ನವದೆಹಲಿ[ಫೆ.16]: ದೆಹಲಿ ವಿಧಾನಸಭೆ ಚುನಾವಣೆ ಗೆಲುವಿನ ಉತ್ಸಾಹದಲ್ಲಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷ ದೇಶದಲ್ಲೆಡೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ. ಈ ಮೂಲಕ ಪಕ್ಷವನ್ನು ದೆಹಲಿಯ ಹೊರಗೂ ವಿಸ್ತರಿಸುವ ಮಹತ್ವಾಕಾಂಕ್ಷಿ ಗುರಿಯನ್ನು ಅರವಿಂದ ಕೇಜ್ರಿವಾಲ್‌ ಹಾಕಿಕೊಂಡಿದ್ದಾರೆ.

ಭಾನುವಾರ ನಡೆಯುವ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷವನ್ನು ಇತರ ರಾಜ್ಯಗಳಿಗೂ ವಿಸ್ತರಿಸುವ ಕುರಿತು ಚರ್ಚಿಸಲಾಗುತ್ತದೆ. ‘ಧನಾತ್ಮಕ ರಾಷ್ಟ್ರೀಯತೆ’ ಮಂತ್ರದೊಂದಿಗೆ ನಾವು ಪಕ್ಷವನ್ನು ವಿಸ್ತರಿಸಲಿದ್ದೇವೆ. ಮಧ್ಯ ಪ್ರದೇಶ ಮತ್ತು ಗುಜರಾತ್‌ನಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷ ಸ್ಪರ್ಧೆ ಮಾಡಲಿದೆ. ಅಲ್ಲದೇ ಪಂಜಾಬ್‌ ಸೇರಿದಂತೆ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ನಿಟ್ಟಿನಲ್ಲಿಯೂ ಪಕ್ಷ ದೃಷ್ಟಿಹರಿಸಿದೆ. ಪಕ್ಷಕ್ಕೆ ಸೇರ್ಪಡೆ ಆಗಲು ಬಯಸುವವರು 9871010101 ನಂಬರ್‌ಗೆ ಮಿಸ್ಡ್‌ ಕಾಲ್‌ ನೀಡುವ ಮೂಲಕ ನಮ್ಮ ಪಕ್ಷಕ್ಕೆ ಸೇರ್ಪಡೆ ಆಗಬುದು ಎಂದು ಆಪ್‌ ಮುಖಂಡ ಗೋಪಾಲ್‌ ರಾಯ್‌ ತಿಳಿಸಿದ್ದಾರೆ.

ಆಮ್‌ ಆದ್ಮಿ ಪಕ್ಷ ದೆಹಲಿಯ ಹೊರಗೂ ಪಕ್ಷದ ಅಸ್ತಿತ್ವವನ್ನು ವಿಸ್ತರಿಸಲು ಯತ್ನಿಸಿದ್ದು ಇದೇ ಮೊದಲೇನೂ ಅಲ್ಲ. ಪಂಜಾಬ್‌ನಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿದ್ದ ಆಪ್‌ ಕೇವಲ 20 ಸ್ಥಾನಗಳನ್ನಷ್ಟೇ ಗೆದ್ದುಕೊಂಡಿತ್ತು. ಕಳೆದ ವರ್ಷ ಲೋಕಸಭೆ ಚುನಾವಣೆಯ ವೇಳೆ ದೆಹಲಿಯಲ್ಲಿ ಒಂದೇ ಒಂದು ಸ್ಥಾನವನ್ನೂ ಗೆಲ್ಲಲು ಸಾಧ್ಯವಾಗಿರಲಿಲ್ಲ.