ವ್ಯಾಕ್ಸಿನ್ ಮಾರಾಟ ವಿವಾದ, ಖಾಸಗಿ ಆಸ್ಪತ್ರೆಗಳಿಂದ ಲಸಿಕೆ ವಾಪಸ್!
* ದೇಶೀಯ ಕೋವಿಡ್ ಲಸಿಕೆಯಾದ ಕೋವ್ಯಾಕ್ಸಿನ್ ಅನ್ನು ಜನರಿಗೆ ಉಚಿತವಾಗಿ ವಿತರಿಸುವ ಬದಲು ಮಾರಾಟ
* ವ್ಯಾಕ್ಸಿನ್ ಮಾರಾಟ ವಿವಾದ, ಖಾಸಗಿ ಆಸ್ಪತ್ರೆಗಳಿಂದ ಲಸಿಕೆ ವಾಪಸ್!
* ವಿರೋಧಕ್ಕೆ ಮಣಿದ ಪಂಜಾಬ್ ಸರ್ಕಾರ
ನವದೆಹಲಿ(ಜೂ.05): ದೇಶೀಯ ಕೋವಿಡ್ ಲಸಿಕೆಯಾದ ಕೋವ್ಯಾಕ್ಸಿನ್ ಅನ್ನು ಜನರಿಗೆ ಉಚಿತವಾಗಿ ವಿತರಿಸುವ ಬದಲಿಗೆ ಖಾಸಗಿ ಆಸ್ಪತ್ರೆಗಳಿಗೆ ಮಾರಾಟ ಮಾಡಿದ್ದ ಪಂಜಾಬ್ ಸರ್ಕಾರ, ವಿಪಕ್ಷಗಳು ಹಾಗೂ ಜನತೆಯ ವಿರೋಧಕ್ಕೆ ಮಣಿದಿದೆ. ಲಸಿಕೆಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಮಾರಾಟ ಮಾಡುವ್ನ ವಿವಾದಾತ್ಮಕ ನಿರ್ಧಾರವನ್ನು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಹಿಂಪಡೆದಿದ್ದಾರೆ.
‘ಖಾಸಗಿ ಆಸ್ಪತ್ರೆಗಳು, ಸರ್ಕಾರದಿಂದ ಪಡೆದಿರುವ ಲಸಿಕೆಗಳನ್ನು ಕೂಡಲೇ ಮರಳಿಸಬೇಕು. ಜೊತೆಗೆ ಹಂಚಿಕೆ ಮಾಡಿ ಉಳಿದಿರುವ ಲಸಿಕೆಗಳನ್ನು ಈ ಕೂಡಲೇ ಸರ್ಕಾರದ ಸುಪರ್ದಿಗೆ ಒಪ್ಪಿಸಬೇಕು. ಅಲ್ಲದೆ ಈಗಾಗಲೇ ಸರ್ಕಾರದಿಂದ ಪಡೆದು ಹಂಚಿಕೆ ಮಾಡಲಾದ ಡೋಸ್ಗಳನ್ನು ತಾವು ಲಸಿಕೆ ಉತ್ಪಾದಕ ಕಂಪನಿಗಳಿಂದ ಪಡೆದ ತಕ್ಷಣವೇ ಸರ್ಕಾರಕ್ಕೆ ಹಿಂದಿರುಗಿಸಬೇಕು’ ಎಂದು ಈ ಆದೇಶದಲ್ಲಿ ತಿಳಿಸಲಾಗಿದೆ.
ಇದಕ್ಕೆ ಪ್ರಿತಿಯಾಗಿ, ಲಸಿಕೆಗಾಗಿ ಖಾಸಗಿ ಆಸ್ಪತ್ರೆಗಳು ಸರ್ಕಾರದ ಬ್ಯಾಂಕ್ ಖಾತೆಯಲ್ಲಿ ಠೇವಣಿ ಮಾಡಿದ ಹಣವನ್ನು ಶೀಘ್ರವೇ ಮರುಪಾವತಿಸಲಾಗುತ್ತದೆ ಎಂದಿದೆ.
ಇದಕ್ಕೂ ಮುನ್ನ ಮಾತನಾಡಿದ ವಿಪಕ್ಷ ಅಕಾಲಿದಳದ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್, ಕೋವ್ಯಾಕ್ಸಿನ್ ಅನ್ನು 400 ರು.ಗೆ ಖರೀದಿಸುತ್ತಿರುವ ಸರ್ಕಾರವು ಅದನ್ನು ಖಾಸಗಿ ಆಸ್ಪತ್ರೆಗಳಿಗೆ 1060 ರು.ನಂತೆ ಮಾರಾಟ ಮಾಡುತ್ತಿದೆ. ಹೀಗೆ ಪಡೆದ ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳು ಒಂದು ಡೋಸ್‌ಗೆ 1560 ರು.ಗೆ ಮಾರಾಟ ಮಾಡುತ್ತಿವೆ ಎಂದು ದೂರಿದ್ದರು.