ಆರ್ಥಿಕ ಹೊರೆಯನ್ನು ಅನಿವಾರ್ಯವಾಗಿ ಗ್ರಾಹಕರಿಗೆ ವರ್ಗಾಯಿಸಲಾಗುತ್ತಿದೆ ಎಂದು ಕಂಪನಿ ಹೇಳಿದೆ.
ಮದರ್ ಡೈರಿಯ ಪರಿಷ್ಕೃತ ದರಗಳು ಈ ಕೆಳಗಿನಂತಿವೆ
- ಟೋನ್ಡ್ ಹಾಲು : ₹58 ರಿಂದ ₹60ಕ್ಕೆ ಏರಿಕೆ
- ಪೌಚ್ ಟೋನ್ಡ್ ಹಾಲು: ₹60 ರಿಂದ ₹62ಕ್ಕೆ ಏರಿಕೆ
- ಫುಲ್ ಕ್ರೀಮ್ ಪೌಚ್ ಹಾಲು: ₹72 ರಿಂದ ₹76ಕ್ಕೆ ಏರಿಕೆ
- ಡಬಲ್ ಟೋನ್ಡ್ ಹಾಲು: ₹54 ರಿಂದ ₹56ಕ್ಕೆ ಏರಿಕೆ
- ಹಸುವಿನ ಹಾಲು: ₹62 ರಿಂದ ₹65ಕ್ಕೆ ಹೆಚ್ಚಳ
ಮದರ್ ಡೈರಿ ಸಂಸ್ಥೆಯು ತನ್ನ ಮಳಿಗೆಗಳು, ಚಿಲ್ಲರೆ ವ್ಯಾಪಾರಿಗಳು ಹಾಗೂ ಇ-ಕಾಮರ್ಸ್ ವೇದಿಕೆಗಳ ಮೂಲಕ ದೆಹಲಿ-ಎನ್ಸಿಆರ್ನಲ್ಲಿ ನಿತ್ಯ ಸುಮಾರು 35 ಲಕ್ಷ ಲೀಟರ್ ಹಾಗೂ ದೇಶಾದ್ಯಂತ ಒಟ್ಟು 50 ಲಕ್ಷ ಲೀಟರ್ಗೂ ಅಧಿಕ ಹಾಲನ್ನು ಮಾರಾಟ ಮಾಡುತ್ತದೆ. ತಾನು ಗಳಿಸುವ ಆದಾಯದ ಶೇ. 75ರಿಂದ 80ರಷ್ಟು ಪಾಲನ್ನು ರೈತರಿಗೆ ನೀಡುವುದಾಗಿ ಸಂಸ್ಥೆ ಹೇಳಿಕೊಂಡಿದೆ.
ಅಮೂಲ್ ಬೆಲೆ ಹೆಚ್ಚಳ ಇಂತಿದೆ
- ಅಮುಲ್ ತಾಜಾ -ಟೋನ್ಡ್ ಹಾಲು ₹62 ಕ್ಕೆ ಏರಿಕೆಯಾಗಿದೆ
- ಅಮುಲ್ ಗೋಲ್ಡ್ -ಕೆನೆ ಹಾಲು ₹80 ಕ್ಕೆ ತಲುಪಿದೆ.
- ಅಮುಲ್ ಶಕ್ತಿ, ಅಮುಲ್ ಟೀ ಸ್ಪೆಷಲ್ ಪ್ರತಿ ಲೀಟರ್ಗೆ ಸರಿಸುಮಾರು₹2 ರಿಂದ ₹4 ರೂ ಏರಿದೆ.
ಜನಸಾಮಾನ್ಯರ ಜೇಬಿಗೆ ಕತ್ತರಿ:
ಹಾಲು ಪ್ರತಿಯೊಂದು ಕುಟುಂಬದ ಅತ್ಯಗತ್ಯ ಆಹಾರ ಪದಾರ್ಥವಾಗಿದೆ. ಎರಡು ಪ್ರಮುಖ ಬ್ರಾಂಡ್ಗಳು ಏಕಕಾಲದಲ್ಲಿ ದರ ಏರಿಸಿರುವುದರಿಂದ ಮಧ್ಯಮ ಮತ್ತು ಬಡ ವರ್ಗದ ಕುಟುಂಬಗಳ ಮಾಸಿಕ ಖರ್ಚು ಹೆಚ್ಚಾಗಲಿದೆ. ಅಲ್ಲದೆ, ಹಾಲಿನ ದರ ಏರಿಕೆಯು ಮುಂದಿನ ದಿನಗಳಲ್ಲಿ ಮೊಸರು, ತುಪ್ಪ, ಪನೀರ್, ಸಿಹಿತಿಂಡಿಗಳು ಹಾಗೂ ಹೋಟೆಲ್ ತಿನಿಸುಗಳ ಬೆಲೆ ಹೆಚ್ಚಳಕ್ಕೂ ದಾರಿ ಮಾಡಿಕೊಡಲಿದ್ದು, ಒಟ್ಟಾರೆ ಆಹಾರ ಹಣದುಬ್ಬರವನ್ನು ಮತ್ತಷ್ಟು ಏರಿಸುವ ಆತಂಕ ಎದುರಾಗಿದೆ.
ನ.1ರಿಂದ ಕೆಎಂಎಫ್ ಹಾಲಿನ ದರವನ್ನು 8ರಿಂದ 12 ರು.ನಷ್ಟು ಮತ್ತು ಮೊಸರಿನ ದರವನ್ನು ಬರೋಬ್ಬರಿ 14 ರು. ಏರಿಕೆ ಮಾಡಿತ್ತು. ಇದರ ಬೆನ್ನಲ್ಲೇ ನಂದಿನಿ ಪೈಪೋಟಿ ಎಂಬಂತೆ ಅಮೂಲ್ ಮೊಸರು ದರ 10 ರು. ಇಳಿಕೆ ಮಾಡಿತ್ತು
ನಂದಿನಿ ಹಾಲಿನ ಈಗಿನ ದರ ಲೀಟರ್ ಇಂತಿದೆ
- ಟೋನ್ಡ್ (ಬ್ಲೂ) ಹಾಲು 54 ರೂ
- ಹೋಮೋಜಿನೈಸ್ಡ್ ಟೋನ್ಡ್ ಹಾಲು 56 ರೂ
- ಹೋಮೋಜಿನೈಸ್ಡ್ ಹಸುವಿನ ಹಾಲು 58 ರೂ
- ಸ್ಪೆಷಲ್ ಟೋನ್ಡ್ ಹಾಲು 64 ರೂ
- ಶುಭಂ ಹಾಲು 64 ರೂ
- ಹೋಮೋಜಿನೈಸ್ಡ್ ಶುಭಂ ಹಾಲು 65 ರೂ
- ಮೊಸರು 500 ಗ್ರಾಂ ಪೊಟ್ಟಣ 34 ರೂ
- ಮೊಸರು 1 ಕೆಜಿ ಪೊಟ್ಟಣ 68 ರೂ














