ರಾಜಸ್ಥಾನದ ಎಸಿಬಿ ಡಿಸಿಪಿ ಭೈರುಲಾಲ್ ಮೀನಾ, ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನದಂದೇ ಭ್ರಷ್ಟಾಚಾರದ ವಿರುದ್ಧ ಭಾಷಣ ಮಾಡಿದ್ದರು. ಆದರೆ, ಭಾಷಣ ಮುಗಿದ ಒಂದು ಗಂಟೆಯಲ್ಲೇ ₹80,000 ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು.
ಭ್ರಷ್ಟಾಚಾರ ವಿರೋಧಿ ಭಾಷಣ ಮಾಡಿ ಗಂಟೆಯೊಳಗೆ ಲಂಚದೊಂದಿಗೆ ಸಿಕ್ಕಿಬಿದ್ದಿದ್ದ ಎಸಿಬಿ ಅಧಿಕಾರಿ
ಜೈಪುರ: ಇದು 2020ರಲ್ಲಿ ನಡೆದ ಘಟನೆ ಆದರೆ ಕೆಲವು ಉನ್ನತ ಹುದ್ದೆಯಲ್ಲಿರುವ ಜನ ಹೇಗೆ ಮುಖವಾಡ ಹಾಕ್ತಾರೆ ಎಂಬುದಕ್ಕೆ ಈ ಘಟನೆ ಉದಾಹರಣೆಯಾಗಿದ್ದು, ಮತ್ತೆ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಸಾಮಾನ್ಯವಾಗಿ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಕೆಲಸ ಮಾಡಬೇಕಾದವರು ಶುದ್ಧಹಸ್ತರಾಗಿರ್ತಾರೆ ಎಂಬುದು ಜನರ ನಂಬಿಕೆ. ಹೀಗಾಗಿಯೇ ಅವರನ್ನು ಜನರಿಗೆ ಸ್ಪೂರ್ತಿ ತುಂಬುವುದಕ್ಕೆ ಕಾರ್ಯಕ್ರಮಗಳಿಗೆ ಕರೆಯಿಸಿ ಅವರಿಂದ ಭಾಷಣ ಮಾಡಿಸಲಾಗುತ್ತದೆ. ಅವರ ಅನುಭವಗಳನ್ನು ಕೇಳಲಾಗುತ್ತದೆ. ಆದರೆ ಅಲ್ಲೂ ಭ್ರಷ್ಟಾಚಾರ ತುಂಬಿರುತ್ತದೆ ಅವರೂ ಕೂಡ ಶುದ್ಧಹಸ್ತರಾಗಿರಲ್ಲ ಎಂಬುದಕ್ಕೆ 2020ರಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ.
ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನವೇ ಸಿಕ್ಕಿಬಿದ್ದಿದ್ದ ಎಸಿಬಿ ಅಧಿಕಾರಿ
ರಾಜಸ್ಥಾನದ ಭ್ರಷ್ಟಾಚಾರ ವಿರೋಧಿ ದಳದ(ACB) ಡಿಸಿಪಿ ಆಗಿದ್ದ ಭೈರುಲಾಲ್ ಮೀನಾ ಅವರು ಭ್ರಷ್ಟಾಚಾರ ನಿಯಂತ್ರಿಸಬೇಕಾದ ಕರ್ತವ್ಯದಲ್ಲಿದ್ದಾಗಲೇ ಲಂಚ ಪಡೆದು ಸಿಕ್ಕಿಬಿದ್ದಂತಹ ಘಟನೆ ನಡೆದಿತ್ತು. ರಾಜಸ್ತಾನದ ಸವಾಯಿ ಮಧೋಪುರದ ಭ್ರಷ್ಟಾಚಾರ ವಿರೋಧಿ ದಳದಲ್ಲಿ ಕೆಲಸ ಮಾಡುತ್ತಿದ್ದ ಅವರು 80 ಸಾವಿರ ರೂಪಾಯಿ ಲಂಚ ಸ್ವೀಕರಿಸುವ ವೇಳೆ ಸಿಕ್ಕಿ ಬಿದ್ದಿದ್ದರು. ಆದರೆ ವಿಚಿತ್ರ ಎಂದರೆ ಅಂದು ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನವಾಗಿತ್ತು ಹಾಗೂ ಇನ್ನೂ ದಿಗ್ಭ್ರಮೆಗೊಳಿಸುವ ವಿಚಾರ ಎಂದರೆ ಆ ಕಾರ್ಯಕ್ರಮದಲ್ಲಿ ಅವರು ಭ್ರಷ್ಟಾಚಾರವನ್ನು ನಿಯಂತ್ರಿಸುವ ಬಗ್ಗೆ ಸಾರ್ವಜನಿಕವಾಗಿ ಭಾಷಣ ಮಾಡಿದ್ದರು. ಈ ಭಾಷಣ ಮಾಡಿ ಒಂದು ಗಂಟೆಯಲ್ಲೇ ಅವರು 80,00 ಲಂಚ ಸ್ವೀಕರಿಸುವ ವೇಳೆ ಸಿಕ್ಕಿಬಿದ್ದು ಎಲ್ಲರನ್ನು ದಿಗ್ಭ್ರಮೆಗೊಳಿಸಿದ್ದರು.
ಭ್ರಷ್ಟಾಚಾರ ಕಂಡು ಬಂದರೆ ಎಸಿಬಿ ಸಹಾಯವಾಣಿಗೆ ಕರೆ ಮಾಡುವಂತೆ ಹೇಳಿದ್ದ ಭ್ರಷ್ಟ ಭೈರುಲಾಲ್
ತಮ್ಮ ಭಾಷಣದಲ್ಲಿ ಅವರು ಸಾರ್ವಜನಿಕರಿಗೆ ಭ್ರಷ್ಟಾಚಾರದ ವಿರುದ್ಧ ಹೋರಾಡುವಂತೆ ಹಾಗೂ ಎಲ್ಲಾದರೂ ಭ್ರಷ್ಟಾಚಾರ ಕಂಡು ಬಂದಲ್ಲಿ ಎಸಿಬಿಯ ಸಹಾಯವಾಣಿ 1064ಕ್ಕೆ ಕರೆ ಮಾಡುವಂತೆಯೂ ಅವರು ಸೂಚಿಸಿದ್ದರು. ಆದರೆ ಇದಾಗಿ ಒಂದು ಗಂಟೆಯೊಳಗೆ ಅವರು ಜಿಲ್ಲಾ ಸಾರಿಗೆ ಅಧಿಕಾರಿ ಮುಕೇಶ್ ಚಾಂದ್ ಅವರಿಂದ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದರು. ಸ್ವತಃ ಜೈಪುರದ ಎಸಿಬಿ ತಂಡ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿತ್ತು.
ಟ್ರಾನ್ಸ್‌ಫೋರ್ಟ್ ಅಧಿಕಾರಿಗೆ ಪ್ರತಿ ತಿಂಗಳು ಲಂಚನೆ ಪೀಡನೆ
ಆಗ ಮಾತನಾಡಿದ ಎಸಿಬಿ ಮುಖ್ಯಸ್ಥ ಬಿ ಎಲ್ ಸೋನಿ, ಭೈರುಲಾಲ್ ಮೀನಾಗೆ ಸವಾಯ್ ಮದೋಪುರದ ಎಸಿಬಿ ಹೊರಠಾಣೆಯ ಜವಾಬ್ದಾರಿಯನ್ನು ನೀಡಲಾಗಿತ್ತು. ಆದರೆ ಭ್ರಷ್ಟಾಚಾರ ನಿಯಂತ್ರಿಸುವ ಬದಲು ಅವರು ಜಿಲ್ಲಾ ಟ್ರಾನ್ಸ್‌ಪೋರ್ಟ್ ಅಧಿಕಾರಿ ಮುಕೇಶ್ ಚಾಂದ್ ಅವರಿಗೆ ಹಣಕ್ಕಾಗಿ ಪ್ರತಿ ತಿಂಗಳು ಪೀಡಿಸುತ್ತಿದ್ದರು ಎಂದು ಹೇಳಿದ್ದಾರೆ.
ಭೈರುಲಾಲ್ ಬಲೆಗೆ ಬೀಳುವುದಕ್ಕೆ ಎರಡು ಮೂರು ತಿಂಗಳ ಮೊದಲೇ ಅವರ ವಿರುದ್ಧ ಎಸಿಬಿಗೆ ದೂರುಗಳು ನಿರಂತರವಾಗಿ ಬಂದಿದ್ದವು. ಈ ಪ್ರಕರಣದಲ್ಲಿ ಲಂಚ ನೀಡುತ್ತಿದ್ದ ಮುಖೇಶ್ ಚಾಂದ್ ನನ್ನು ಸಹ ಬಂಧಿಸಲಾಗಿದೆ. ಏಕೆಂದರೆ ಲಂಚ ನೀಡುವುದು ಮತ್ತು ಸ್ವೀಕರಿಸುವುದು ಎರಡೂ ಕೂಡ ಭ್ರಷ್ಟಾಚಾರ ತಡೆ ಕಾಯ್ದೆಯಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. ಈ ಪ್ರಕರಣವು ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ದೀಪದ ಕೆಳಗೆ ಕತ್ತಲು ಎಂಬಂತೆ ಇದು ಭ್ರಷ್ಟಾಚಾರ ನಿಗ್ರಹ ಸಂಸ್ಥೆಗಳೊಳಗೆ ಹಾಸು ಹೊಕ್ಕಾಗಿರುವ ಭ್ರಷ್ಟಾಚಾರದ ಆಳವನ್ನು ಈ ಘಟನೆ ಎತ್ತಿ ತೋರಿಸುತ್ತಿದೆ.
ಇದನ್ನೂ ಓದಿ: ಅಯ್ಯಪ್ಪ ಮಾಲೆ ಧರಿಸಿ ಬಂದ ಬಾಲಕನಿಗೆ ಪ್ರವೇಶ ನಿರಾಕರಿಸಿದ ಶಾಲೆ
ಇದನ್ನೂ ಓದಿ: ಮದ್ವೆ ಆದ ಪ್ರಿಯತಮೆಯ ಮೇಲೆ ಕಣ್ಣಿಡಲು ಆಕೆಯ ಮನೆ ಹಿಂದೆಯೇ ಸಿಸಿಟಿವಿ ಫಿಕ್ಸ್ ಮಾಡಿದ ಭಗ್ನಪ್ರೇಮಿ
