ಜೈಪುರ[ಫೆ.09]: ಭಗವದ್ಗೀತೆ ಬಗ್ಗೆ ಹರೇ ಕೃಷ್ಣ ಮಿಷನ್‌ ಹಾಗೂ ಅಕ್ಷಯ ಪಾತ್ರೆ ಪ್ರತಿಷ್ಠಾನ ಆಯೋಜಿಸಿದ್ದ ಕ್ವಿಝ್‌ ಸ್ಪರ್ಧೆಯಲ್ಲಿ ಮುಸ್ಲಿಂ ವಿದ್ಯಾರ್ಥಿಯೊಬ್ಬ ಪ್ರಥಮ ಸ್ಥಾನ ಪಡೆದು ಅಚ್ಚರಿ ಮೂಡಿಸಿದ್ದಾನೆ. ಒಟ್ಟು 5000 ವಿದ್ಯಾರ್ಥಿಗಳು ಭಾಗವಹಿಸಿದ್ದ ಸ್ಪರ್ಧೆಯಲ್ಲಿ 9ನೇ ತರಗತಿಯ ವಿದ್ಯಾರ್ಥಿಯಾಗಿರುವ ಅಬ್ದುಲ್‌ ಕಗ್ಝಿ (16) ಮೊದಲ ಸ್ಥಾನ ಪಡೆದಿದ್ದಾನೆ.

ಸಂಸ್ಕೃತ ಶ್ಲೋಕ ಹಾಗೂ ಅಧ್ಯಾಯಗಳ ಬಗ್ಗೆ ಅಬ್ದುಲ್‌ಗಿದ್ದ ಜ್ಞಾನ ನೋಡಿ ತೀರ್ಪುಗಾರರೇ ಅಚ್ಚರಿಗೊಂಡಿದ್ದಾರೆ. ಬಾಲ್ಯದಿಂದ ‘ಲಿಟಲ್‌ ಕೃಷ್ಣ’ ಕಾರ್ಟೂನು ಚಿತ್ರಗಳನ್ನು ನೋಡಿ, ಕೃಷ್ಣನಿಂದಲೇ ಎಲ್ಲಾ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಬಹುದೆಂದು ಅಬ್ದುಲ್‌ ನಂಬಿದ್ದ. ಬಳಿಕ ಮಥುರಾ ನಾತ್‌ ಬರೆದಿರುವ ಶ್ರೀ ಕೃಷ್ಣ ಕುರಿತ ಪುಸ್ತಕವನ್ನೂ ಓದಿದ್ದ. ಶುಕ್ರವಾರ ಪ್ರಶಸ್ತಿ ಸ್ವೀಕಾರಕ್ಕೆ ಹರೇ ಕೃಷ್ಣ ದೇಗುಲಕ್ಕೆ ಬಂದಾಗಲೂ ರಾಸ್‌ ಖಾನ್‌ ಬರೆದ ಶ್ಲೋಕಗಳನ್ನು ಹೇಳುತ್ತಿದ್ದ.

ತಂದೆ ಈ ಹಿಂದೆ ಕುರಾನ್‌ ಸ್ಪರ್ಧೆಯಲ್ಲೂ ಬಹುಮಾನ ಪಡೆದಿದ್ದ ಎಂದು ಹರೇ ಕೃಷ್ಣ ಕಲಾ ಶಿಕ್ಷಣ ಮುಖ್ಯಸ್ಥ ಸ್ವಾಮಿ ಸಿದ್ದ ಸ್ವರೂಪ ದಾಸ್‌ ಹೇಳಿದ್ದಾರೆ.

ಜೈಪುರದಲ್ಲಿ ದಿನಸಿ ಅಂಗಡಿ ಇಟ್ಟುಕೊಂಡಿದ್ದು, ನನ್ನ ನಂಬಿಕೆ ಹಾಗೂ ಆಚರಣೆಗಳಿಗೆ ಅವರು ಯಾವತ್ತೂ ಅಡ್ಡು ಪಡಿಸಿಲ್ಲ. ಹೆಚ್ಚಿನ ಆಧ್ಯಾತ್ಮಿಕ ವಿಚಾರಗಳನ್ನು ಮೊಬೈಲ್‌ ಮೂಲಕ ತಿಳಿದುಕೊಳ್ಳುತ್ತೇನೆ ಎಂದು ಅಬ್ದುಲ್‌ ಹೇಳಿದ್ದಾನೆ.

ಒಟ್ಟು 2 ಹಂತಗಳಲ್ಲಿ ಕ್ವಿಝ್‌ ನಡೆಸಲಾಗಿದ್ದು, ಸೆಪ್ಟೆಂಬರ್‌ನಲ್ಲಿ ನಡೆದ ಮೊದಲ ಹಂತದಲ್ಲಿ 50 ಶಾಲೆಯ ಮಕ್ಕಳು ಹಾಜರಾಗಿದ್ದರು. ಅವರಲ್ಲಿ 60 ಮಂದಿಯನ್ನು ಕೊನೆಯ ಹಂತಕ್ಕೆ ಆಯ್ಕೆ ಮಾಡಲಾಗಿತ್ತು.