ಗೊಂಡಾ(ಜೂ.03): ಬೆಂಗಳೂರಿನಿಂದ ಪ್ರಯಾಸದ 2000 ಕಿ.ಮೀ. ಪ್ರಯಾಣಿಸಿ 12 ದಿನಗಳ ಬಳಿಕ ಉತ್ತರ ಪ್ರದೇಶದ ತನ್ನ ಮನೆಯನ್ನು ತಲುಪಿದ್ದ ಯುವಕನೊಬ್ಬ ತನ್ನ ತಾಯಿಯನ್ನು ಆಲಿಂಗಿಸಿದ ಒಂದು ಗಂಟೆಯ ಅವಧಿಯಲ್ಲಿ ಹಾವು ಕಡಿದು ಸಾವಿಗೀಡಾದ ಹೃದಯ ವಿದ್ರಾವಕ ಘಟನೆ ನಡೆದಿದೆ.

ಗೊಂಡಾ ಜಿಲ್ಲೆಯ ನಿವಾಸಿ ಸಲ್ಮಾನ್‌ ಖಾನ್‌ (23) ಸಾವಿಗೀಡಾದ ಯುವಕ. ಮೇ 26ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಳೆದ ವರ್ಷ ಡಿಸೆಂಬರ್‌ 29ರಂದು ಕಟ್ಟಡ ಕೆಲಸಕ್ಕೆಂದು ಸಲ್ಮಾನ್‌ ಬೆಂಗಳೂರಿಗೆ ಆಗಮಿಸಿದ್ದ. ಬೆಂಗಳೂರಿನ ಬನಶಂಕರಿಯಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಆತ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕೆಲಸ ಕಳೆದುಕೊಂಡಿದ್ದ. ಹೀಗಾಗಿ ತನ್ನ ಜಿಲ್ಲೆಯ ಇತರ 10 ಜನರ ಜೊತೆ ಮೇ 12ರಂದು ತವರಿಗೆ ಪ್ರಯಾಣ ಬೆಳೆಸಿದ್ದ.

ಆದರೆ, ನಾಲ್ಕು ದಿನ ಕಾದರೂ ರೈಲು ಸಿಗದೆ ಇದ್ದ ಕಾರಣ ಅವರೆಲ್ಲರೂ ಕಾಲ್ನಡಿಗೆಯಲ್ಲೇ ಉತ್ತರ ಪ್ರದೇಶಕ್ಕೆ ಹೊರಟಿದ್ದರು. ದಾರಿ ಮಧ್ಯೆ ಸಿಗುತ್ತಿದ್ದ ಟ್ರಕ್‌ಗಳನ್ನು ಹತ್ತಿ ಮತ್ತೆ ವಾಹನ ಸಿಗದೇ ಇದ್ದಾಗ ನಡೆದು ದಾರಿಯನ್ನು ಕ್ರಮಿಸಿ 12 ದಿನಗಳ ಪ್ರಯಾಸದ ಪ್ರಯಾಣದ ಬಳಿಕ ಸಲ್ಮಾನ್‌ ತನ್ನ ಮನೆಯನ್ನು ತಲುಪಿದ್ದ.

ತನ್ನ ಕಿರಿಯ ಮಗನ ಬರುವಿಕೆಗಾಗಿ ಕಾದು ಕುಳಿತಿದ್ದ ತಾಯಿಯನ್ನು ಒಮ್ಮೆ ಬಿಗಿದಪ್ಪಿದ ಸಲ್ಮಾನ್‌, ಮನೆಯ ಸಮೀಪದ ಕೊಳಕ್ಕೆ ಕೈ- ಕಾಲುಗಳನ್ನು ತೊಳೆದುಕೊಂಡು ಬರಲೆಂದು ಹೋಗಿದ್ದಾಗ ವಿಷಪೂರಿತ ಹಾವೊಂದು ಕಚ್ಚಿ ಸಾವಿಗೀಡಾಗಿದ್ದಾನೆ.