Asianet Suvarna News Asianet Suvarna News

3 ದಿನ, 30 ತಾಸು ರಾಹುಲ್‌ಗೆ ಡ್ರಿಲ್‌: ನಾಳೆ ಮತ್ತೆ ಬುಲಾವ್‌!

* ಎಐಸಿಸಿ ಮಾಜಿ ಅಧ್ಯಕ್ಷನಿಂದ ಆಡಿಯೋ, ವಿಡಿಯೋ ಹೇಳಿಕೆ ದಾಖಲಿಸಿಕೊಂಡ ಅಧಿಕಾರಿಗಳು

* 3 ದಿನ, 30 ತಾಸು ರಾಹುಲ್‌ಗೆ ಡ್ರಿಲ್‌: ನಾಳೆ ಮತ್ತೆ ಬುಲಾವ್‌!

* ಇಂದು ಮತ್ತೆ ಹಾಜರಾಗಲು ಸೂಚನೆ; 1 ದಿನ ವಿನಾಯ್ತಿ ಕೋರಿದ ರಾಹುಲ್‌, ಇ.ಡಿ. ಒಪ್ಪಿಗೆ

After 30 Hours Of Questioning Rahul Gandhi Sought A Day Break Sources pod
Author
Bangalore, First Published Jun 16, 2022, 9:21 AM IST

ನವದೆಹಲಿ(ಜೂ.16): ನ್ಯಾಷನಲ್‌ ಹೆರಾಲ್ಡ್‌ ಅಕ್ರಮ ಹಣ ವರ್ಗಾವಣೆ ಆರೋಪದ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸತತ ಮೂರನೇ ದಿನವಾದ ಬುಧವಾರ ಕೂಡಾ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಸುದೀರ್ಘ 10 ತಾಸುಗಳ ಕಾಲ ವಿಚಾರಣೆಗೆ ಒಳಪಡಿಸಿದ್ದಾರೆ. ಇದರೊಂದಿಗೆ ಕಳೆದ ಸೋಮವಾರ ಆರಂಭವಾಗಿದ್ದ ವಿಚಾರಣೆ ಮೂರು ದಿನ ಪೂರೈಸಿದ್ದು, ಒಟ್ಟಾರೆ 30 ತಾಸುಗಳ ಕಾಲ ಇ.ಡಿ. ಅಧಿಕಾರಿಗಳ ಪ್ರಶ್ನೆಗೆ ರಾಹುಲ್‌ ಗಾಂಧಿ ಉತ್ತರ ನೀಡಿದ್ದಾರೆ.

ಇನ್ನೂ ವಿಚಾರಣೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಗುರುವಾರ ಕೂಡಾ ವಿಚಾರಣೆಗೆ ಬರುವಂತೆ ರಾಹುಲ್‌ಗೆ ಇ.ಡಿ. ಅಧಿಕಾರಿಗಳು ಸೂಚಿಸಿದ್ದರು. ಆದರೆ ಗುರುವಾರ ಒಂದು ದಿನ ವಿನಾಯ್ತಿ ನೀಡುವಂತೆ ರಾಹುಲ್‌ ಮುಂದಿಟ್ಟಕೋರಿಕೆ ಮಾನ್ಯ ಮಾಡಿದ ಇ.ಡಿ. ಅಧಿಕಾರಿಗಳು, ಶುಕ್ರವಾರ ವಿಚಾರಣೆಗೆ ಮರಳುವಂತೆ ಸೂಚಿಸಿದ್ದಾರೆ.

10 ತಾಸು ಪ್ರಶ್ನೋತ್ತರ:

ಬುಧವಾರ ಬೆಳಗ್ಗೆ 11.30ಕ್ಕೆ ಇ.ಡಿ. ಕಚೇರಿಗೆ, ಸೋದರಿ ಪ್ರಿಯಾಂಕಾ ಜೊತೆ ಆಗಮಿಸಿದ ರಾಹುಲ್‌ ಮಧ್ಯಾಹ್ನದವರೆಗೂ ಹಾಜರಿದ್ದರು. ಬಳಿಕ ಭೋಜನಕ್ಕಾಗಿ ಮನೆಗೆ ತೆರಳಿ 4.30ಕ್ಕೆ ಇ.ಡಿ. ಕಚೇರಿಗೆ ಮರಳಿ ರಾತ್ರಿ 9.30ರವರೆಗೂ ಹಾಜರಿದ್ದು ಅಧಿಕಾರಿಗಳ ಪ್ರಶ್ನೆಗೆ ಉತ್ತರ ನೀಡಿದರು. ಕಳೆದ ಮೂರು ದಿನಗಳಿಂದಲೂ ನಿತ್ಯವೂ ರಾಹುಲ್‌ರ ಆಡಿಯೋ ಮತ್ತು ವಿಡಿಯೋ ಹೇಳಿಕೆಗಳನ್ನು ಅಧಿಕಾರಿಗಳು ದಾಖಲಿಸಿಕೊಳ್ಳುತ್ತಿದ್ದಾರೆ. ವಿಚಾರಣೆ ಪೂರ್ಣಗೊಂಡ ಬಳಿಕ ಎ4 ಸೈಜ್‌ನ ಕಾಗದದಲ್ಲಿ ದಾಖಲಾದ ತಮ್ಮ ಹೇಳಿಕೆಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತಿರುವ ರಾಹುಲ್‌ ಮತ್ತು ಅವರ ಬಳಗ, ಏನಾದರೂ ಬದಲಾವಣೆ ಇದ್ದರೆ ಅದನ್ನು ತಕ್ಷಣವೇ ತಿದ್ದುವಂತೆ ಸೂಚಿಸುತ್ತಿದೆ ಎಂದು ಇ.ಡಿ. ಕಚೇರಿ ಮೂಲಗಳು ತಿಳಿಸಿವೆ.

ಏನೇನು ಪ್ರಶ್ನೆ?:

ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆ, ಸದ್ಯ ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯ ಮಾಲಿಕತ್ವ ಹೊಂದಿರುವ ಯಂಗ್‌ ಇಂಡಿಯಾದಲ್ಲಿ ನಿಮ್ಮ ಪಾತ್ರ ಏನು? ಎಜೆಎಲ್‌ಗೆ ಕಾಂಗ್ರೆಸ್‌ನಿಂದ 90 ಕೋಟಿ ರು. ಸಾಲ ನೀಡಿಕೆ ವಿಷಯ, ಕಾಂಗ್ರೆಸ್‌ ನೀಡಿದ ಸಾಲವನ್ನು ಯಂಗ್‌ ಇಂಡಿಯಾಕ್ಕೆ ವರ್ಗಾಯಿಸಿದ್ದು ಏಕೆ? ಕೋಲ್ಕತಾ ಮೂಲದ ಶೆಲ್‌ ಕಂಪನಿಯೊಂದರಿಂದ ಯಂಗ್‌ ಇಂಡಿಯಾ 2011ರಲ್ಲಿ 1 ಕೋಟಿ ಸಾಲ ಪಡೆದಿದ್ದು ಏಕೆ? ಎಜೆಎಲ್‌ ಹೊಂದಿರುವ 800 ಕೋಟಿ ರು. ಆಸ್ತಿಯ ಮಾಹಿತಿ ಮತ್ತು ಲಾಭೇತರ ಸಂಸ್ಥೆಯಾದ ಯಂಗ್‌ ಇಂಡಿಯಾ, ನ್ಯಾಷನಲ್‌ ಹೆರಾಲ್ಡ್‌ಗೆ ಸಂಬಂಧಿಸಿದ ಭೂಮಿ ಮತ್ತು ಕಟ್ಟಡಗಳನ್ನು ಬಾಡಿಗೆಗೆ ನೀಡುವ ಮೂಲಕ ವಾಣಿಜ್ಯ ಚಟುವಟಿಕೆ ನಡೆಸುತ್ತಿರುವುದಾದರೂ ಏಕೆ ಎಂಬಿತ್ಯಾದಿ ಪ್ರಶ್ನೆಗಳನ್ನು ಇ.ಡಿ. ಅಧಿಕಾರಿಗಳು ರಾಹುಲ್‌ ಮುಂದಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

Follow Us:
Download App:
  • android
  • ios