ಕರ್ನಾಟಕ ಗೆಲುವಿನ ಬಳಿಕ ಮಧ್ಯಪ್ರದೇಶದಲ್ಲೂ ಕಾಂಗ್ರೆಸ್ ಪಂಚ ಗ್ಯಾರಂಟಿ ಪಾಲಿಟಿಕ್ಸ್!
ವಿಧಾನಸಭಾ ಚುನಾವಣೆಯಲ್ಲಿ ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಅವರು ಪಕ್ಷದ ಪೂರ್ವಭಾವಿ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ರಾಜ್ಯಸಭಾ ಸಂಸದ ದಿಗ್ವಿಜಯ ಸಿಂಗ್ ಹೇಳಿದ್ದಾರೆ.
ಭೋಪಾಲ್ (ಮೇ.22): ಕರ್ನಾಟಕದ ಜನತೆಗೆ ಐದು ಗ್ಯಾರಂಟಿಯನ್ನು ಘೋಷಣೆ ಮಾಡುವ ಮೂಲಕ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಿ ಅಧಿಕಾರದ ಗದ್ದುಗೆ ಹಿಡಿದ್ದ ಕಾಂಗ್ರೆಸ್ ಈಗ ಅದೇ ಫಾರ್ಮುಲಾವನ್ನು ಮಧ್ಯಪ್ರದೇಶದಲ್ಲಿ ಜಾರಿ ಮಾಡಲು ಮುಂದಾಗಿದೆ. ಈ ವರ್ಷ ಮಧ್ಯಪ್ರದೇಶ ವಿಧಾನಸಭೆಗೂ ಚುನಾವಣೆ ನಡೆಯಲಿದ್ದು, ಅಧಿಕಾರದ ಗದ್ದುಗೆ ಏರಲೇಬೇಕಾದ ಗುರಿಯಲ್ಲಿದೆ. ಸೋಮವಾರ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ. ಇದರಲ್ಲಿ 500 ರೂಪಾಯಿಗೆ ಗ್ಯಾಸ್ ಸಿಲಿಂಡರ್, ಪ್ರತಿ ತಿಂಗಳು ರಾಜ್ಯದ ಮಹಿಳೆಯರಿಗೆ 1500 ರೂಪಾಯಿ ನೀಡುವ ಭರವಸೆಗಳನ್ನು ನೀಡಲಾಗಿದೆ. ಅದರೊಂದಿಗೆ 100 ಯುನಿಟ್‌ಗಳ ಉಚಿತ ವಿದ್ಯುತ್, ರೈತರ ಸಾಲ ಮನ್ನಾ, ಹಳೆ ಪಿಂಚಣಿ ಯೋಜನೆಯ ಜಾರಿಯಂಥ ಗ್ಯಾರಂಟಿಗಳನ್ನು ನೀಡಲಾಗಿದೆ. ಹಿರಿಯ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಜೂನ್ 12 ರಂದು ನರ್ಮದಾ ನದಿಗೆ ಪ್ರಾರ್ಥನೆ ಸಲ್ಲಿಸಿದ ನಂತರ ಜಬಲ್ಪುರದಲ್ಲಿ ರೋಡ್ ಶೋ ಮತ್ತು ಸಮಾವೇಶದೊಂದಿಗೆ ಮಧ್ಯಪ್ರದೇಶದಲ್ಲಿ ಪಕ್ಷದ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಲಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಮತ್ತೊಬ್ಬ ಕಾಂಗ್ರೆಸ್ ನಾಯಕ ನೀಡಿರುವ ಮಾಹಿತಿಯ ಪ್ರಕಾರ ಪ್ರಿಯಾಂಕಾ ಅವರು ತಮ್ಮ ಸಹೋದರ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯಿಂದ ಹೊರಗುಳಿದಿರುವ ಕಾರಣ ಮಹಾಕೋಶಲ್ ಅನ್ನು ಆಯ್ಕೆ ಮಾಡಿದ್ದಾರೆ ಎಂದು ಹೇಳಿದರು, ಇದು ರಾಜ್ಯದ ಮಾಲ್ವಾ ಮತ್ತು ಮಧ್ಯ ಭಾರತದ ಪ್ರದೇಶಗಳಲ್ಲಿ ಸಂಚರಿಸಿತು ಮತ್ತು ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು.
2023 ರ ವಿಧಾನಸಭಾ ಚುನಾವಣೆಯಲ್ಲಿ ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ ಎಂದು ರಾಜ್ಯಸಭಾ ಸಂಸದ ಮತ್ತು ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಹೇಳಿದ್ದಾರೆ.
"ನಾವು ಮಧ್ಯಪ್ರದೇಶದಲ್ಲಿ ಕಮಲ್ ನಾಥ್ ಅವರ ನೇತೃತ್ವದಲ್ಲಿ ಚುನಾವಣೆಯನ್ನು ಎದುರಿಸುತ್ತೇವೆ. ಹಾಗಾಗಿ, ಅವರು ಸಿಎಂ ಮುಖವಾಗಿರಲಿದ್ದಾರೆ" ಎಂದು ಸಿಂಗ್ ಬುದ್ನಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು. 2018 ರ ಚುನಾವಣೆಯಲ್ಲಿ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಜ್ಯೋತಿರಾಧಿತ್ಯ ಸಿಂಧಿಯಾ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಕಾಂಗ್ರೆಸ್ ನಾಯಕರು ಬಂಡಾಯವೆದ್ದಿದ್ದರಿಂದ ಸರ್ಕಾರವು 2020ರ ಮಾರ್ಚ್‌ನಲ್ಲಿ ಪತನವಾಗಿತ್ತು. ಇದರಿಂದಾಗಿ ಭಾರತೀಯ ಜನತಾ ಪಕ್ಷ ಇಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಾಗಿತ್ತು.
Sunil Kanugolu: ಮಧ್ಯಪ್ರದೇಶ ಟಾಸ್ಕ್‌ಗೆ ರೆಡಿಯಾದ ಕಾಂಗ್ರೆಸ್ ಮಾಸ್ಟರ್‌ಮೈಂಡ್ ಸುನೀಲ್ ಕನುಗೋಲು!
ಸುನೀಲ್ ಕನಗೋಳು ಟೀಮ್‌ನ ಉಸ್ತುವಾರಿ: ಕರ್ನಾಟಕ ಚುನಾವಣೆಯಲ್ಲಿ ಮಾಸ್ಟರ್‌ಮೈಂಡ್ ಆಗಿ ಕೆಲಸ ಮಾಡಿದ್ದ ಸುನೀಲ್ ಕನಗೋಳು ಈಗ ಮಧ್ಯಪ್ರದೇಶ ಚುನಾವಣೆಯಲ್ಲೂ ಕಾಂಗ್ರೆಸ್‌ನ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ. ಈಗಾಗಲೇ ಮಧ್ಯಪ್ರದೇಶಕ್ಕೆ ಸುನೀಲ್ ಕನಗೋಳು ಶಿಫ್ಟ್ ಆಗಿದ್ದು, ಚುನಾವಣೆ ಘೋಷಣೆ ಆಗುವ ಮುನ್ನವೇ ಕಾಂಗ್ರೆಸ್‌ನ ಗ್ಯಾರಂಟಿಗಳು ಘೋಷಣೆಯಾಗಿವೆ.