* ಗುಜರಾತ್‌ ಎಟಿಎಸ್‌ ಡಿಐಜಿ ನೇತೃತ್ವದ ಎಸ್‌ಐಟಿ ತನಿಖೆ* ಗೋಧ್ರೋತ್ತರ ಗಲಭೆ ಕುರಿತು ಸುಳ್ಳ ಸಾಕ್ಷ್ಯ: ತೀಸ್ತಾ ಬಂಧನ* ಪಿತೂರಿಯಲ್ಲಿ ಇನ್ನಷ್ಟುಜನರು ಭಾಗಿಯಾಗಿರುವ ಶಂಕೆ 

ಅಹಮದಾಬಾದ್‌(ಜೂ.27): ಗುಜರಾತ್‌ ಹತ್ಯಾಕಾಂಡದ ಹೋರಾಟ ನಡೆಸುತ್ತಿದ್ದ ಮಾನವಹಕ್ಕು ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್‌ ಅವರನ್ನು ಗುಜರಾತಿನ ಕ್ರೈಂ ಬ್ರಾಂಚ್‌ ಭಾನುವಾರ ಬಂಧಿಸಿದೆ.

ಗಲಭೆಯ ಕುರಿತು ಸುಳ್ಳು ದಾಖಲೆ ಸೃಷ್ಟಿಮಾಡಿದ ಆರೋಪದ ಮೇಲೆ ಶನಿವಾರ ಮುಂಬೈ ನಿವಾಸದಿಂದ ತೀಸ್ತಾ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಬಳಿಕ ಗುಜರಾತ್‌ ಎಸ್‌ಐಟಿ ಅವರನ್ನು ಅಹಮದಾಬಾದ್‌ಗೆ ಕರೆ ತಂದಿತ್ತು. ಭಾನುವಾರ ತೀಸ್ತಾ ಬಂಧನಕ್ಕೆ ಒಳಗಾಗಿದ್ದಾರೆ.

ಗುಜರಾತಿನ ಎಟಿಎಸ್‌ ಡಿಐಜಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ತೀಸ್ತಾ ಸೆಟಲ್ವಾಡ್‌ ಹಾಗೂ ಮಾಜಿ ಐಪಿಎಸ್‌ ಅಧಿಕಾರಿ ಆರ್‌.ಬಿ. ಶ್ರೀಕುಮಾರ್‌ ಅವರು ಗುಜರಾತ್‌ ಹತ್ಯಾಕಾಂಡದ ಘಟನೆಯ ಕುರಿತು ಸುಳ್ಳು ಸಾಕ್ಷ್ಯ ಸೃಷ್ಟಿಸಿದ ಪ್ರಕರಣದ ತನಿಖೆ ನಡೆಸಲಿದೆ.

ಗುಜರಾತ್‌ ಭಯೋತ್ಪಾದನಾ ನಿಗ್ರಹ ದಳದ ಡಿಐಜಿ ದೀಪನ್‌ ಭದ್ರನ್‌ ಹಾಗೂ ಅಹಮದಾಬಾದ್‌ ಕ್ರೈಂ ಬ್ರಾಂಚ್‌ ಡಿಸಿಪಿ, ಗುಜರಾತ್‌ ಎಟಿಎಸ್‌ನ ಪೊಲೀಸ್‌ ಸೂಪರಿಂಟೆಂಡೆಂಟ್‌ ಹಾಗೂ ಇಬ್ಬರು ಸದಸ್ಯರನ್ನು ತನಿಖಾ ತಂಡ ಒಳಗೊಳ್ಳಲಿದೆ.

‘ಪ್ರಕರಣದ ತನಿಖೆಯು ಮುಂದುವರೆದಿದ್ದು, ತನಿಖಾ ಆಯೋಗ, ಎಸ್‌ಐಟಿ, ವಿವಿಧ ನ್ಯಾಯಾಲಯಗಳ ಎದುರು ಆರೋಪಿಗಳು ಸಲ್ಲಿಸಿದ ದಾಖಲೆಯನ್ನು ಸಂಗ್ರಹಿಸಲಾಗುತ್ತಿದೆ. ಕ್ರಿಮಿನಲ್‌ ಪಿತೂರಿಯಲ್ಲಿ ಇನ್ನಷ್ಟುಜನರು ಭಾಗಿಯಾಗಿರುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗುತ್ತಿದೆ. ಬಂಧಿತ ಸೆಟಲ್ವಾಡ್‌ ಹಾಗೂ ಶ್ರೀಕುಮಾರ್‌ ಇಬ್ಬರೂ ಆರೋಪಿಗಳು ತನಿಖೆಗೆ ಸಹಕರಿಸುತ್ತಿಲ್ಲ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಂದಿನ ಗುಜರಾತ್‌ನ ಮೋದಿ ಸರ್ಕಾರದ ವಿರುದ್ಧ ಆರೋಪಿಸಿದ ಮಾಜಿ ಐಪಿಎಸ್‌ ಅಧಿಕಾರಿ ಶ್ರೀಕುಮಾರ್‌, ಸಂಜೀವ್‌ ಭಟ್‌ ಅವರ ವಿರುದ್ಧವೂ ಶನಿವಾರ ಪ್ರಕರಣ ದಾಖಲಿಸಲಾಗಿದ್ದು, ಶ್ರೀಕುಮಾರ್‌ ಅವರನ್ನು ಬಂಧಿಸಲಾಗಿತ್ತು. ಭಟ್‌ ಈಗಾಗಲೇ ಇನ್ನೊಂದು ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.