ಪುಣೆ(ಜ.17): ಕೋವಿಡ್‌ ಲಸಿಕೆಯ ಸುರಕ್ಷತೆ, ದಕ್ಷತೆ ಮತ್ತು ಅದರ ಬಗೆಗಿನ ಅಪನಂಬಿಕೆಗಳನ್ನು ಹೋಗಲಾಡಿಸುವ ಉದ್ದೇಶದಿಂದ ವಿಶ್ವ ಅತಿ ದೊಡ್ಡ ಔಷಧ ತಯಾರಿಕಾ ಸಂಸ್ಥೆ ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾದ ಸಿಇಒ ಅದಾರ್‌ ಪೂನಾವಾಲಾ ಅವರು ಶನಿವಾರ ಕೋವಿಶೀಲ್ಡ್‌ ಲಸಿಕೆ ಪಡೆದರು.

ತಾವು ಲಸಿಕೆ ಪಡೆದ ವಿಡಿಯೋವನ್ನು ಟ್ವೀಟರ್‌ನಲ್ಲಿ ಹಂಚಿಕೊಂಡಿರುವ ಪೂನಾವಾಲ ಅವರು, ‘ವಿಶ್ವದ ಅತಿ ದೊಡ್ಡ ಕೋವಿಡ್‌ ಲಸಿಕೆ ಅಭಿಯಾನ ಆರಂಭಿಸಿರುವ ಭಾರತ ಮತ್ತು ಪ್ರಧಾನಿ ಮೋದಿ ಅವರಿಗೆ ದೊಡ್ಡ ಯಶಸ್ಸು ಸಿಗಲಿ. ಈ ಐತಿಹಾಸಿಕ ಪ್ರಯತ್ನದಲ್ಲಿ ‘ಕೋವಿಶೀಲ್ಡ್‌’ ಲಸಿಕೆಯೂ ಭಾಗಿಯಾಗಿರುವುದು ನಮಗೆ ಹೆಮ್ಮೆ. ಲಸಿಕೆಯ ಸುರಕ್ಷತೆ ಮತ್ತು ದಕ್ಷತೆಯ ಬಗ್ಗೆ ಭರವಸೆ ನೀಡುವ ಸಲುವಾಗಿ ಸ್ವತಃ ಲಸಿಕೆ ಪಡೆದಿದ್ದೇನೆ’ ಎಂದು ಹೇಳಿದ್ದಾರೆ.

ಕೋವಿಶೀಲ್ಡ್‌ ಲಸಿಕೆಯನ್ನು ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾಜೆನೆಕಾ ಕಂಪನಿ ಜಂಟಿಯಾಗಿ ಅಭಿವೃದ್ಧಿಪಡಿಸಿದ್ದು, ಪುಣೆಯ ಸೀರಂ ತಯಾರಿಸಿದೆ.