ಕನ್ನಡಿಗರು ರಕ್ಷಣಾ ವಲಯದಲ್ಲಿ ಸ್ಥಾಪಿಸಿರುವ ಹಲವು ನವೋದ್ಯಮಗಳು ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಮಿಂಚುತ್ತಿವೆ. ಕನ್ನಡದ ಐಟಿ ತಂತ್ರಜ್ಞರೇ ಸೇರಿ ಸ್ಥಾಪಿಸಿರುವ ಈ ಸಂಸ್ಥೆಗಳು ಭಾರತೀಯ ಸೇನೆಯ ರಕ್ಷಣೆಗೆ ಮಹತ್ವದ ಕೊಡುಗೆ ನೀಡುತ್ತಿವೆ.

ಕನ್ನಡಿಗರು ರಕ್ಷಣಾ ವಲಯದಲ್ಲಿ ಸ್ಥಾಪಿಸಿರುವ ಹಲವು ನವೋದ್ಯಮಗಳು ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಮಿಂಚುತ್ತಿವೆ. ಕನ್ನಡದ ಐಟಿ ತಂತ್ರಜ್ಞರೇ ಸೇರಿ ಸ್ಥಾಪಿಸಿರುವ ಈ ಸಂಸ್ಥೆಗಳು ಭಾರತೀಯ ಸೇನೆಯ ರಕ್ಷಣೆಗೆ ಮಹತ್ವದ ಕೊಡುಗೆ ನೀಡುತ್ತಿವೆ.

ಮ್ಯಾನ್‌ಪ್ಯಾಕ್‌ ಜ್ಯಾಮರ್‌

ಇಂಡಿಯಾ ಸ್ಪೆಲ್ಲಿಂಗನ್ನು ಕೊಂಚ ಬದಲಿಸಿ ಎಐಡಿಐಎನ್‌ (AIDIN) ಎಂದು ಹೆಸರಿಟ್ಟುಕೊಂಡಿರುವ ಕನ್ನಡಿಗರ ಕಂಪನಿ ದೇಶದಲ್ಲಿ ಮೊದಲ ಬಾರಿಗೆ ಮ್ಯಾನ್‌ಪ್ಯಾಕ್‌ ಜಾಮರ್‌ (manpack jammer) ರೂಪಿಸಿದೆ. ಇದಕ್ಕೆ ಈಗಾಗಲೇ ಭಾರತೀಯ ಸೇನೆ (Indian Army)ಬೇಡಿಕೆ ಇಟ್ಟಿದ್ದು, ಮೊದಲಿಗೆ ಎರಡು ಯಂತ್ರ ಪೂರೈಸುವಂತೆ ತಿಳಿಸಿದೆ. 7 ಕೆ.ಜಿ. ಇರುವ ಈ ಜಾಮರನ್ನು ಯೋಧರು ಧರಿಸಿ ಗಡಿಯಲ್ಲಿ ಗಸ್ತು ತಿರುಗಬಹುದು.

ಮೇಕ್‌ ಇನ್‌ ಇಂಡಿಯಾ ಅಡಿ ಆರ್‌ಎಫ್‌ ಎಂಪ್ಲಿಫಾಯರ್ಸ್‌ (RF amplifiers) ಸೇರಿ ಇತರೆ ತಂತ್ರಜ್ಞಾನವನ್ನು ಬಳಸಿ ರೂಪಿಸಿದ ಧರಿಸಿ ಓಡಾಡಬಲ್ಲ ಮೊದಲ ಜಾಮರ್‌ ಇದು. ಇದು ಸುತ್ತಲ 2 ಕಿ.ಮೀ. ವ್ಯಾಪ್ತಿಯಲ್ಲಿ ಡ್ರೋನ್‌ಗಳನ್ನು ಪತ್ತೆ ಮಾಡುತ್ತದೆ. ಇದೇ ವೇಳೆ ಸೈನಿಕರ ಮೂಲಕ ಮೇಲಾಧಿಕಾರಿಗಳಿಗೆ ಅಪಾಯದ ಬಗ್ಗೆ ಸಂದೇಶ ಕಳಿಸುತ್ತದೆ. ಸೇನೆ ಇದನ್ನು ಪೂರೈಸುವಂತೆ ತಿಳಿಸಿದ್ದು, 9 ದಿನಗಳಲ್ಲಿ ತಲುಪಿಸಲಿದ್ದೇವೆ ಎಂದು ಸಂಸ್ಥೆಯ ವಿ.ಎಸ್‌.ಮಧು ತಿಳಿಸಿದರು. ಇನ್ನು ಇದೇ ಸಂಸ್ಥೆ ಕಾರಿನಲ್ಲಿ ಹೊತ್ತೊಯ್ಯಬಲ್ಲ ಜಾಮರನ್ನು ರೂಪಿಸಿದ್ದು, ಇದು ಡ್ರೋನ್‌ಅನ್ನು ಪತ್ತೆ ಮಾಡುವುದು ಮಾತ್ರಲ್ಲದೆ ಅದನ್ನು ಹೊಡೆದುರುಳಿಸುತ್ತದೆ ಎಂದರು.

ಯರಲವ

ಇದು ಕನ್ನಡದ ವರ್ಣಮಾಲೆಯನ್ನೇ ಸಂಸ್ಥೆಗೆ ಹೆಸರಾಗಿಸಿಕೊಂಡ ಸ್ಟಾರ್ಟ್‌ಅಪ್‌ ಸಂಸ್ಥೆ. ಸೇನೆಯಲ್ಲಿ ಸದ್ಯಕ್ಕೆ 1800 ಎಲ್‌ಟಿಎಂಎಸ್‌ (ಲ್ಯಾಂಡ್‌ಮೈನ್‌ ಟ್ರ್ಯಾಕಿಂಗ್‌ ಸಿಸ್ಟಂ) ಯಂತ್ರದ ಅಗತ್ಯವಿದೆ. ‘ಯರಲವ’ (Yaralava) ಸಂಸ್ಥೆ ಈ ಉಪಕರಣವನ್ನು ಸೇನೆಗೆ ಒದಗಿಸುವ ಪ್ರಯತ್ನದಲ್ಲಿದೆ. ಜಿನೇವಾ ಒಪ್ಪಂದದಂತೆ (Geneva Convention)ಗಡಿ ರಕ್ಷಣೆಗೆ ಅಳವಡಿಸುವ ನೆಲಸ್ಫೋಟಕವನ್ನು 2 ವರ್ಷಕ್ಕೊಮ್ಮೆ ತೆಗೆದು ಪರಿಶೀಲಿಸಬೇಕು. ಸೇನೆಗೆ 1 ಕಿ.ಮೀ ವ್ಯಾಪ್ತಿಯಲ್ಲಿ ಸ್ಫೋಟಕ ಅಳವಡಿಸಲು ಒಂದು ತಿಂಗಳು ಸಾಕು. ಆದರೆ, ಅವನ್ನು ತೆಗೆಯಲು 6-7 ತಿಂಗಳು ಬೇಕಾಗುತ್ತದೆ. ವರ್ಷಗಳ ಬಳಿಕ ಸ್ಫೋಟಕ ನೆಲದೊಳಗೆ ಸರಿದಾಡಿ ನಿಖರ ಸ್ಥಳ ಗುರುತಿಗೆ ಸಮಸ್ಯೆ ಆಗುತ್ತಿದೆ. ತಾವೇ ಅಳವಡಿಸಿದ ಸ್ಪೋಟಕದಿಂದ ನಮ್ಮ ಸೈನಿಕರಿಗೆ ಪ್ರಾಣಾಪಾಯ ಆಗಿರುವ ಉದಾಹರಣೆ ಇದೆ. ಈ ತೊಂದರೆ ನಿವಾರಿಸಲು ಎಲ್‌ಟಿಎಂಎಸ್‌ ಸಹಾಯಕವಾಗಲಿದೆ.

ನೆಲಸ್ಫೋಟಕ ಅಳವಡಿಸಿದ ಸ್ಥಳವನ್ನು ಇದು ಟ್ರ್ಯಾಕ್‌ ಮಾಡುತ್ತದೆ. ಸ್ಫೋಟಕವಿದ್ದ ಸ್ಥಳವನ್ನು ಜಿಪಿಎಸ್‌ ಡಾಟಾ, ಸೆನ್ಸಾರ್‌ ಮೂಲಕ ಪತ್ತೆ ಮಾಡುತ್ತಿದೆ. ಇದರಿಂದ ಆರೇಳು ತಿಂಗಳ ಬದಲಾಗಿ ಕೇವಲ 2-3 ವಾರದಲ್ಲಿ ಸ್ಫೋಟಕವನ್ನು ತೆಗೆಯಲು ಅನುಕೂಲವಾಗಲಿದೆ. ಈ ಹಿಂದೆ ನಾವೆಲ್ಲ ಖಾಸಗಿ ಕಂಪನಿಯಲ್ಲಿದ್ದೆವು. ಕನ್ನಡಿಗರದ್ದೇ ಒಂದು ಕಂಪನಿ ಮಾಡಬೇಕೆಂದು ಯೋಚಿಸಿ 2019ರಲ್ಲಿ ಯರಲವ ಆರಂಭಿಸಿದ್ದೇವೆ ಎಂದು ಸಂಸ್ಥೆಯ ಅಕ್ಷತ್‌ ಶೆಟ್ಟಿ ತಿಳಿಸಿದರು.

ಚಿಕ್ಕ ಎಐ ಡ್ರೋಣ್‌

ಕೃತಕ ಬುದ್ಧಿಮತ್ತೆಯನ್ನು (artificial intelligence.) ಆಧರಿಸಿ ಕಾರ್ಯನಿರ್ವಹಿಸುವ ಸಣ್ಣ ಗಾತ್ರದ ದೇಶದ ಮೊದಲ ಡ್ರೋನ್‌ಅನ್ನು ಕನ್ನಡಿಗರ ಅಲ್ಗೊಫೆಟ್‌ ಸಂಸ್ಥೆ ರೂಪಿಸಿದೆ. ಭಾರತೀಯ ವಿಜ್ಞಾನ ಸಂಸ್ಥೆಯ ಸಹಯೋಗದಲ್ಲಿ ಆರ್ಚ್‌ಪಾರ್ಕ್ ಇನ್‌ಕ್ಯೂಬೆಶನ್‌ ಅಡಿಯಿರುವ ಈ ಸಂಸ್ಥೆ ರೂಪಿಸಿರುವ ಈ ಡ್ರೋಣ್‌ಗೆ ಸೇನೆ ಹೆಚ್ಚಿನ ಆಸಕ್ತಿ ತೋರಿದೆ.

ಡ್ರೋನ್‌ನ ಮೆದುಳು ಎಂದು ಕರೆಸಿಕೊಳ್ಳವ ಆಟೋಪೈಲಟ್‌ ಸಿಸ್ಟ್ಂನಲ್ಲಿ ಅತ್ಯಾಧುನಿಕ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಚಿಕ್ಕ ಡ್ರೋನ್‌ಗಳಿಗೆ ಲೋ ಪವರ್‌ ಆಟೋಪೈಲಟ್‌ ಸಿಸ್ಟ್‌ಂ ಈವರೆಗೆ ಯಾರೂ ಅಳವಡಿಸಿಲ್ಲ. ಗಸ್ತಿನ ವೇಳೆ ಡ್ರೋನ್‌ಗಳ ನಡುವೆ ತಾನಾಗಿಯೇ ಸಂವಹನ ಏರ್ಪಟ್ಟು ತಾನೇ ಸ್ವತಃ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಪಡೆಯುವಂತೆ ಮಾಡಲಾಗಿದೆ. ಜಿಪಿಎಸ್‌ ಇಲ್ಲದೆಯೆ ಈ ಡ್ರೋನ್‌ ಹಲವು ಸಮಯ ಕಾರ್ಯ ನಿರ್ವಹಿಸಬಲ್ಲದು.

ಗಸ್ತಿಗಾಗಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಬಹುದು. ಕೃಷಿಯಲ್ಲಿ ಬೆಳೆಗಳ ಆರೋಗ್ಯ, ಮಣ್ಣಿನ ಪರೀಕ್ಷೆ ಕೂಡ ಇದರಿಂದ ಸಾಧ್ಯ. ಇದರ ಜೊತೆಗೆ ಸ್ಮಾರ್ಟ್ ಬ್ಯಾಟ್ರಿ ಮ್ಯಾನೇಜ್‌ಮೆಂಟ್‌ ಚಾರ್ಜಿಂಗ್‌ ಟೆಕ್ನಾಲಜಿಯನ್ನು ರೂಪಿಸಿದ್ದೇವೆ ಎಂದು ಸಂಸ್ಥೆಯ ವರುಣ್‌ ತಿಳಿಸಿದರು.