ಮುಂಬೈ(ಮ.11): ನಮಾಜಿನ ಸಮಯ ಸೂಚಿಸಲು ಮಸೀದಿಯಲ್ಲಿನ ಲೌಡ್‌ ಸ್ಪೀಕರ್‌ ಮೂಲಕ ಮಾಡುವ ಅಜಾನ್‌ನಿಂದ ಇತರರಿಗೆ ತೊಂದರೆಯಾಗುತ್ತಿದ್ದು, ಆದ್ದರಿಂದ ಅದನ್ನು ನಿಲ್ಲಿಸಬೇಕು ಎಂದು ಲೇಖಕ ಜಾವೇದ್‌ ಅಖ್ತರ್‌ ಹೇಳಿಕೆ ನೀಡಿದ್ದಾರೆ. 

ಭಾರತದಲ್ಲಿ 50 ವರ್ಷ ಲೌಡ್‌ ಸ್ಪೀಕರ್‌ ಅಜಾನ್‌ ಹರಾಂ (ನಿಷಿದ್ಧ) ಆಗಿತ್ತು. ಬಳಿಕ ಅದು ಹಲಾಲ್‌ (ಸಮ್ಮತ) ಆಯ್ತು. ಇದರಿಂದ ಇತರರಿಗೆ ತೊಂದರೆಯಾಗುತ್ತಿದೆ. ಅದನ್ನು ನಿಲ್ಲಿಸಬೇಕು’ ಎಂದಿದ್ದಾರೆ. ಮಂದಿರ ಆಗಲಿ ಮಸೀದಿಯೇ ಆಗಲಿ, ಹಬ್ಬಗಳಲ್ಲಿ ಸ್ಪೀಕರ್‌ ಬಳಸಲಿ. ಆದರೆ ಪ್ರತಿದಿನ ಬಳಸುವುದು ಸಲ್ಲ. ಸಾವಿರಾರು ವರ್ಷ ಸ್ಪೀಕರ್‌ ಇಲ್ಲದೇ ಅಜಾನ್‌ ಕೊಡಲಾಗಿದೆ. ಅಜಾನ್‌ ವಿಶ್ವಾಸದ ಭಾಗ. ತೋರ್ಪಡಿಕೆಯ ವಸ್ತು ಅಲ್ಲ ಎಂದಿದ್ದಾರೆ.

ಆದರೀಗ ಜಾವೇದ್ ಅಖ್ತರ್ ಟ್ವೀಟ್‌ಗೆ AIMIM ನಾಯಕ ಆಸೀಂ ವಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಜಾವೇದ್ ಮುಸ್ಲಿಂ ಅಲ್ಲ, ಅವರು RSS ಸಂಘಟನೆ ಪ್ರಭಾವಕ್ಕೊಳಪಟ್ಟಿದ್ದಾರೆಂದು ಟೀಕಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಆಸೀಂ 'ಗೆಳೆಯರೇ ಸಾಹೇಬರೊಬ್ಬರು ಇಂದು ಮತ್ತೊಮ್ಮೆ ಟ್ವೀಟ್ ಮಾಡಿ ಲೌಡ್ ಸ್ಪೀಕರ್‌ ಮೂಲಕ ಆಜಾನ್ ಆಡುವುದನ್ನು ವಿರೋಧಿಸಿದ್ದಾರೆ. ಆದರೆ ಅವರೊಬ್ಬ ಮುಸಲ್ಮಾನ ಎನ್ನುವುದೇ ದುಃಖದ ವಿಚಾರ'  ಎಂದಿದ್ದಾರೆ. ಅಲ್ಲದೇ ಈ ಟ್ವಿಟ್‌ನಲ್ಲಿ ವಿಡಿಯೋ ಒಂದನ್ನು ಹಾಕಿದ್ದು, ಇದರಲ್ಲಿ ಜಾವೇದ್ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಭಾವಕ್ಕೊಳಪಟ್ಟಿದ್ದಾರೆಂದು ದೂರಿದ್ದಾರೆ.

ಇನ್ನು ಜಾವೇದ್‌ರವರ ಆಜಾನ್‌ನಿಂದ ತೊಂದರೆಯಾವಗುತ್ತದೆ ಎನ್ನುವ ಟ್ವೀಟ್‌ ವಿರೋಧಿಸಿದ್ದು, ಆಸೀಂ ಮಾತ್ರವಲ್ಲ. ಬದಲಾಗಿ ಆಸೀಂ ಹಾಕಿರುವ ಟ್ವೀಟ್‌ಗೆ ಅನೇಕ ಮಂದಿ ಕಮೆಂಟ್ ಮಾಡಿ ಜಾವೇದ್ ಅಖ್ತರ್ ಮಾತುಗಳನ್ನು ಖಂಡಿಸಿದ್ದಾರೆ.