* ಸಿಖ್ಖರ ನೋಯಿಸುವ ಹೇಳಿಕೆ ಟ್ವೀಟ್ ಮಾಡಿ ಪಕ್ಷಕ್ಕೆ ಹಾನಿ* ದೊಡ್ಡ ಮರ ಬಿದ್ದಾಗ..: ರಾಜೀವ್ ಸ್ಮರಣೆ ವೇಳೆ ಅಧೀರ್ ಎಡವಟ್ಟು
ನವದೆಹಲಿ(ಮೇ.22): ತನ್ನ ಮೇಲೆ ಮುನಿಸಿಕೊಂಡಿರುವ ಸಿಖ್ಖರನ್ನು ಸಮಾಧಾನಪಡಿಸಲು ದಶಕಗಳಿಂದ ಕಾಂಗ್ರೆಸ್ ಪಕ್ಷ ಹೆಣಗಾಡುತ್ತಿರುವಾಗ ಆ ಪಕ್ಷದ ಲೋಕಸಭೆಯ ನಾಯಕ ಅಧೀರ್ ರಂಜನ್ ಚೌಧರಿ ದೊಡ್ಡ ಎಡವಟ್ಟು ಮಾಡಿಕೊಂಡಿದ್ದಾರೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪುಣ್ಯಸ್ಮರಣೆಯ ದಿನವಾದ ಶನಿವಾರ ಶ್ರದ್ಧಾಂಜಲಿ ಸಲ್ಲಿಸಲು ಮಾಡಿದ ಟ್ವೀಟ್‌ನಲ್ಲಿ ಅಧೀರ್ ರಂಜನ್, ರಾಜೀವ್ ಗಾಂಧಿಯ ‘ದೊಡ್ಡ ಮರ ಬಿದ್ದಾಗ ಭೂಮಿ ಕೊಂಚ ಅದುರುತ್ತದೆ’ ಎಂಬ ಕುಪ್ರಸಿದ್ಧ ಹೇಳಿಕೆಯನ್ನು ಬರೆದು, ನಂತರ ಡಿಲೀಟ್ ಮಾಡಿದ್ದಾರೆ. ಅದು ವಿವಾದಕ್ಕೆ ಕಾರಣವಾಗಿದ್ದು, ಕಾಂಗ್ರೆಸ್ ಪಕ್ಷ ಸೆಲ್‌್ಫ ಗೋಲ್ ಹೊಡೆದಿದೆ ಎಂಬ ಟೀಕೆಗಳು ಕೇಳಿಬಂದಿವೆ.
1984ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯನ್ನು ಸಿಖ್‌್ಖ ಅಂಗರಕ್ಷಕರು ಹತ್ಯೆಗೈದ ಮೇಲೆ ದೇಶದಲ್ಲಿ ನಡೆದ ಸಿಖ್ಖರ ಹತ್ಯಾಕಾಂಡದಲ್ಲಿ 2000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಆ ಹತ್ಯಾಕಾಂಡಕ್ಕೆ ಕಾಂಗ್ರೆಸ್ ಕಾರಣ ಎಂಬ ಆಕ್ರೋಶ ಸಿಖ್ಖರಲ್ಲಿದೆ. ಆ ವೇಳೆ ಗಲಭೆಯನ್ನು ಸಮರ್ಥಿಸಿಕೊಳ್ಳುವಂತೆ ಹೇಳಿಕೆ ನೀಡಿದ್ದ ರಾಜೀವ್ ಗಾಂಧಿ, ‘ದೊಡ್ಡ ಮರವೊಂದು ಬಿದ್ದಾಗ ಭೂಮಿ ಕೊಂಚ ಅದುರುವುದು ಸಹಜ’ ಎಂದಿದ್ದರು. ಇದು ಸಿಖ್ಖರ ಆಕ್ರೋಶಕ್ಕೆ ತುಪ್ಪ ಸುರಿದಿತ್ತು. ಅಲ್ಲದೆ ಇವತ್ತಿಗೂ ಕಾಂಗ್ರೆಸ್ ಪಕ್ಷವನ್ನು ಟೀಕಿಸಲು ಈ ಹೇಳಿಕೆ ಬಳಕೆಯಾಗುತ್ತದೆ.
ಈಗ ಪಕ್ಷದ ಲೋಕಸಭೆಯ ನಾಯಕ ಅಧೀರ್ ರಂಜನ್ ಚೌಧರಿ ಅವರೇ ಮತ್ತೆ ಈ ಹೇಳಿಕೆ ಬರೆದು ರಾಜೀವ್ ಗಾಂಧಿಗೆ ಶ್ರದ್ಧಾಂಜಲಿ ಸಲ್ಲಿಸಿರುವುದು ಇನ್ನಷ್ಟುಆಕ್ರೋಶಕ್ಕೆ ಕಾರಣವಾಗಿದೆ. ಆದರೆ, ತಾವು ಈ ಟ್ವೀಟ್ ಮಾಡಿಲ್ಲ. ಯಾರೋ ತಮ್ಮ ಟ್ವೀಟರ್ ಖಾತೆ ಹ್ಯಾಕ್ ಮಾಡಿದ್ದಾರೆ ಎಂದು ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ‘ಈ ಟ್ವೀಟ್ ಮಾಡಲ್ಪಟ್ಟಾಗ ನಾನು ಪಶ್ಚಿಮ ಬಂಗಾಳದ ಕಾಂಗ್ರೆಸ್ ಕಚೇರಿಯಲ್ಲಿ ಭಾಷಣ ಮಾಡುತ್ತಿದ್ದೆ. ಆಗ ನನ್ನ ಕೈಲಿ ಮೊಬೈಲ್ ಕೂಡ ಇರಲಿಲ್ಲ’ ಎಂದು ಅಧೀರ್ ಹೇಳಿದ್ದಾರೆ.
ಆದರೆ, ಟ್ವೀಟ್‌ನ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡು ಕಾಂಗ್ರೆಸ್‌ನ ನಡೆಯನ್ನು ಬಿಜೆಪಿ, ನ್ಯಾಷನಲ್ ಕಾನ್ಫರೆನ್ಸ್ ಸೇರಿದಂತೆ ಅನೇಕ ರಾಜಕೀಯ ಪಕ್ಷಗಳು ಟೀಕಿಸಿವೆ.
