* ಸೋಂಕು ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಿ* 8 ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯದ ಸೂಚನೆ* ಈ ರಾಜ್ಯಗಳ ಕೆಲ ಜಿಲ್ಲೆಗಳಲ್ಲಿ ಶೇ.10ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ

ನವದೆಹಲಿ(ಜು.09): ಹಲವು ಜಿಲ್ಲೆಗಳಲ್ಲಿ ಕೊರೋನಾ ಪಾಸಿಟಿವಿಟಿ ದರ ಅಧಿಕ ಪ್ರಮಾಣದಲ್ಲಿ ದಾಖಲಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರ, ಸೋಂಕು ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ. ಈ ಸಂಬಂಧ ಅರುಣಾಚಲ ಪ್ರದೇಶ, ಮಣಿಪುರ, ಕೇರಳ, ಅಸ್ಸಾಂ, ಮೇಘಾಲಯ, ತ್ರಿಪುರಾ, ಒಡಿಶಾ ಮತ್ತು ಸಿಕ್ಕಿಂ ರಾಜ್ಯಗಳಿಗೆ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಪತ್ರ ಬರೆದಿದ್ದಾರೆ.

ದೇಶದಲ್ಲಿ ಕೊರೋನಾ 2ನೇ ಅಲೆ ಇಳಿಕೆ ಆಗುತ್ತಿರುವ ಹೊರತಾಗಿಯೂ ಈ ಎಂಟು ರಾಜ್ಯಗಳ ಬಹುತೇಕ ಜಿಲ್ಲೆಗಳಲ್ಲಿ ಶೇ.10ಕ್ಕಿಂತಲೂ ಅಧಿಕ ಪಾಸಿಟಿವಿಟಿ ದರ ದಾಖಲಾಗುತ್ತಿದೆ. ಹೀಗಾಗಿ ಪ್ರತಿಯೊಂದು ಜಿಲ್ಲೆಯಲ್ಲಿ ವಾರದ ಪಾಸಿಟಿವಿಟಿ ಪ್ರಮಾಣದ ಮೇಲೆ ನಿಗಾ ಇಡಬೇಕು. ಸೋಂಕು ಏರಿಕೆ ಆಗುತ್ತಿದ್ದರೆ ಅದನ್ನು ಆರಂಭದಲ್ಲೇ ಗುರುತಿಸಬೇಕು ಎಂದು ರಾಜ್ಯ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಲಾಗಿದೆ.

ಇದೇ ವೇಳೆ ಅರುಣಾಚಲ ಪ್ರದೇಶದ ಮುಖ್ಯ ಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲಿ, ರಾಜ್ಯದ 25 ಜಿಲ್ಲೆಗಳ ಪೈಕಿ 19 ಜಿಲ್ಲೆಗಳಲ್ಲಿ ಪಾಸಿಟಿವಿಟಿ ಪ್ರಮಾಣ ಶೇ.10ಕ್ಕೂ ಹೆಚ್ಚು ದಾಖಲಾಗುತ್ತಿದೆ. ರಾಜ್ಯದಲ್ಲಿ ಜೂ.28ರಿಂದ ಜು.4ರ ಅವಧಿಯಲ್ಲಿ ವಾರದ ಪಾಸಿಟಿವಿಟಿ ಪ್ರಮಾಣ ಶೇ.16.2ರಷ್ಟಿದೆ. ಕಳೆದ ನಾಲ್ಕು ವಾರಗಳಿಂದ ಪಾಸಿಟಿವಿಟಿ ದರ ಏರಿಕೆ ಆಗುತ್ತಿದೆ ಎಂಬುದನ್ನು ಭೂಷಣ್‌ ಉಲ್ಲೇಖಿಸಿದ್ದಾರೆ.

ಅಸ್ಸಾಂನ 33 ಜಿಲ್ಲೆಗಳ ಪೈಕಿ 29 ಜಿಲ್ಲೆಗಳಲ್ಲಿ ಕಳೆದ ವಾರ 100ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿರುವುದು ಕಳವಳಕಾರಿ ಆಗಿದೆ ಎಂದು ಭೂಷಣ್‌ ಅಸ್ಸಾಂ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.