ನವದೆಹಲಿ(ಮಾ.21): ನಿರ್ಭಯಾ ಪ್ರಕರಣದಲ್ಲಿ ದೋಷಿಗಳಷ್ಟೇ ಪ್ರಮಾಣದಲ್ಲಿ ಜನರು ದ್ವೇಷಿಸಿದ ಮತ್ತೊಬ್ಬ ವ್ಯಕ್ತಿಯೆಂದರೆ ದೋಷಿಗಳ ಪರ ಹೋರಾಡಿದ್ದ ವಕೀಲ ಎ.ಪಿ.ಸಿಂಗ್‌. ಇಡೀ ದೇಶವೇ ದ್ವೇಷಿಸುತ್ತಿದ್ದವರ ಪರ ಎ.ಪಿ.ಸಿಂಗ್‌ ಹೋರಾಟ ನಡೆಸಿದ್ದು ತಮ್ಮ ತಾಯಿ ಆಸೆಯ ಪೂರೈಸುವ ಸಲುವಾಗಿ. ಈ ವಿಷಯವನ್ನು ಕೆಲ ವರ್ಷಗಳ ಹಿಂದೆ ಸ್ವತಃ ಎ.ಪಿ.ಸಿಂಗ್‌ ಬಹಿರಂಗಪಡಿಸಿದ್ದರು.

ಕೆಲ ವರ್ಷದ ಹಿಂದೆ ‘ಬಿಹಾರದ ಗ್ರಾಮವೊಂದರಿಂದ ಬಂದಿದ್ದ ಅಕ್ಷಯ್‌ ಪತ್ನಿ ಪತಿಯನ್ನು ರಕ್ಷಿಸಲು ನನ್ನ ಅಮ್ಮನಲ್ಲಿಗೆ ಬಂದು ಕೇಳಿಕೊಂಡಿದ್ದಳು. ನಾನು ಮನೆಗೆ ಹಿಂದಿರುಗಿದಾಗ, ಆ ಹುಡುಗಿಗೆ ನ್ಯಾಯ ಕೊಡಿಸುವಂತೆ ಕೇಳಿಕೊಂಡರು. ಈ ಪ್ರಕರಣ ಕೈಗೆತ್ತಿಕೊಳ್ಳುವುದರಿಂದ ಏನೆಲ್ಲಾ ಪರಿಣಾಮಗಳಾಗುತ್ತವೆ ಎಂಬುದನ್ನು ಮನವರಿಕೆ ಮಾಡಲು ಯತ್ನಿಸಿದ್ದೆ. ಆದರೆ, ಹೆಚ್ಚು ಧಾರ್ಮಿಕರಾದ ನನ್ನ ಪೋಷಕರಿಗೆ ರಾಮ್‌ಲೀಲಾ ಮೈದಾನ, ಜಂತರ್‌ಮಂತರ್‌ ಮೈದಾನ, ಮೊಂಬತ್ತಿ, ಧೂಪ ಪತ್ತಿ ಸೇರಿದಂತೆ ಇನ್ನಿತರ ಘಟನೆಗಳ ಬಗ್ಗೆ ಗೊತ್ತಿಲ್ಲ. 7 ವರ್ಷಗಳ ಹಿಂದೆ ಕೈಗೆತ್ತಿಕೊಂಡ ಈ ಪ್ರಕರಣದ ಬಗ್ಗೆ ಈಗಲೂ ತನಗೇನು ವಿಷಾದವಿಲ್ಲ’ ಎಂದು ಹೇಳಿದ್ದರು.

ಇಡೀ ದೇಶದ ಕೆಂಗಣ್ಣಿಗೆ ಗುರಿಯಾಗಿದ್ದ ವಕೀಲ

ಉತ್ತರ ಪ್ರದೇಶದ ಲಖನೌ ವಿಶ್ವವಿದ್ಯಾಲಯದಲ್ಲಿ ಪದವಿ ಪೂರ್ಣಗೊಳಿಸಿದ ವಕೀಲ ಎ.ಪಿ ಸಿಂಗ್‌ ಅವರು, 1997ರಿಂದಲೂ ಸುಪ್ರೀಂ ಕೋರ್ಟ್‌ನಲ್ಲಿ ವಕೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಾಲ್ವರು ನಿರ್ಭಯಾ ದೋಷಿಗಳ ಪೈಕಿ ಮುಕೇಶ್‌ ಕುಮಾರ್‌ ಹೊರತುಪಡಿಸಿ ಮೂವರನ್ನು ಪ್ರತಿನಿಧಿಸುತ್ತಿದ್ದ ಎ.ಪಿ ಸಿಂಗ್‌ ಅವರು, ನ್ಯಾಯಾಲಯಗಳಲ್ಲಿ ವಾದ ಮಂಡಿಸಲು ನಿಂತರೆ ಕೆಲವು ಸಂದರ್ಭಗಳಲ್ಲಿ ಅವರ ಎದುರಾಳಿಗಳು ಈ ನಾಲ್ವರು ದೋಷಿಗಳ ಜೊತೆಗೆ ಎ.ಪಿ ಸಿಂಗ್‌ ಅವರನ್ನು ಸೇರಿಸಿ ಗಲ್ಲಿಗೇರಿಸಬೇಕು ಎಂಬುಷ್ಟರ ಮಟ್ಟಿಗೆ ಬೇಸತ್ತುಕೊಂಡಿದ್ದರು.

ಅಲ್ಲದೆ, ದೆಹಲಿ ಹೈಕೋರ್ಟ್‌ನಿಂದ ಖಂಡನೆ ಹಾಗೂ ಬಾರ್‌ ಕೌನ್ಸಿಲ್‌ಗಳ ಎಚ್ಚರಿಕೆಗಳನ್ನೂ ಕಡೆಗಣಿಸಿ ನಾಲ್ವರು ದೋಷಿಗಳನ್ನು ಪಾರು ಮಾಡಲು ಎ.ಪಿ ಸಿಂಗ್‌ ಅವರು ಹೋರಾಟಕ್ಕಿಳಿದಿದ್ದರು. 2013ರಲ್ಲಿ ಸಾಕೇತ್‌ ನ್ಯಾಯಾಲಯದಲ್ಲಿ ನಿರ್ಭಯಾ ಪ್ರಕರಣದ ನಾಲ್ವರು ಆರೋಪಿಗಳು ದೋಷಿಗಳೆಂದು ತೀರ್ಪು ನೀಡಿದಾಗ, ಆಕ್ರೋಶಗೊಂಡಿದ್ದ ಎ.ಪಿ ಸಿಂಗ್‌ ಅವರು ನ್ಯಾಯಾಲಯದಲ್ಲಿ ನ್ಯಾಯಾಧೀಶರ ಮೇಲೆಯೇ ದಾಳಿ ಮಾಡಿದ್ದರು. ಅಲ್ಲದೆ, ಮಾಧ್ಯಮಗಳ ವಿರುದ್ಧವೂ ಕಿಡಿಕಾರಿದ್ದರು.

ಎ.ಪಿ ಸಿಂಗ್‌ ಮತ್ತೆ ಕೀಳು ಹೇಳಿಕೆ

ನಿರ್ಭಯಾ ಅತ್ಯಾಚಾರಿಗಳನ್ನು ರಕ್ಷಿಸಿಕೊಳ್ಳಲಾಗದ ಕ್ರಿಮಿನಲ್‌ ವಕೀಲ ಎ.ಪಿ ಸಿಂಗ್‌, ಕಡೆಯ ಹಂತದಲ್ಲೂ ನಿರ್ಭಯಾ ಸಂತ್ರಸ್ತೆ ವಿರುದ್ಧ ಮತ್ತೆ ಕೀಳು ಅಭಿರುಚಿಯ ಹೇಳಿಕೆ ನೀಡಿದ್ದಾರೆ. ಶುಕ್ರವಾರ ಬೆಳಗ್ಗೆ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಈ ಹಿಂದೆ ಕೋರ್ಟ್‌ನಲ್ಲಿ ವಿಚಾರಣೆ ವೇಳೆ ತಾನು ಪ್ರಸ್ತಾಪಿಸಿದ್ದ ಅಂಶಗಳನ್ನು ಮತ್ತೆ ಪ್ರಸ್ತಾಪಿಸಿ ‘ಆ ರಾತ್ರಿ ಹೊತ್ತಿನಲ್ಲಿ ತನ್ನ ಜೊತೆಗಿದ್ದ ಹುಡುಗನೊಂದಿಗೆ ಆಕೆ(ನಿರ್ಭಯಾ) ಏನು ಮಾಡುತ್ತಿದ್ದಳು ಎಂಬ ಪ್ರಶ್ನೆಯನ್ನು ಆಕೆ ತಾಯಿಗೆ ಕೇಳಬಾರದೇ? ಇದು ಪ್ರಕರಣದ ಸಾಕ್ಷಿಯ ಭಾಗವಷ್ಟೇ.

ಅವರು ಅಣ್ಣ-ತಂಗಿಯ ಸಂಬಂಧ ಹೊಂದಿದ್ದರು ಅಥವಾ ರಾಖಿ ಸಂಭ್ರಮಕ್ಕೆ ಹೋಗಿದ್ದರು ಎನ್ನಲಾಗದು. ಬಾಯ್‌ಫ್ರೆಂಡ್‌ ಅಥವಾ ಗಲ್‌ರ್‍ಫ್ರೆಂಡ್‌ ಎಂಬುದು ಅವರ ಸಮಾಜದ ಪ್ರಶಂಸನೀಯವಾಗಿರಬಹುದು. ಆದರೆ, ಇದು ನಾನು ಬಂದಿರುವ ಸಂಸ್ಕೃತಿಯಲ್ಲಿ ಇಲ್ಲ’ ಎಂದಿದ್ದಾರೆ. ಅಲ್ಲದೆ, ನಾಲ್ವರು ಅಮಾಯಕರ ಗಲ್ಲು ಶಿಕ್ಷೆಗೆ ತಡೆ ನೀಡಲು ಅಸಾಧ್ಯವಾದರೆ, ಅವರ ಜೊತೆಗೆ ನನ್ನನ್ನೂ ಗಲ್ಲಿಗೇರಿಸಿ ಎಂದು ಸುಪ್ರೀಂ ಕೋರ್ಟ್‌ಗೆ ಒತ್ತಾಯಿಸಿದ್ದಾರೆ.