ನವದೆಹಲಿ(ಮೇ.18): ರಾಷ್ಟ್ರಪತಿ ಭವನಕ್ಕೆ 3ನೇ ಬಾರಿ ಕೊರೋನಾ ವೈರಸ್‌ ಆತಂಕ ಸೃಷ್ಟಿಯಾಗಿದೆ. ಭವನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಪೊಲೀಸ್‌ ಆಯುಕ್ತರೊಬ್ಬರಿಗೆ (ಎಸಿಪಿ) ಕೊರೋನಾ ಸೋಂಕು ತಗುಲಿದೆ. ಹೀಗಾಗಿ ಅವರನ್ನು ದಿಲ್ಲಿಯ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.

ಈ ನಡುವೆ, ಮುಂಜಾಗ್ರತಾ ಕ್ರಮವಾಗಿ ಎಸಿಪಿ ಜತೆ ಸಂಪರ್ಕದಲ್ಲಿದ್ದ ಹಲವಾರು ಪೊಲೀಸ್‌ ಸಿಬ್ಬಂದಿ ಹಾಗೂ ರಾಷ್ಟ್ರಪತಿ ಭವನದ ಸಿಬ್ಬಂದಿಯನ್ನು ಕ್ವಾರಂಟೈನ್‌ಗೆ (ಏಕಾಂತ ವಾಸ) ಒಳಪಡಿಸಲಾಗಿದೆ. ರಾಷ್ಟ್ರಪತಿ ಭವನ ಕಟ್ಟಡದ ಒಳಗೇ ಈ ಎಸಿಪಿ ಕೆಲಸ ಮಾಡುತ್ತಾರೆ. ಹೀಗಾಗಿಯೇ ಭವನದಲ್ಲಿ ಇರುವವರಿಗೆ ಇದು ಆತಂಕ ಉಂಟು ಮಾಡಿದೆ. ಅಂದಹಾಗೆ ಭವನಕ್ಕೆ ಕೊರೋನಾ ಭೀತಿ ಉಂಟಾಗಿರುವುದು ಇದು 3ನೇ ಸಲ.

ಮೊದಲ ಸಲ, ಸೋಂಕಿತ ಗಾಯಕಿ ಕನಿಕಾ ಕಪೂರ್‌ ಜತೆ ಸಂಪರ್ಕಕ್ಕೆ ಬಂದಿದ್ದ ಬಿಜೆಪಿ ಸಂಸದ ದುಷ್ಯಂತ ಸಿಂಗ್‌ ಅವರು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರನ್ನು ಭೇಟಿಯಾದಾಗ ಆತಂಕ ಸೃಷ್ಟಿಆಗಿತ್ತು. ಆಗ ಕೋವಿಂದ್‌ ಅವರು 14 ದಿನಗಳ ಸ್ವಯಂ ಏಕಾಂತವಾಸ ಘೋಷಿಸಿಕೊಂಡಿದ್ದರು. ಇದಾದ ಬಳಿಕ ರಾಷ್ಟ್ರಪತಿ ಭವನದ ಆವರಣದ ಕ್ವಾರ್ಟರ್ಸ್‌ನಲ್ಲಿದ್ದ ಮಹಿಳೆಯೊಬ್ಬರಿಗೆ ಸೋಂಕು ತಾಗಿದ್ದರಿಂದ, ಅಲ್ಲಿದ್ದ 125 ಮನೆಗಳ ಜನರನ್ನು ಕ್ವಾರಂಟೈನ್‌ ಮಾಡಲಾಗಿತ್ತು.