ನವದೆಹಲಿ(ನ.12): ಕೊರೋನಾ ವೈರಸ್‌ ವಿರುದ್ಧದ ಹೋರಾಟದಲ್ಲಿ ಭಾರತ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದು, ಸಕ್ರಿಯ ಕೊರೋನಾ ವೈರಸ್‌ ಪ್ರಕರಣಗಳ ಸಂಖ್ಯೆ106 ದಿನಗಳ ಬಳಿಕ ಮೊದಲ ಬಾರಿಗೆ 5 ಲಕ್ಷಕ್ಕಿಂತಲೂ ಕೆಳಗೆ ಇಳಿದಿದೆ. ದೇಶದ ಒಟ್ಟಾರೆ ಕೊರೋನಾ ಪ್ರಕರಣಗಳ ಪೈಕಿ ಸಕ್ರಿಯ ಪ್ರಕರಣಗಳ ಪ್ರಮಾಣ ಶೇ.5.73ರಷ್ಟಿದೆ. ದೇಶದಲ್ಲಿ ಈಗ 4,94,657 ಸಕ್ರಿಯ ಪ್ರಕರಣಗಳು ಇವೆ. ಜು.28ರಂದು 4,96,988 ಸಕ್ರಿಯ ಪ್ರಕರಣಗಳು ದಾಖಲಾಗಿದ್ದವು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಬುಧವಾರ ಮುಂಜಾನೆ 8 ಗಂಟೆಗೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ 44,281 ಹೊಸ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಇದುವರೆಗೆ ಒಟ್ಟಾರೆ ದಾಖಲಾದ ಪ್ರಕರಣಗಳ ಸಂಖ್ಯೆ 86 ಲಕ್ಷಕ್ಕೆ ಏರಿಕೆ ಆಗಿದೆ. 7,830 ಹೊಸ ಪ್ರಕರಣಗಳೊಂದಿಗೆ ದೈನಂದಿನ ಪ್ರಕರಣಗಳಲ್ಲಿ ದೆಹಲಿ ಮೊದಲ ಸ್ಥಾನದಲ್ಲೇ ಮುಂದುವರಿದಿದ್ದು, ನಂತರದ ಸ್ಥಾನದಲ್ಲಿರುವ ಕೇರಳದಲ್ಲಿ 6,010 ಪ್ರಕರಣಗಳು ದಾಖಲಾಗಿವೆ. 50,326 ಮಂದಿ ಕೊರೋನಾದಿಂದ ಗುಣಮುಖರಾಗಿದ್ದು, ಕೊರೋನಾದಿಂದ ಚೇತರಿಸಿಕೊಂಡವರ ಸಂಖ್ಯೆ 80 ಲಕ್ಷ ಗಡಿ ದಾಟಿದೆ. ಚೇತರಿಕೆ ಪ್ರಮಾಣ ಶೇ.92.79ಕ್ಕೆ ಏರಿಕೆ ಆಗಿದೆ.

ಇದೇ ವೇಳೆ ದೇಶದಲ್ಲಿ ನಡೆಸಲಾದ ಕೊರೋನಾ ಟೆಸ್ಟ್‌ಗಳ ಸಂಖ್ಯೆ 12 ಕೋಟಿ ದಾಟಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 11,53,294 ಕೊರೋನಾ ಪರೀಕ್ಷೆಗಳನ್ನು ನಡೆಸಲಾಗಿದೆ.