ಮೇ ತಿಂಗಳಲ್ಲಿ ಜಿಎಸ್‌ಟಿ ಸಂಗ್ರಹವು ₹2.01 ಲಕ್ಷ ಕೋಟಿಗೆ ಏರಿಕೆಯಾಗಿದೆ ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.16.4 ರಷ್ಟು ಹೆಚ್ಚಳವಾಗಿದೆ. ಕರ್ನಾಟಕವು ₹14,299 ಕೋಟಿ ಸಂಗ್ರಹದೊಂದಿಗೆ ಎರಡನೇ ಸ್ಥಾನದಲ್ಲಿದೆ.

ಈ ಮೇ ತಿಂಗಳಲ್ಲಿ ಭರ್ಜರಿ ₹2ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ

ನವದೆಹಲಿ: ಆರ್ಥಿಕ ಬೆಳವಣಿಗೆಯಲ್ಲಿನ ನಿಧಾನಗತಿ ಹೊರತಾಗಿಯೂ ಕಳೆದ ವರ್ಷದ ಮೇಗೆ ಹೋಲಿಸಿದರೆ ಈ ವರ್ಷದ ಮೇ ತಿಂಗಳಲ್ಲಿ ಜಿಎಸ್‌ಟಿ (ಸರಕು-ಸೇವಾ ತೆರಿಗೆ) ಸಂಗ್ರಹ ಶೇ.16.4ರಷ್ಟು ಏರಿಕೆ ಕಂಡಿದೆ. ಒಟ್ಟಾರೆ 2.01 ಲಕ್ಷ ಕೋಟಿ ರು. ಸಂಗ್ರಹವಾಗಿದೆ. ಏಪ್ರಿಲ್ ತಿಂಗಳಲ್ಲಿ ದಾಖಲೆಯ 2.37 ಲಕ್ಷ ಕೋಟಿ ರು. ಜಿಎಸ್ಟಿ ಸಂಗ್ರಹವಾಗಿತ್ತು. ಅದಕ್ಕೆ ಹೋಲಿಸಿದರೆ ಈ ಸಲದ ಜಿಎಸ್ಟಿ ಕೊಂಚ ಕಡಿಮೆ.

ಆದರೂ ಮೇನ ದೇಶೀಯ ವಹಿವಾಟು ಮೂಲಕ ಸಂಗ್ರಹಿಸಿದ ಆದಾಯ ಶೇ.13.7ರಷ್ಟು ಏರಿ 1.50 ಲಕ್ಷ ಕೋಟಿ ರು. ತಲುಪಿದರೆ, ಆಮದು ವಹಿವಾಟಿನಿಂದ ಸಂಗ್ರಹಿಸಿದ ಜಿಎಸ್‌ಟಿ ಆದಾಯ ಶೇ.25.2ರಷ್ಟು ಏರಿ 51,266 ಕೋಟಿ ರು. ತಲುಪಿದೆ. ಮೇ ತಿಂಗಳಲ್ಲಿ ಜಿಎಸ್‌ಟಿ ಮೂಲಕ ಕೇಂದ್ರದಿಂದ 35,434 ಕೋಟಿ ರು, ರಾಜ್ಯದ ಮೂಲಕ 43,902 ಕೋಟಿ ರು. ಆದಾಯ ಸಂಗ್ರಹಿಸಲಾಗಿದೆ. ಇನ್ನು ಸಮಗ್ರ ಸರಕು ಸೇವಾ ತೆರಿಗೆ ಮೂಲಕ 1.09 ಕೋಟಿ ರು.ನಷ್ಟು ಆದಾಯ ಸಂಗ್ರಹ ಆಗಿದೆ. ಅದೇ ರೀತಿ ಸೆಸ್ ಮೂಲಕ 12,879 ಕೋಟಿ ರು. ಆದಾಯ ಸಂಗ್ರಹಿಸಲಾಗಿದೆ. ಕಳೆದ ವರ್ಷದ ಮೇ ತಿಂಗಳಲ್ಲಿ ಒಟ್ಟಾರ ಜಿಎಸ್‌ಟಿ ಸಂಗ್ರಹವು 1,72,739 ರು. ಆಗಿತ್ತು.

₹14299 ಕೋಟಿ ಜಿಎಸ್ಟಿ: ಕರ್ನಾಟಕ ಮತ್ತೆ ನಂ.2

ನವದೆಹಲಿ: ಮೇ ತಿಂಗಳ ಜಿಎಸ್‌ಟಿ ಸಂಗ್ರಹದಲ್ಲಿ ಕಳೆದ ಸಲದಂತೆ ಮತ್ತೆ ಕರ್ನಾಟಕ ದೇಶದಲ್ಲೇ 2ನೇ ಸ್ಥಾನ ಪಡೆದಿದೆ. ಟಾಪ್ 5 ರಾಜ್ಯಗಳಲ್ಲಿ ಮಹಾರಾಷ್ಟ್ರ ₹31,530 ಕೋಟಿ (2024ರ ಮೇ ಗಿಂತ 17% ಹೆಚ್ಚಳ) ಸಂಗ್ರಹದೊಂದಿಗೆ ಮೊದಲ ಸ್ಥಾನದಲ್ಲಿದ್ದರೆ,, ಕರ್ನಾಟಕ 14,299 ಕೋಟಿಯೊಂದಿಗೆ (20% ಹೆಚ್ಚಳ) 2ನೇ ಸ್ಥಾನ ಪಡೆದಿದೆ. 3, 4, 5ನೇ ಸ್ಥಾನದಲ್ಲಿ ಕ್ರಮವಾಗಿ ತಮಿಳುನಾಡು ₹12,230 ಕೋಟಿ, ಗುಜರಾತ್ ₹11,737 ಕೋಟಿ ಹಾಗೂ ದೆಹಲಿ ₹10,366 ಇದೆ.