ಕೊಚ್ಚಿ(ಸೆ.03): ಬಾಲಿವುಡ್‌, ಸ್ಯಾಂಡಲ್‌ವುಡ್‌ ಬಳಿಕ ಮಲಯಾಳ ಚಿತ್ರರಂಗಕ್ಕೂ (ಮಾಲಿವುಡ್‌) ಡ್ರಗ್ಸ್‌ ಮಾಫಿಯಾದ ನಂಟು ಇರುವ ಸಂಗತಿ ಬೆಳಕಿಗೆ ಬಂದಿದೆ. ಬೆಂಗಳೂರಿನ ಡ್ರಗ್ಸ್‌ ಮಾರಾಟ ಜಾಲದಲ್ಲಿ ಭಾಗಿಯಾದ ಆರೋಪದ ಮೇಲೆ ಬಂಧಿತನಾಗಿರುವ ಡ್ರಗ್‌ ಪೆಡ್ಲರ್‌ ಮೊಹಮ್ಮದ್‌ ಅನೂಪ್‌ ಕೇರಳ ಚಿತ್ರರಂಗದ 8 ಮಂದಿ ಸದಸ್ಯರ ಜೊತೆ ಸಂಪರ್ಕ ಹೊಂದಿದ್ದ ಎಂಬ ಸಂಗತಿ ಮಾದಕ ವಸ್ತು ನಿಯಂತ್ರಣ ದಳ (ಎನ್‌ಸಿಬಿ) ತನಿಖೆಯಿಂದ ತಿಳಿದುಬಂದಿದೆ.

ಬೆಂಗಳೂರು ಡಗ್ಸ್‌ ದಂಧೆಯ ಕಿಂಗ್‌ಪಿನ್‌ ಡಿ. ಅನಿಕಾ, ರಿಜೋಶ್‌ ರವೀಂದ್ರನ್‌ ಜೊತೆ ಅನೂಪ್‌ನನ್ನು ಎನ್‌ಸಿಬಿ ಇತ್ತೀಚೆಗೆ ಬಂಧಿಸಿತ್ತು. ವಿಚಾರಣೆಯ ವೇಳೆ ಅನೂಪ್‌ ಕೇರಳ ಚಿತ್ರರಂಗದ ಸದಸ್ಯರಿಗೂ ಡಗ್ಸ್‌ ಪೂರೈಕೆ ಮಾಡಿರುವ ಸಂಗತಿಯನ್ನು ಬಾಯಿ ಬಿಟ್ಟಿದ್ದಾನೆ.

ಆರಂಭದಲ್ಲಿ ಕೊಚ್ಚಿಯ ಶಾಪಿಂಗ್‌ ಮಾಲ್‌ಗಳಲ್ಲಿ ಅನೂಪ್‌ ಡಗ್ಸ್‌ ಹಾಗೂ ಇನ್ನಿತರ ದಂಧೆಯನ್ನು ನಡೆಸುತ್ತಿದ್ದ. ಬಳಿಕ ವ್ಯಾಪಾರ ಕುಸಿದಿದ್ದರಿಂದ ತನ್ನ ದಂಧೆಯನ್ನು ಬೆಂಗಳೂರಿಗೆ ವರ್ಗಾಯಿಸಿದ್ದ. ಬೆಂಗಳೂರಿನಲ್ಲಿ ನಡೆಯುತ್ತಿದ್ದ ರಾತ್ರಿ ಪಾರ್ಟಿಗಳಿಗೆ ದುಬಾರಿ ಮಾದಕ ದ್ರವ್ಯಗಳನ್ನು ಅನೂಪ್‌ ಮತ್ತು ರವೀಂದ್ರನ್‌ ಪೂರೈಕೆ ಮಾಡುತ್ತಿದ್ದರು. ಲಾಕ್‌ಡೌನ್‌ ಸಂದರ್ಭದಲ್ಲಿ ಕೇರಳ ಚಿತ್ರರಂಗದ ಕೆಲವು ಸದಸ್ಯರು ಡಗ್ಸ್‌ಗಾಗಿ ಅನೂಪ್‌ನನ್ನು ಸಂಪರ್ಕಿಸಿರುವ ಬಗ್ಗೆ ಎನ್‌ಸಿಬಿಗೆ ಸಾಕ್ಷ್ಯಗಳು ಲಭ್ಯವಾಗಿವೆ ಎಂದು ಮೂಲಗಳು ತಿಳಿಸಿವೆ.

ಕೇರಳ ಮಾಜಿ ಗೃಹಮಂತ್ರಿ ಕೊಡಿಯೇರಿ ಪುತ್ರಗೂ ಲಿಂಕ್‌

ಕೇಳದ ಮಾಜಿ ಗೃಹ ಸಚಿವ ಹಾಗೂ ಸಿಪಿಎಂ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್‌ ಪುತ್ರ ಬಿನೀಶ್‌ ಕೊಡಿಯೇರಿ ಜೊತೆಗೂ ಅನೂಪ್‌ ವ್ಯವಹಾರಗಳನ್ನು ನಡೆಸುತ್ತಿದ್ದ ಎಂದು ತಿಳಿದುಬಂದಿದೆ. ಬೆಂಗಳೂರಿನ ಕಮ್ಮನಹಳ್ಳಿಯಲ್ಲಿ ಅನೂಪ್‌ 2015ರಲ್ಲಿ ಆರಂಭಿಸಿದ್ದ ಹೋಟೆಲ್‌ವೊಂದಕ್ಕೆ ಬಿನೀಶ್‌ ಕೊಡಿಯೇರಿ ಹಣ ಹೂಡಿಕೆ ಮಾಡಿದ್ದಾರೆ. ಈ ವಿಷಯವನ್ನು ಸ್ವತಃ ಅನೂಪ್‌ ಬೆಂಗಳೂರು ಪೊಲೀಸರಿತೆ ತಿಳಿಸಿದ್ದಾನೆ. ರಾತ್ರಿ ಪಾರ್ಟಿಗಳಲ್ಲಿ ಬಿನೀಶ್‌ ಕೊಡಿಯೇರಿ ಭಾಗವಹಿಸಿದ್ದ ಫೋಟೋಗಳನ್ನು ಅನೂಪ್‌ ಫೇಸ್‌ಬುಕ್‌ನಲ್ಲಿ ಶೇರ್‌ ಮಾಡಿದ್ದಾನೆ ಎಂದು ಕೇರಳದ ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ (ಐಯುಎಂಎಲ್‌) ಆರೋಪಿಸಿದೆ. ಡಗ್ಸ್‌ ದಂಧೆಯ ಜೊತೆಗೆ ಬಿನೀಶ್‌ ಕೊಡಿಯೇರಿ ಹೊಂದಿರುವ ನಂಟಿನ ಬಗ್ಗೆ ತನಿಖೆ ನಡೆಸಬೇಕು ಎಂದು ಐಯುಎಂಎಲ್‌ ಹಾಗೂ ಬಿಜೆಪಿ ಆಗ್ರಹಿಸಿದೆ.

ಹೌದು, ನನಗೆ ಅನೂಪ್‌ ಗೊತ್ತು: ಬಿನೀಶ್‌

ಅನೂಪ್‌ ಹಾಗೂ ಆತನ ಕುಟುಂಬ ನನಗೆ ಗೊತ್ತು. ಬೆಂಗಳೂರಿನಲ್ಲಿ ರೆಸ್ಟೋರೆಂಟ್‌ ಆರಂಭಿಸಲು ನನ್ನ ಬಳಿ ಆತ ಕೆಲ ವರ್ಷಗಳ ಹಿಂದೆ ಹಣ ಪಡೆದಿದ್ದ. ಆದರೆ ಆತ ಮಾದಕ ವಸ್ತು ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದಾನೆ ಎಂಬುದನ್ನು ಕೇಳಿ ಆಘಾತವಾಗಿದೆ. ಆತ ಇಂತಹ ಹಿನ್ನೆಲೆ ಹೊಂದಿದ್ದಾನೆ ಎಂಬುದು ನನಗೆ ಗೊತ್ತಿರಲಿಲ್ಲ ಎಂದು ಬಿನೀಶ್‌ ಕೊಡಿಯೇರಿ ತಿಳಿಸಿದ್ದಾರೆ.